

ಮೈಸೂರು: ಕೊಟ್ಟಿರುವ ಸಾಲ ವಸೂಲಾತಿಗೆ ಅಗತ್ಯ ಕ್ರಮ ಕೈಗೊಂಡರೆ ಮಾತ್ರ ಸೌಹಾರ್ದ ಸಹಕಾರ ಸಂಸ್ಥೆಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಜಂಟಿ ನಿರ್ದೇಶಕ ಎಂ. ರವಿ ತಿಳಿಸಿದರು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರ ಸಂಸ್ಥೆಯಿಂದ ನಗರದ ಇಂಜಿನಿಯರುಗಳ ಸಂಸ್ಥೆಯಲ್ಲಿ ಮಂಗಳವಾರ ಸೌಹಾರ್ದ ಸಂಯುಕ್ತ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗಾಗಿ ಆಯೋಜಿಸಿದ್ದ ‘ಲೆಕ್ಕಪರಿಶೋಧನೆ ವರದಿ ಸಿದ್ಧತೆ ಮತ್ತು ಪೂರ್ವ ಪ್ರಕ್ರಿಯೆಗಳು ಹಾಗೂ ಸಾಲ ವಸೂಲಾತಿ ಮತ್ತು ದಾವಾ ದಾಖಲಾತಿ’ ಕುರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಬಹುತೇಕ ಸಹಕಾರ ಸಂಸ್ಥೆಗಳಲ್ಲಿ ಲೆಕ್ಕಪತ್ರಗಳನ್ನು ಸರಿಯಾಗಿ ನಿರ್ವಹಿಸಿಲ್ಲ. ಇದರಿಂದ ಕೆಲಸ ಕಾರ್ಯಗಳು ಸರಿಯಾಗಿ ಆಗದೆ ತೊಂದರೆ ಆಗುತ್ತದೆ. ಕಾಲ ಕಾಲಕ್ಕೆ ಲೆಕ್ಕಪತ್ರಗಳನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಿಕೊಂಡು ಹೋಗಬೇಕು ಎಂದು ಹೇಳಿದರು.
ಬೆರಳೆಣಿಕೆಯಷ್ಟು ಸೊಸೈಟಿಗಳಲ್ಲಿ ಮಾತ್ರ ಲೆಕ್ಕಪತ್ರಗಳು ಸರಿ ಇರುತ್ತವೆ. ಲೆಕ್ಕಪತ್ರಗಳನ್ನು ಕಾಲ ಕಾಲಕ್ಕೆ ನಿರ್ವಹಣೆ ಮಾಡಿದರೆ ಸಂಸ್ಥೆಯ ಚಟುವಟಿಕೆಯನ್ನು ಉತ್ತಮವಾಗಿ ನಡೆಸಬಹುದು. ಸೊಸೈಟಿಯ ಸಿಇಒಗಳು ಪ್ರತಿ ತಿಂಗಳು ಲೆಕ್ಕಪತ್ರಗಳ ನಿರ್ವಹಣೆಯಾಗಿರುವ ಬಗ್ಗೆ ಪರಿಶೀಲಿಸಿಕೊಳ್ಳಬೇಕು ಎಂದು ಹೇಳಿದರು.
ಯಾವುದೇ ಸೊಸೈಟಿಗಳಲ್ಲಿ ನೀಡಿದ ಸಾಲ ಸರಿಯಾಗಿ ವಸೂಲಿ ಆಗದಿದ್ದಾಗ ತೊಂದರೆ ಆಗುತ್ತದೆ. ಹಾಗಾಗಿ, ವಸೂಲಾತಿ ಆಗದಿದ್ದಾಗ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಬಹುದು. ಇದಲ್ಲದೇ ಲೆಕ್ಕ ಪತ್ರಗಳ ನಿರ್ವಹಣೆಯೂ ಮುಖ್ಯ ಎಂದು ತಿಳಿಸಿದರು.
ಈ ಎರಡೂ ಅಂಶಗಳಲ್ಲಿ ಆಯಾ ಸಹಕಾರ ಸಂಘಗಳ ಸಿಇಒ ಸೇರಿದಂತೆ ಇನ್ನಿತರ ಸಿಬ್ಬಂದಿ ಜವಾಬ್ದಾರಿ ಹೆಚ್ಚಾಗಿರುತ್ತದೆ. ವರ್ಷದ ಅಂತ್ಯದಲ್ಲಿ ಲೆಕ್ಕ ಪರಿಶೋಧನೆ ಮಾಡಿಸಿದರೆ ನಮ್ಮ ಕರ್ತವ್ಯ ಮುಗಿಯಿತು ಎಂದು ಭಾವಿಸುವುದು ಸರಿಯಲ್ಲ. ಮುಂದಿನ ಆರ್ಥಿಕ ವರ್ಷದ ಲೆಕ್ಕ ಪರಿಶೋಧನೆಗೆ ಬೇಕಾದ ದಾಖಲೆ, ಲೆಡ್ಜರ್‌ಗಳ ನಿರ್ವಹಣೆಯನ್ನು ಕಾಲ ಕಾಲಕ್ಕೆ ಮಾಡುವುದರಿಂದ ಲೆಕ್ಕ ಪರಿಶೋಧನೆಯನ್ನು ಸುಲಲಿತವಾಗಿ ನಡೆಸಬಹುದು ಎಂದರು.
