ಸಾಲ ವಂಚಿತ ರೈತರಿಗೆ ಸೌಲಭ್ಯ ಒದಗಿಸಿ

MLA, Siddu Savadi, Sasalatti PKPS, Director, Governing Body,
ತೇರದಾಳ ತಾಲೂಕಿನ ಸಸಾಲಟ್ಟಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಹಿರಿಯ ನಿರ್ದೇಶಕರನ್ನು ಸನ್ಮಾನಿಸಲಾಯಿತು. ತೇರದಾಳ ಶಾಸಕ ಸಿದ್ದು ಸವದಿ, ಶಿವಗೊಂಡ ಹುಕ್ಕೇರಿ, ಸಿ.ಎಸ್.ಮದಲಮಟ್ಟಿ, ಜಿ.ಆರ್.ಶೇಗುಣಸಿ ಇದ್ದರು.
Published on

ತೇರದಾಳ: ರಾಜ್ಯದಲ್ಲಿಯೇ ಅತಿ ಹೆಚ್ಚಿನ ಲಾಭ ಹಾಗೂ ರೈತರ ಏಳಿಗೆಗೆ ಶ್ರಮಿಸುತ್ತಿರುವ ಸಹಕಾರ ಸಂಘಗಳು ನಮ್ಮ ಭಾಗದಲ್ಲಿಯೇ ಇವೆಯೆಂಬುದು ಹೆಮ್ಮೆಯ ವಿಷಯ ಎಂದು ಶಾಸಕ ಸಿದ್ದು ಸವದಿ ಹೇಳಿದರು.

ತಾಲೂಕಿನ ಸಸಾಲಟ್ಟಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಹಿರಿಯ ನಿರ್ದೇಶಕರು ಹಾಗೂ ನೂತನ ಆಡಳಿತ ಮಂಡಳಿಯವರಿಗಾಗಿ ಭಾನುವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಸಹಕಾರಿ ಸಂಘದ ಹಿಂದಿನ ನಿರ್ದೇಶಕರು ಈ ಸಂಘದ ಬೆಳವಣಿಗೆಗೆ ಬಹಳಷ್ಟು ಶ್ರಮಿಸಿದ್ದಾರೆ. ಈಗಿನವರು ಅವರ ಶ್ರಮಕ್ಕೆ ಧಕ್ಕೆ ತರದಂತೆ ಕಾರ್ಯನಿರ್ವಹಿಸಬೇಕು. ಮುಂಬರುವ ದಿನಗಳಲ್ಲಿ ಸಾಲ ವಂಚಿತ ರೈತರಿಗೂ ಸಾಲ ನೀಡುವ ಕೆಲಸ ಮಾಡಿ ಎಂದು ಹೇಳಿದರು.

ಸಂಘದ ನೌಕರ ಎಂ.ಎಂ.ಹಿರೇಮಠ ಮಾತನಾಡಿ, 1958ರಲ್ಲಿ ಸ್ಥಾಪನೆಯಾದ ಸಂಘವು 1996 ರಲ್ಲಿ ಕೇವಲ 27 ಲಕ್ಷ ರೂ. ಸಾಲ ವಿತರಿಸುವ ಮೂಲಕ ಹಣಕಾಸಿನ ವ್ಯವಹಾರ ಆರಂಭಿಸಿದೆ. ಗ್ರಾಮದ ರೈತರು ಹಾಗೂ ಆಡಳಿತ ಮಂಡಳಿ ಸಹಕಾರದಿಂದ ಈ ವರ್ಷ 13 ಕೋಟಿ ರೂ. ಸಾಲ ವಿತರಿಸಿದೆ. ಇಲ್ಲಿಯವರೆಗೆ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆಯ್ಕೆ ಮಾಡಿದ ಸದಸ್ಯರ ನಂಬಿಕೆಗೆ ಚ್ಯುತಿ ಬರದಂತೆ ನಡೆದುಕೊಂಡಿದ್ದು ಸಂಘದ ಸಭೆಗೆ ಹಾಜರಾಗಿ ಕನಿಷ್ಟ ಭತ್ಯೆಯನ್ನು ಪಡೆಯದೆ ಮುನ್ನಡೆಸಿಕೊಂಡು ಬಂದಿದ್ದಾರೆ. ಅವರ ಮಾರ್ಗದರ್ಶನ ಪಡೆದು ಲಾಭದತ್ತ ಸಂಘವನ್ನು ಕೊಂಡೊಯ್ಯಣ ಎಂದರು.

ಹಿರಿಯ ನಿರ್ದೇಶಕ ಶಿವಗೊಂಡ ಹುಕ್ಕೇರಿ, ಸಿ.ಎಸ್.ಮದಲಮಟ್ಟಿ, ಜಿ.ಆರ್.ಶೇಗುಣಸಿ, ಪ್ರಭಾಕರ ಕಾಪಶಿ, ಮಾಯಪ್ಪ ಬೆಂಡಿಕಾಯಿ, ಮೌಲಾಸಾಬ ಪಠಾಣ, ರಾಮಪ್ಪ ಹೋಟಕರ, ಚನ್ನಪ್ಪ ಸಲಬನ್ನವರ ಅವರನ್ನು ಸತ್ಕರಿಸಲಾಯಿತು. ನೂತನ ಅಧ್ಯಕ್ಷ ಜಿ.ಎಸ್.ಹುಕೇರಿ, ಉಪಾಧ್ಯಕ್ಷ ಮಹಾದೇವ ಮಾಲಗಾಂವಿ, ನಿರ್ದೇಶಕರಾದ ಸತ್ಯಪ್ಪ ಕೊಪ್ಪದ, ರವಿ ಮರಡಿ, ರಾಜು ಪಾಟೀಲ, ಆರ್.ಎಸ್.ಉಳ್ಳಾಗಡ್ಡಿ, ಐ.ಆರ್.ಮಳ್ಳನ್ನವರ, ಪ್ರಕಾಶ ಭದ್ರಶೆಟ್ಟಿ, ಕ್ಷೇತ್ರ ಸಿಬ್ಬಂದಿ ಎಸ್.ಎಂ.ಶಿರೋಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net