

ಬೀದರ್: ಸರ್ಕಾರಿ ಯೋಜನೆ ಲಾಭ ತೆಗೆದುಕೊಳ್ಳುವುದರ ಜತೆಗೆ ಗ್ರಾಹಕರು ಬ್ಯಾಂಕ್ನಿಂದ ಪಡೆದ ಸಾಲ ಸಕಾಲಕ್ಕೆ ಮರುಪಾವತಿ ಮಾಡಬೇಕು ಎಂದು ಕೇಂದ್ರದ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.
ನಗರದಲ್ಲಿ ಲೀಡ್ ಬ್ಯಾಂಕ್ ಸೋಮವಾರ ಹಮ್ಮಿಕೊಂಡಿದ್ದ ಸಾಲ ಸಂಪರ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಆರ್ಥಿಕತೆ ಮತ್ತು ಅಭಿವೃದ್ಧಿ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಬ್ಯಾಂಕ್ ಸೇವೆ ಅಪಾರ. ಪ್ರಧಾನಿ ನರೇಂದ್ರ ಮೋದಿ ಕನಸಿನಂತೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿ ಮುಟ್ಟುವಲ್ಲಿ ಬ್ಯಾಂಕ್ ಜತೆ ಗ್ರಾಹಕರು ಸಹ ಪರಿಶ್ರಮ ಪಡಬೇಕಿದೆ ಎಂದರು.
ಜಿಲ್ಲೆಯಲ್ಲಿರುವ ಬ್ಯಾಂಕ್ಗಳ ಠೇವಣಿ 7946.77 ಕೋಟಿ ರೂ. ಇದರಲ್ಲಿ 7457.24 ಕೋಟಿ ರೂ. ಸಾಲ ನೀಡಲಾಗಿದೆ. ಜಿಲ್ಲೆಯ 3,38,098 ರೈತರಿಗೆ 3123.03 ಕೋಟಿ ರೂ. ಬೆಳೆ ಸಾಲ, ಎಂಎಸ್ಎಂಇಯಲ್ಲಿ ಸಣ್ಣ ಉದ್ಯಮಿಗಳಿಗೆ 908.55 ಕೋಟಿ ರೂ. ಸಾಲ, ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ 2439 ಬೀದಿ ವ್ಯಾಪಾರಿಗಳಿಗೆ 2.39 ಕೋಟಿ ರೂ. ಸಾಲಸೌಲಭ್ಯ, ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆಯಡಿ (ಪಿಎಂಇಜಿಪಿ) ಈ ವರ್ಷ 161 ಹೊಸ ಉದ್ಯಮಿಗಳಿಗೆ 15.84 ಕೋಟಿ ರೂ. ಸಾಲ, ಸ್ಟ್ಯಾಂಡ್ ಅಪ್ ಇಂಡಿಯಾದಡಿ ಜಿಲ್ಲೆಯ 78 ಹೊಸ ಉದ್ಯಮಗಳಿಗೆ 8 ಕೋಟಿ ರೂ. ಸಾಲ, ಜಿಲ್ಲೆಯ ಅಲ್ಪಸಂಖ್ಯಾತರಿಗೆ 7.16 ಕೋಟಿ ರೂ. ಸಾಲಸೌಲಭ್ಯ ಒದಗಿಸಲಾಗಿದೆ ಎಂದು ವಿವರಿಸಿದರು.
ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪ್ರತಿವರ್ಷ 12 ರೂ. ಪ್ರೀಮಿಯಂ)ಯಡಿ 3,14,599 ಜನರು ವಿಮೆ ಮಾಡಿಸಿದ್ದಾರೆ. ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಯಡಿ 92,966 ವಿಮೆ (ಪ್ರತಿವರ್ಷ 330 ರೂ.), ಅಟಲ್ ಪೆನ್ಶನ್ ಅಡಿ 42,430 ಜನರ ವಿಮೆ ಮಾಡಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ವಿಮೆ ಮಾಡಿಸಿದ 52 ಜನ ಮೃತಪಟ್ಟಿದ್ದು, ಅವರ ಕುಟುಂಬದವರಿಗೆ ಪರಿಹಾರ ಮೊತ್ತ ದೊರೆತಿದೆ. ಜನತೆ ಸಕರ್ಾರದ ವಿಮೆ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಎಸ್ಬಿಐ ಉಪ ಮುಖ್ಯ ವ್ಯವಸ್ಥಾಪಕ ಬಾಬಿ ಜೋಸ್, ಬೀದರ್ನ ಎಜಿಎಂ ಎಲ್.ಹರೀಶ್, ಡಿಸಿಸಿ ಬ್ಯಾಂಕ್ ಡಿಜಿಎಂ ಸದಾಶಿವ ಪಾಟೀಲ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ಎಜಿಎಂ ಪ್ರಮೋದ ನವಣಿ, ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್ ವೈ.ವಿ.ಎನ್. ಪ್ರಸಾದ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸತೀಶ್ ಇತರರಿದ್ದರು.
ಸಾಲ ಮಂಜೂರಾತಿ ಪತ್ರ ವಿತರಣೆ: ಕಾರ್ಯಕ್ರಮದಲ್ಲಿ ಹಲವರಿಗೆ ಸಾಲ ಮಂಜೂರಿ ಪತ್ರ, ಚೆಕ್ ವಿತರಿಸಲಾಯಿತು. 9 ಹೊಸ ಉದ್ಯಮಿಗಳಿಗೆ ಸಾಲದ ಪತ್ರ, ಪಿಎಂಇಜಿಪಿಯಲ್ಲಿ 32, ಹೈನುಗಾರಿಕೆ 24, ಕೆಸಿಸಿ ಸಾಲ 6, ಸ್ವಸಹಾಯ ಸಂಘಗಳ 26 ಜನರಿಗೆ, ಆಟೋ ಸಾಲ 14, ಮನೆ ಸಾಲ 18 ಹಾಗೂ 131 ಜನರಿಗೆ ಮುದ್ರಾ ಯೋಜನೆಯಡಿ ಸಾಲ ಮಂಜೂರಿ ಪತ್ರ ಮತ್ತು ಚೆಕ್ಗಳನ್ನು ಕೇಂದ್ರ ಸಚಿವ ಭಗವಂತ ಖೂಬಾ ವಿತರಿಸಿದರು.