

ಕೊಳ್ಳೇಗಾಲ : ಖಾಸಗಿ ಫೈನಾನ್ಸ್ ಸಂಸ್ಥೆಗಳ ಸಾಲದ ಸೂಲಕ್ಕೆ ಸಿಲುಕಿ 10ಕ್ಕೂ ಹೆಚ್ಚು ಬುಡಕಟ್ಟು ಕುಟುಂಬ ಊರನ್ನೇ ತೊರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಿನ ತೆಳ್ಳನೂರು ಗ್ರಾ.ಪಂ ವ್ಯಾಪ್ತಿಯ ರಾಚಪ್ಪಾಜಿ ನಗರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕವಿತಾ ಜನ ಸಂಪರ್ಕ ಸಭೆ ನಡೆಸಿ ಗ್ರಾಮಸ್ಥರ ಅಹವಾಲು ಆಲಿಸಿದರು.
ಈ ವೇಳೆ ಗ್ರಾಮದ ಮುಖಂಡ ಮಾತನಾಡಿ, ಫೈನಾನ್ಸ್ ಸಂಸ್ಥೆಗಳ ಹಾವಳಿಗೆ ಜನರು ಗ್ರಾಮ ತೊರೆಯುತ್ತಿದ್ದಾರೆ. ಸಾಲ ಕಟ್ಟದಿದ್ದರೆ ನೋಟಿಸ್ ನೀಡುತ್ತೇವೆ. ಕೋರ್ಟ್‌ನಲ್ಲಿ ಕೇಸ್ ಹಾಕುತ್ತೇವೆ ಎಂದು ಹೆದರಿಸಲಾಗುತ್ತಿದೆ. ಈ ಕಿರುಕುಳಕ್ಕೆ ನೊಂದ ಕೆಲ ಕುಟುಂಬಗಳು ಗ್ರಾಮವನ್ನೇ ತೊರೆದಿವೆ. ಅಲ್ಲದೆ, ಕೈ ಸಾಲ ನೀಡಿದವರ ಕಾಟ ತಡೆಯಲಾಗದೆ ಕೆಲವರು ಕಾಡಿನಲ್ಲಿ ಉಳಿದು ಕೊಳ್ಳುತ್ತಿದ್ದರು. ಅವರಿಗೆ ಮನೆಯವರು ಊಟ ನೀಡಿ ಬರುತ್ತಿದ್ದೇವು. ಫೈನಾನ್ಸ್ ಹಾವಳಿಯಿಂದ ಮಕ್ಕಳ ಓದಿಗೂ ತೊಂದರೆ ಆಗಿದೆ ಎಂದು ಅಳಲು ತೋಡಿಕೊಂಡರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕವಿತಾ ಮಾತನಾಡಿ, ಸಾಲ ಕಟ್ಟುವಂತೆ ಕಿರುಕುಳ ನೀಡಿದರೆ ಪೊಲೀಸ್ ಠಾಣೆಗೆ ದೂರು ನೀಡಿ, ಸಾಲಕ್ಕೆ ಹೆದರಿ ಊರು ತೊರೆಯಬಾರದು. ಕಿರುಕುಳ ನೀಡಿದರೆ ಪೊಲೀಸರಿಗೆ ಮಾಹಿತಿ ನೀಡಬೇಕು. ಅಂತಹವರ ಮೇಲೆ ಮೂಲಾಜಿಲ್ಲದೆ ಕ್ರಮ ವಹಿಸುತ್ತೇವೆ. ಊರು ಬಿಟ್ಟವರು ಮತ್ತೆ ಊರಿಗೆ ಬರುವಂತೆ ಗ್ರಾಮಸ್ಥರಿಗೆ ತಿಳಿ ಹೇಳಿದರು.
