

ಚಾಮರಾಜನಗರ: ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಸಿಇಟಿ, ಎನ್‌ಇಇಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ವೃತ್ತಿಪರ ಕೋರ್ಸ್ ಹಾಗೂ ಪಿಎಚ್.ಡಿ ವ್ಯಾಸಂಗ ಮಾಡುತ್ತಿರುವ ಆರ್ಯ ವೈಶ್ಯ ವಿದ್ಯಾರ್ಥಿಗಳಿಗೆ ವಾರ್ಷಿಕ 1 ಲಕ್ಷ ರೂ. ಸಾಲವನ್ನು ಶೇ.2ರ ಬಡ್ಡಿದರದಲ್ಲಿ ಶೈಕ್ಷಣಿಕ ಸಾಲ ನೀಡಲಾಗುವುದು.
ವ್ಯಾಸಂಗ ಪೂರ್ಣಗೊಂಡ ನಂತರ 4 ತಿಂಗಳ ವಿರಾಮಾವಧಿ ಇರುತ್ತದೆ. ನಂತರ ಸಾಲವನ್ನು 36 ಮಾಸಿಕ ಕಂತುಗಳಲ್ಲಿ ಮರುಪಾವತಿಸಬೇಕು. ಅರ್ಜಿದಾರರು 18 ರಿಂದ 35 ವರ್ಷದ ಒಳಗಿರಬೇಕು. ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಮತ್ತು ನಗರ ಪ್ರದೇಶದವರಿಗೆ 6 ಲಕ್ಷ ರೂ. ಮಿತಿಯೊಳಗಿರಬೇಕು.
ಅರ್ಜಿದಾರರು ಸಾಮಾನ್ಯ ವರ್ಗದ ಆರ್ಯ ವೈಶ್ಯ ಸಮುದಾಯಕ್ಕೆ ಸೇರಿರಬೇಕು. ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನಮೂನೆ-ಜಿ ಯಲ್ಲಿ ಪಡೆದಿರಬೇಕು (ಪ್ರಮಾಣಪತ್ರ ಚಾಲ್ತಿಯಲ್ಲಿರಬೇಕು). ಅರ್ಜಿದಾರರ ಕಾಯಂ ವಿಳಾಸವು ಕರ್ನಾಟಕ ರಾಜ್ಯದಲ್ಲಿರಬೇಕು. ಆಧಾರ್ ಸಂಖ್ಯೆಗೆ ಮೊಬೈಲ್ ಸಂಖ್ಯೆಯನ್ನು ಜೋಡಣೆ ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ಸೀಡ್ ಮಾಡಿಸಿರಬೇಕು.
ಆಯ್ಕೆ ಮಾಡುವಾಗ ಮಹಿಳೆಯರಿಗೆ ಶೇ.33ರಷ್ಟು, ಅಂಗವಿಕಲರಿಗೆ ಹಾಗೂ ತೃತೀಯ ಲಿಂಗಿಗಳಿಗೆ ಶೇ.5ರಷ್ಟು ಮೀಸಲಾತಿ ಇರುತ್ತದೆ. ಒಂದು ಕುಟುಂಬದಲ್ಲಿ ಇಬ್ಬರು ಮಾತ್ರ ಸಾಲ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಅರ್ಜಿಯನ್ನು ಆನ್‌ಲೈನ್ ವೆಬ್‌ಸೈಟ್ ಮೂಲಕ ಡಿ.15ರೊಳಗೆ ಸಲ್ಲಿಸಬಹುದು.
ಮಾಹಿತಿಗಾಗಿ ನಿಗಮದ ಸಹಾಯವಾಣಿ 08226-223587 ಅಥವಾ ಯೋಜನೆಗಳ ಮಾರ್ಗಸೂಚಿಗಳು, ಸಲ್ಲಿಸಬೇಕಾದ ದಾಖಲೆಗಳ ಮಾಹಿತಿಯನ್ನು ನಗರದ ಜಿಲ್ಲಾಡಳಿತ ಭವನದ 3ನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 305ರಲ್ಲಿ ಪಡೆಯಬಹುದು ಎಂದು ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.