ಸಾಲ ಪಡೆದ ರೈತರಿಗೆ ಕಿರುಕುಳ ಆರೋಪ

11
Published on

ಮೈಸೂರು: ಸಾಲ ಪಡೆದ ರೈತರಿಗೆ ಬ್ಯಾಂಕ್‌ನವರು ಅನಗತ್ಯ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿ ರೈತರು ಕುವೆಂಪುನಗರದ ಎಸ್‌ಬಿಐ ಬ್ಯಾಂಕ್‌ನ ಪ್ರಾದೇಶಿಕ ಕಚೇರಿ ಮುಂದೆ ಮಂಗಳವಾರ ಧರಣಿ ನಡೆಸಿದರು.
ಸಾಲ ನೀಡಿದ ಬ್ಯಾಂಕ್ ಅಧಿಕಾರಿಗಳು ರೈತರಿಗೆ ಪದೇಪದೆ ನೋಟಿಸ್ ನೀಡಿ ಕಿರಿಕುಳ ನೀಡುತ್ತಿದ್ದಾರೆ. ಸಾಲ ನೀಡುವಾಗ ಇದ್ದ ನಿರ್ಬಂಧವನ್ನು ತಮಗೆ ಇಷ್ಟೆ ಬಂದಂತೆ ಬದಲಾಯಿಸಿಕೊಂಡು ಅನಗತ್ಯ ಬಡ್ಡಿ ಹಾಕುತ್ತಿದ್ದಾರೆ. ನಾನಾ ಕಾರಣದಿಂದ ಸಾಲ ಮರುಪಾವತಿ ವಿಳಂಬವಾದರೆ ಆಸ್ತಿ ಹರಾಜು ನೋಟಿಸ್ ಅನ್ನು ಮನೆ ಬಾಗಿಲಿಗೆ ಅಂಟಿಸುತ್ತಿದ್ದಾರೆ ಎಂದು ದೂರಿದರು.
ನೋಟಿಸ್‌ಗಳನ್ನು ಆಂಗ್ಲಭಾಷೆಯಲ್ಲಿ ನೀಡುತ್ತಿದ್ದಾರೆ. ಓದಲು ಬಾರದ ರೈತರು ಏನು ಉತ್ತರ ಹೇಳಬೇಕು ಎನ್ನುವುದೇ ತಿಳಿಯದಂತಾಗಿದೆ. ಬ್ಯಾಂಕ್‌ಗಳಲ್ಲಿ ಕನ್ನಡ ಮಾತನಾಡಲು ಬಾರದವರನ್ನು ಸಂಪರ್ಕ ಅಧಿಕಾರಿಯನ್ನಾಗಿ ಮಾಡಲಾಗುತ್ತಿದೆ. ಇದರಿಂದ ಇಬ್ಬರಿಗೂ ಭಾಷಾ ತೊಡಕು ಉಂಟಾಗುತ್ತಿದೆ. ಸಣ್ಣ ಸಾಲ ನೀಡುತ್ತಿಲ್ಲ. ಮುದ್ರಾ ಯೋಜನೆ ಸೇರಿದಂತೆ ಇನ್ನಿತರ ಯೋಜನೆಯಡಿ ಸಾಲ ವಿತರಿಸುತ್ತಿಲ್ಲ. ಈ ಸಮಸ್ಯೆಯನ್ನು ತಕ್ಷಣ ಬಗೆಹರಿಸಬೇಕು. ಇಲ್ಲವಾದರೆ ಹೋರಾಟ ಮುಂದುವರಿಸುವುದಾಗಿ ಸಂಜೆ ವರೆವಿಗೂ ಬ್ಯಾಂಕ್ ಮುಂದೆ ಧರಣಿ ಮುಂದುವರೆಸಲಾಯಿತು.
ಪ್ರಾದೇಶಿಕ ಬ್ಯಾಂಕ್ ವ್ಯವಸ್ಥಾಪಕ ಜನಾರ್ಧನ್ ಅವರು, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅವರೊಂದಿಗೆ ಮಾತುಕತೆ ನಡೆಸಿ, ಇನ್ನೊಂದು ತಿಂಗಳಲ್ಲಿ ಬ್ಯಾಂಕ್‌ನ ಎಲ್ಲ ಶಾಖೆಗಳಲ್ಲಿ ಸಭೆ ನಡೆಸಲಾಗುವುದು. ಅಲ್ಲಿ ಈ ಎಲ್ಲ ಸಮಸ್ಯೆಗಳ ಕುರಿತು ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಧರಣಿ ವಾಪಸ್ ಪಡೆಯಲಾಯಿತು.
ಮುಖಂಡರಾದ ಹತ್ತಳ್ಳಿ ದೇವರಾಜ್, ಪಿ.ಸೋಮಶೇಖರ್, ಬರಡನಪುರ ನಾಗರಾಜ್, ಕಿರಗಸುರು ಶಂಕರ, ಹಳ್ಳಿಕೆರೆಹುಂಡಿ ಭಾಗ್ಯರಾಜ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net