ಸಾಲ ಮರುಪಾವತಿಯಲ್ಲಿ ಉತ್ತಮ ಸಾಧನೆ

DCC
Published on

ಗೌರಿಬಿದನೂರು: ಸಾಲ ಮರುಪಾವತಿ ಮಾಡಿಸುವಲ್ಲಿ ನಮ್ಮ ಬ್ಯಾಂಕ್ ಉತ್ತಮ ಸಾಧನೆ ಮಾಡುತ್ತಿದೆ ಎಂದು ಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.

ಬ್ಯಾಂಕ್ ಕಚೇರಿಯಲ್ಲಿ ವ್ಯವಸಾಯೋತ್ಪನ್ನ ಸಹಕಾರ ಸಂಘಗಳ ಕಾರ್ಯದರ್ಶಿಗಳ ಸಭೆಯಲ್ಲಿ ಮಾತನಾಡಿ, ಸಹಕಾರ ಸಂಘದ ಕಾರ್ಯದರ್ಶಿಗಳ ಸಹಕಾರದಿಂದ ಡಿಸಿಸಿ ಬ್ಯಾಂಕ್ ಉತ್ತಮ ಸಾಧನೆ ಮಾಡಿ ರಾಜ್ಯದಲ್ಲಿ ಹೆಸರು ಪಡೆದಿದೆ. ರೈತರಿಗೆ ಮತ್ತು ವಿಶೇಷವಾಗಿ ಸ್ತ್ರೀಶಕ್ತಿ ಸಂಘಗಳಿಗೆ ಸಾಲ ನೀಡುವ ಹಾಗೂ ಸಾಲ ಮರುಪಾವತಿ ಮಾಡಿಸುವ ವಿಚಾರದಲ್ಲಿ ನಮ್ಮ ಬ್ಯಾಂಕ್ ಇತರ ಜಿಲ್ಲೆಗಳ ಬ್ಯಾಂಕ್‌ಗಳಿಗೆ ಮಾದರಿಯಾಗಿದೆ. ವ್ಯವಸಾಯ ಸೇವಾ ಸಹಕಾರ ಸಂಘಗಳಲ್ಲಿ ಗಣಕೀಕೃತ ವ್ಯವಸ್ಥೆ ಕಲ್ಪಿಸಿರುವುದು ಪಾರದರ್ಶಕ ಆಡಳಿತಕ್ಕೆ ಕಾರಣವಾಗಿದೆ. ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಆಗಲಿದ್ದು, ಮಧ್ಯವರ್ತಿಗಳಿಗೆ ಅವಕಾಶವಿಲ್ಲ ಎಂದರು.

ಸಂಘದ ಕಾರ್ಯದರ್ಶಿಗಳು ಹೆಚ್ಚು ರೈತ ಕುಟುಂಬಗಳಿಗೆ ಸದಸ್ಯತ್ವ ನೀಡುವ ಮೂಲಕ ಸಾಲ ಒದಗಿಸಿಕೊಡಬೇಕು. ಸೀಶಕ್ತಿ ಸಂಘಗಳಿಗೆ ಸಾಲ ದೊರಕಿಸಿಕೊಡುವ ಮೂಲಕ ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸಲು ನೆರವಾಗಬೇಕು, ತಾಲೂಕಿನ ಡಿಸಿಸಿ ಬ್ಯಾಂಕಿನಿಂದ 50 ಕೋಟಿ ರೂ.ನಷ್ಟು ಸಾಲ ಬೇಕು ಎಂದು ಸ್ತ್ರೀಶಕ್ತಿ ಸಂಘಗಳು ಬೇಡಿಕೆ ಸಲ್ಲಿಸಿವೆ. ತಿಂಗಳ ಅವಧಿಯಲ್ಲಿ ಸಾಲ ನೀಡಲಾಗುವುದು ಎಂದು ತಿಳಿಸಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಮರಳೂರು ಹನುಮಂತರೆಡ್ಡಿ ಮಾತನಾಡಿ, ಕಾರ್ಯದರ್ಶಿಗಳು ಜವಾಬ್ದಾರಿ ಅರಿತು ಕೆಲಸ ಮಾಡಿದಾಗ ಸಂಘಗಳನ್ನು ಉತ್ತಮ ಹಾದಿಯಲ್ಲಿ ಕೊಂಡೊಯ್ಯಲು ಸಾಧ್ಯ ಎಂದು ಹೇಳಿದರು. ಡಿಸಿಸಿ ಬ್ಯಾಂಕ್‌ನಿಂದ 35 ವ್ಯವಸಾಯ ಸೇವಾ ಸಹಕಾರ ಸಂಘಗಳಿಗೆ ಮೈಕ್ರೋ ಎಟಿಎಂ ಯಂತ್ರ ವಿತರಿಸಲಾಯಿತು. ಬ್ಯಾಂಕಿನ ವ್ಯವಸ್ಥಾಪಕ ಮಹಮ್ಮದ್ ಅಸ್ಲಾಂ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮಣ್ಣ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net