ಊರನ್ನೆ ತೊರೆದರು:
ರಾಚಪ್ಪಾಜಿ ಗ್ರಾಮದಲ್ಲಿ 160 ಬುಡಕಟ್ಟು ಕುಟುಂಬ ವಾಸವಿದೆ. ಫೈನಾನ್ಸ್ ಸಂಸ್ಥೆ ಹಾಗೂ ಕೆಲ ಖಾಸಗಿ ವ್ಯಕ್ತಿಗಳ ಬಡ್ಡಿ ವ್ಯವಹಾರಕ್ಕೆ ಸಿಲುಕಿ ಮಾದಪ್ಪ, ಶಶಿಕಲಾ, ಮಾದೇವಿ, ನಾಗರಾಜು, ಕುಮಾರ್, ದಿವ್ಯ, ಜಯಮ್ಮ, ಶಿವಣ್ಣ, ಗೋವಿಂದಮ್ಮ, ಮಾದೇಶ ಇತರರು ಊರನ್ನೆ ತೊರೆದಿರುವ ಮಾಹಿತಿಯನ್ನು ಅಧಿಕಾರಿಗಳು ಪಡೆದರು. ಅಲ್ಲದೆ, ಫೈನಾನ್ಸ್ ನೀಡಿದ ನೋಟಿಸ್‌ಗಳು, ಖಾಸಗಿ ಫೈನಾನ್ಸ್ ನವರಿಗೆ ಬೆದರಿ ಊರು ಬಿಟ್ಟವರ ಬಗ್ಗೆ ಮಾಹಿತಿ ಕಲೆ ಹಾಕಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಪರಿಶಿಷ್ಟ ವರ್ಗಗಳ ಜಿಲ್ಲಾ ಕಲ್ಯಾಣಾಧಿಕಾರಿ ಬಿಂಧು ಮಾತನಾಡಿ, ನಿಮ್ಮ ಮಕ್ಕಳನ್ನು ಶೈಕ್ಷಣಿಕ ಸೌಲಭ್ಯದಿಂದ ವಂಚಿಸಬೇಡಿ. ಇಲಾಖೆಯಿಂದ ನೀಡುವ ಪೌಷ್ಠಿಕ ಆಹಾರ ಪದಾರ್ಥಗಳನ್ನು ತಪ್ಪದೇ ಸ್ವೀಕರಿಸಿ. ಕುಡಿತದ ಚಟದಿಂದ ದೂರವಿರಿ. ಸಕಾಲದಲ್ಲಿ ಸಾಲ ಹಿಂದಿರುಗಿಸಲಿಲ್ಲ ಎಂದು ಕಿರುಕುಳ ನೀಡುವವರ ಕುರಿತು ಇಲಾಖೆಗೆ ತಕ್ಷಣವೇ ಮಾಹಿತಿ ನೀಡಿ ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಪರಿಶಿಷ್ಟ ವರ್ಗಗಳ ತಾಲೂಕು ಕಲ್ಯಾಣಾಧಿಕಾರಿ ರಾಜೇಶ್, ಆದಿವಾಸಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ನಾಗೇಂದ್ರ ಗಾಣಿ ಗಮಂಗಲ, ಡಿವೈಎಸ್ಪಿ ಧಮೇರ್ಂದ್ರ, ಸಿಪಿಐ ಶಿವಮಾದಯ್ಯ, ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಸುಪ್ರಿತ್, ಚೆಲುವರಾಜು ಇದ್ದರು.
ರಾಚಪ್ಪಾಜಿ ಗ್ರಾಮದಲ್ಲಿ 24 ರಿಂದ 25 ಬುಡಕಟ್ಟು ಜನರು ಊರು ತೊರೆದಿದ್ದಾರೆ. ಈ ಪೈಕಿ ಮೂರ್ನಾಲ್ಕು ಕುಟುಂಬ ಸಾಲ ಬಾಧೆಯಿಂದ ಊರು ತೊರೆದಿದ್ದಾರೆ. ಇನ್ನು ಕೆಲವರು ಕೂಲಿಗಾಗಿ ಕಾಫಿ ತೋಟ ಇನ್ನಿತರ ಕೆಲಸಗಳಿಗೆ ಗುಳೆ ಹೋಗಿರುವುದು ಸಭೆಯಲ್ಲಿ ತಿಳಿದು ಬಂದಿದೆ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ನಿಮ್ಮೊಂದಿಗೆ ಯಾರು ಸಾಲಕ್ಕೆ ಹೆದರಿ ಊರನ್ನು ಬಿಡುವುದು ಬೇಡ.
ಕವಿತಾ. ಎಸ್ಪಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