ಮಂಡ್ಯ ಜಿಲ್ಲಾ ಸೌಹಾರ್ದ ಸಹಕಾರಗಳ ಒಕ್ಕೂಟದ ಅಧ್ಯಕ್ಷ ಬಿ.ಟಿ.ಗುರುರಾಜ್ ಮಾತನಾಡಿ, ಲೆಕ್ಕಪರಿಶೋಧನೆ ಜವಾಬ್ದಾರಿ ಸಿಇಒಗಳದ್ದು. ಲೆಕ್ಕ ಪರಿಶೋಧನೆ ವಿಳಂಬಕ್ಕೆ ಆಡಳಿತ ಮಂಡಳಿ ಸಹ ಅರ್ಧದಷ್ಟು ಕಾರಣವಾಗಿರುತ್ತದೆ. ಹೀಗಾಗಿ, ಸಿಇಒಗಳು ವ್ಯವಸ್ಥಿತವಾಗಿ ಲೆಕ್ಕಪರಿಶೋಧನೆ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು.
ಸಹಕಾರ ಸಂಸ್ಥೆಗಳನ್ನು ಲಾಭದಾಯಿಕವಾಗಿ ಮುನ್ನಡೆಸಲು ಹಾಗೂ ಸಂಸ್ಥೆಯನ್ನು ಅಭಿವೃದ್ಧಿ ಮಾಡಬೇಕಾದರೆ ಸಂಸ್ಥೆಯ ಸಿಇಒಗಳಿಗೆ ಕಾಲ ಕಾಲಕ್ಕೆ ತರಬೇತಿ ಕಾರ್ಯಾಗಾರ ನಡೆಸುವ ಅನಿವಾರ್ಯತೆ ಇದೆ. ಪ್ರತಿ ಕಾರ್ಯಾಗಾರದಲ್ಲೂ ಹೊಸ ಹೊಸ ವಿಷಯ ತಿಳಿದುಕೊಳ್ಳಬಹುದಾಗಿದೆ. ಆ ನಿಟ್ಟಿನಲ್ಲಿ ಆಸಕ್ತಿಯಿಂದ ಸಿಇಒಗಳು ಕಾರ್ಯಾಗಾರಕ್ಕೆ ಬರುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದರು.
ಉತ್ತರ ಕರ್ನಾಟಕ ಹಾಗೂ ಮಂಗಳೂರು ಭಾಗಕ್ಕೆ ಹೋಲಿಸಿಕೊಂಡರೆ ಹಳೆಯ ಮೈಸೂರು ಭಾಗದಲ್ಲಿ ಸೌಹಾರ್ದ ಸಂಯುಕ್ತ ಸಹಕಾರ ಸಂಸ್ಥೆಗಳ ಸಂಖ್ಯೆ ಕಡಿಮೆ ಇದೆ. ಪ್ರಸ್ತುತ ಇರುವ ಸೊಸೈಟಿಗಳ ಆಡಳಿತ ಮಂಡಳಿ ಜನರನ್ನು ಸೌಹಾರ್ದ ಸಹಕಾರ ಕ್ಷೇತ್ರಗಳತ್ತ ಸೆಳೆಯಲು ವಿಫಲರಾಗಿದ್ದಾರೆ. ಆ ಕಾರಣದಿಂದಲೇ ಮೈಸೂರು ಭಾಗದಲ್ಲಿ ಸೌಹಾರ್ದ ಸಹಕಾರ ಸಂಸ್ಥೆಗಳು ಕಡಿಮೆ ಇದೆ. ಮುಂದಿನ ದಿನಗಳಲ್ಲಿ ಸೌಹಾರ್ದ ಸಹಕಾರ ಸಂಸ್ಥೆಗಳ ಸಂಖ್ಯೆ ಹೆಚ್ಚಾಗಿಸಲು ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಮೈಸೂರು, ಮಂಡ್ಯ ಮತ್ತು ಕೊಡಗು ಜಿಲ್ಲಾ ಸೌಹಾರ್ದ ಸಹಕಾರಗಳ ಒಕ್ಕೂಟದ ಅಧ್ಯಕ್ಷ ಎಸ್.ಆರ್. ನಾರಾಯಣರಾವ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರ ಪ್ರಾಂತೀಯ ಅಧಿಕಾರಿ ಗುರುಪ್ರಸಾದ್ ಬಂಗೇರ, ಸನ್ನದು ಲೆಕ್ಕಪರಿಶೋಧಕ ಬಿ.ಎನ್. ಚಂದ್ರಶೇಖರ್, ಸೌಹಾರ್ದ ಅಭಿವೃದ್ಧಿ ಅಧಿಕಾರಿಗಳಾದ ಆರ್.ಎಸ್. ಸುರೇಶ, ಎನ್. ಬಲರಾಮ್ ಇತರರು ಇದ್ದರು.