

ಕಲಬುರಗಿ: ಕೋವಿಡ್-೧೯ ಸಂದರ್ಭದಲ್ಲಿ ಪ್ರಧಾನಮಂತ್ರಿ ಆತ್ಮ ನಿರ್ಭರ್ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರ ವಿಸ್ತರಿಸಿಕೊಳ್ಳಲು ಬ್ಯಾಂಕ್ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಕಿರು ಸಾಲ ಸೌಲಭ್ಯ ಕಲ್ಪಿಸಿಕೊಡಲಾಗಿದ್ದು, ಎಲ್ಲಾ ಬೀದಿ ಬದಿ ವ್ಯಾಪಾರಿಗಳು, ಹಾಲು ಮಾರಾಟಗಾರರು ಹಾಗೂ ಪತ್ರಿಕೆ ವಿತರಕರು ಈ ಸೌಲಭ್ಯ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.
ಬೀದಿ ಬದಿ ವ್ಯಾಪಾರಿಗಳ ಆರ್ಥಿಕ ಸುಭದ್ರತೆಗಾಗಿ ೩ ಕಂತುಗಳಲ್ಲಿ ಸಾಲ ಸೌಲಭ್ಯ ಕಲ್ಪಿಸಲಾಗುವುದು. ಮೊದಲ ಕಂತಿನಲ್ಲಿ ೧೦,೦೦೦ ರೂ. ನೀಡಲಾಗುವುದು, ೧೨ ತಿಂಗಳ ಅವಧಿಯಲ್ಲಿ ಮರು ಪಾವತಿ ಮಾಡಿದಲ್ಲಿ ೨೦,೦೦೦ ರೂ. ನೀಡಲಾಗುವುದು. ಇದನ್ನು ೧೮ ತಿಂಗಳಲ್ಲಿ ಮರು ಪಾವತಿ ಮಾಡಿದಲ್ಲಿ ೫೦,೦೦೦ ರೂ. ಸಾಲ ಸೌಲಭ್ಯ ನೀಡಲಾಗುತ್ತದೆ. ಈ ಯೋಜನೆಯಡಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ ಫಲಾನುಭವಿಗಳು ತಾವು ಅರ್ಜಿ ಸಲ್ಲಿಸಿದ ಬ್ಯಾಂಕ್‌ಗಳಿಗೆ ಭೇಟಿ ನೀಡಿ, ಅಗತ್ಯ ದಾಖಲೆ ನೀಡಿ ಸಾಲ ಪಡೆದುಕೊಳ್ಳಬೇಕು. ಜತೆಗೆ ವ್ಯಾಪಾರದ ಅನೂಕೂಲಕ್ಕಾಗಿ ಕ್ಯೂಆರ್ ಕೋಡ್ ಮಾಡಿಸಿಕೊಳ್ಳಬೇಕು. ನಗರ ಸ್ಥಳೀಯ ಸಂಸ್ಥೆಗಳಿAದ ಕೈಗೊಳ್ಳಲಾಗುವ ಸಮೀಕ್ಷೆಗೊಳಗಾಗಿ ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯ ಪಡೆದುಕೊಳ್ಳಬೇಕು.
ಮಹಾನಗರ ಪಾಲಿಕೆ, ಶಹಾಬಾದ್ ನಗರಸಭೆ, ಜಿಲ್ಲೆಯ ಎಲ್ಲ ಪುರಸಭೆ ಮತ್ತು ಪಟ್ಟಣ ಪಂಚಾಯತಿಗಳಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಳ್ಳುತ್ತಿದೆ. ಹೆಚ್ಚಿನ ಮಾಹಿತಿಗೆ ಸಂಬAಧಿಸಿದ ನಗರ, ಸ್ಥಳೀಯ ಸಂಸ್ಥೆಯ ಆಯುಕ್ತರು, ಪೌರಾಯುಕ್ತರು, ಮುಖ್ಯಾಧಿಕಾರಿಗಳು, ಸಮುದಾಯ ಸಂಘಟನಾಧಿಕಾರಿ/ ಸಮುದಾಯ ಸಂಘಟಕರನ್ನು ಸಂಪರ್ಕಿಸಬೇಕೆAದು ತಿಳಿಸಿದ್ದಾರೆ.