

ಬೀದರ್: ಸಹಕಾರಿ ಸಂಸ್ಥೆ ಮತ್ತು ಸಹಕಾರಿ ಬ್ಯಾಂಕ್ ಗಳಿಗೆ ರಿಯಾಯಿತಿ ಬಡ್ಡಿ ದರದಲ್ಲಿ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಮತ್ತು ಕೃಷಿ ಪೂರಕ ಸಾಲ ನೀಡುವ ಸಂಬಂಧ ಹೇರಿರುವ ಷರತ್ತುಗಳನ್ನು ಸಡಿಲಗೊಳಿಸಬೇಕೆಂದು ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಆಗ್ರಹಿಸಿದೆ.
ರಾಜ್ಯ ಸಹಕಾರಿ ಕೃಷಿ, ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿರ್ದೇಶಕರೂ ಆದ ಭಾಲ್ಕಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಡಿವಾಳಪ್ಪ ಮಂಗಲಗಿ ನೇತೃತ್ವದ ನಿಯೋಗ ಬುಧವಾರ ನಗರಕ್ಕೆ ಆಗಮಿಸಿದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿ, ಸರ್ಕಾರ ವಿಧಿಸಿದ ಷರತ್ತುಗಳಿಂದ ಸಾಲ ಸೌಲಭ್ಯಗಳಿಂದ ಅನ್ನದಾತರು ವಂಚಿತರಾಗುತ್ತಿದ್ದಾರೆ. ಈ ಬಗ್ಗೆ ಗಮನ ಹರಿಸಬೇಕೆಂದು ಮನವಿ ಮಾಡಿದರು.
ರೈತ ಸದಸ್ಯರಿಗೆ ಶೇ.3ರ ಬಡ್ಡಿ ದರದಲ್ಲಿ ಕೃಷಿ ಮತ್ತು ಕೃಷಿ ಪೂರಕ ದೀರ್ಘಾವಧಿ ಸಾಲ ಯೋಜನೆಯಲ್ಲಿ ಒಂದು ಕುಟುಂಬಕ್ಕೆ (ರೇಷನ್ ಕಾಡ್೯ನಲ್ಲಿ ಇರುವಂತೆ) 10 ಲಕ್ಷ ರೂ.ವರೆಗೆ ಸಾಲ ನೀಡಲು ಷರತ್ತು ವಿಧಿಸಲಾಗಿದೆ. ಅಲ್ಲದೇ ಕುಟುಂಬದ ಎಲ್ಲ ಸದಸ್ಯರಿಗೆ ಸೇರಿ ಗರಿಷ್ಠ 10 ವರ್ಷ ಮರು ಪಾವತಿಗೆ ಗರಿಷ್ಠ 4 ಲಕ್ಷ ರೂ. ವರೆಗೆ ಮಾತ್ರ ಬಡ್ಡಿ ಸಹಾಯಧನ ದೊರೆಯಲಿದೆ. ಉಳಿದ ಸಾಲಕ್ಕೆ ಸಹಾಯಧನ ಪಡೆಯಲು ಅರ್ಹ ಇರುವುದಿಲ್ಲ. ಈ ಎರಡು ಷರತ್ತುಗಳಿಂದ ಹಲವು ರೈತರಿಗೆ ಸಾಲ ವಿತರಣೆಗೆ ತೊಂದರೆಯಾಗುತ್ತಿದೆ. ಇವುಗಳನ್ನು ಸಡಿಲಗೊಳಿಸುವಂತೆ ಆಗ್ರಹಿಸಿದ್ದಾರೆ.
ಈ ಭಾಗದ ಎಲ್ಲ ಜಿಲ್ಲೆಗಳ ವ್ಯಾಪ್ತಿಗೆ ಒಳಪಡುವ ಪಿಕಾಡ್೯ ಬ್ಯಾಂಕ್ಗಳಿಗೆ ನಬಾಡ್೯ ಸಂಸ್ಥೆಯಿಂದ ರೈತರಿಗೆ ನೀಡಬೇಕಾದ ಸಾಲದ ಆರ್ಥಿಕ ಹಂಚಿಕೆ ಪ್ರತ್ಯೇಕವಾಗಿ ಮಾಡಬೇಕು ಎಂಬಿತ್ಯಾದಿ ಬೇಡಿಕೆ ಮಂಡಿಸಿದ್ದಾರೆ. ನಿಯೋಗದಲ್ಲಿ ಜೇವರ್ಗಿ ಪಿಎಲ್.ಡಿ ಬ್ಯಾಂಕ್ ಅಧ್ಯಕ್ಷ ಹಾಳೆಪ್ಪ ಆಚಾರ್ಯ, ಸೇಡಂ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚನ್ನವೀರ ನಿರಣಿ, ಅಫಜಲಪುರ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಅಶೋಕ ಪಾಟೀಲ್, ಆಳಂದ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಶರಣಬಸಪ್ಪ ವಾಘೆ, ನಿರ್ದೇಶಕ ಸಿ.ಡಿ.ಪಾಟೀಲ್ ಇತರರಿದ್ದರು.
ಒಂದೆಡೆ ಕರೊನಾ ಸಂಕಷ್ಟ, ಇನ್ನೊಂದೆಡೆ ಅತಿವೃಷ್ಟಿಯಿಂದ ರೈತ ಸಮುದಾಯ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಇಂಥ ಸಮಯದಲ್ಲಿ ರೈತರಿಗೆ ಸಾಲ ವಿತರಣೆ ಮಾಡಲು ಕೆಲ ಷರತ್ತುಗಳು ಅಡಚಣೆಯಾಗುತ್ತಿವೆ. ಹೀಗಾಗಿ ರೈತರ ಅಭಿವೃದ್ಧಿ ಹಿತದೃಷ್ಟಿಯಿಂದ ಸರ್ಕಾರ ಸಾಲ ವಿತರಣೆಗೆ ಇರುವ ಷರತ್ತುಗಳನ್ನು ಸಡಿಲಗೊಳಿಸಲು ಕ್ರಮ ಕೈಗೊಳ್ಳಬೇಕು.| ಮಡಿವಾಳಪ್ಪ ಮಂಗಲಗಿರಾಜ್ಯ ಸಹಕಾರಿ ಕೃಷಿ, ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿರ್ದೇಶಕ