ಸಾರ್ವತ್ರಿಕ ಚುನಾವಣೆಯಲ್ಲಿ ಉತ್ತರ, ಸಚಿವ ಎಂಟಿಬಿ ನಾಗರಾಜ್ ಭವಿಷ್ಯ, ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

mtb
Published on

ಬೆಂಗಳೂರು ಗ್ರಾಮಾಂತರ: ಕ್ಷೇತ್ರದಲ್ಲಿ ಯಾರು ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ ಮತ್ತು ಒಣ ರಾಜಕೀಯ ಮಾಡುತ್ತಿದ್ದಾರೆ ಎಂಬುದು ಕ್ಷೇತ್ರದ ಮತದಾರರಿಗೆ ತಿಳಿಯುತ್ತದೆ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರೇ ಇದಕ್ಕೆ ಉತ್ತರ ಕೊಡಲಿದ್ದಾರೆ ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಖಾತೆ ಸಚಿವ ಎಂಟಿಬಿ ನಾಗರಾಜ್ ಹೇಳಿದರು.

ಹೊಸಕೋಟೆಯ ವಿವಿಧೆಡೆ 7.10 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.

ಹೊಸಕೋಟೆ ತಾಲೂಕಿನ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. 2019-20ರ ಸಾಲಿನಲ್ಲಿ 40 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿದ್ದು, ಈ ಅನುದಾನದಡಿ ಹಲವು ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದು ಹೇಳಿದರು.

ತಾಲೂಕಿನ ಹಲವು ಕಾಮಗಾರಿಗಳಿಗೆ ನಮ್ಮ ಅನುದಾನ ಬಿಡುಗಡೆಯಾಗಿರುವುದರಿಂದ ಕಾಮಗಾರಿಗೆ ಚಾಲನೆ ನೀಡುತ್ತಿದ್ದೇನೆ. ಆದರೆ ಬೇರೆಯವರ ಅನುದಾನದಲ್ಲಿ ನಡೆಯುವ ಕಾಮಗಾರಿಗೆ ಗುದ್ದಲಿ ಹಿಡಿದುಕೊಂಡು ಹೋಗುವುದಿಲ್ಲ ಎಂದು ಪರೋಕ್ಷವಾಗಿ ಶಾಸಕರ ವಿರುದ್ಧ ವ್ಯಂಗ್ಯವಾಡಿದರು.

ಕ್ಷೇತ್ರದ ಸಂಸದ ಹಾಗೂ ಶಾಸಕರು ಅನುದಾನ ತಂದು ಅಭಿವೃದ್ಧಿ ಕಾರ್ಯ ಮಾಡಲಿ. ಆದರೆ ನಮ್ಮ ಅನುದಾನದಲ್ಲಿ ನಡೆಯುವ ಕಾಮಗಾರಿಗೆ ಚಾಲನೆ ನೀಡುವ ಮೂಲಕ ಜನರ ದಿಕ್ಕುತಪ್ಪಿಸುವ ಕೆಲಸ ಮಾಡಬಾರದು ಎಂದರು.

ಸಿಂದಗಿ ಗೆಲುವು: ಸಿಂದಗಿ ಉಪಚುನಾವಣೆ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಆಣತಿಯಂತೆ ನಾನು ಮೂರು ದಿನ ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದೆ. ನಮ್ಮ ಸಮುದಾಯ ಹೆಚ್ಚಿರುವ ಹದಿನೆಂಟು ಹಳ್ಳಿಗಳ ಜವಾಬ್ದಾರಿ ವಹಿಸಿದ್ದರು. ಮೂರು ದಿನಗಳ ಕಾಲ ಅಷ್ಟೂ ಹಳ್ಳಿಗಳಲ್ಲಿ ಪ್ರಚಾರ ನಡೆಸಿದ್ದೆ, ಬಿಜೆಪಿ ಸಾಧನೆ ಹಾಗೂ ನಮ್ಮ ಸಮುದಾಯಕ್ಕೆ ಬಿಜೆಪಿ ಕೊಡುಗೆಗಳೇನು ಎಂಬುದರ ಬಗ್ಗೆ ಮತದಾರರಲ್ಲಿ ಅರಿವು ಮೂಡಿಸಿದ್ದೆ. ಮತದಾರರು ಬಿಜೆಪಿಯನ್ನು ಹರಸಿದ್ದಾರೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದರು.

ಕೋಟ್ಯಂತರ ರೂ. ವೆಚ್ಚದ ಅಭಿವೃದ್ಧಿ: ಶಿಡ್ಲಘಟ್ಟ-ಹೊಸಕೋಟೆ-ಆನೇಕಲ್ ರಸ್ತೆಯಿಂದ (ರಾ.ಹೆ-35) ದ್ಯಾವಸಂದ್ರ ಕ್ರಾಸ್, ಅನುಪಹಳ್ಳಿ ಕ್ರಾಸ್, ಬಾಲೇನಹಳ್ಳಿ ಕ್ರಾಸ್, ಟಿ.ಅಗ್ರಹಾರ ಮೂಲಕ ತಮ್ಮರಸನಹಳ್ಳಿ, ಚಿಕ್ಕನಹಳ್ಳಿ ಜಿಲ್ಲಾ ಮುಖ್ಯರಸ್ತೆ ಸೇರುವ ರಸ್ತೆಯಗೆ ಅಪೆಂಡಿಕ್ಸ್-ಇ ಅನುದಾನ 2.10 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು. ಹಾಗೆಯೇ 4.99 ಕೋಟಿ ರೂ. ವೆಚ್ಚದಲ್ಲಿ ರಾ.ಹೆ-207 ರ ರಸ್ತೆಯಿಂದ ಉಪ್ಪಾರಹಳ್ಳಿ,ಕಲ್ಲಹಳ್ಳಿ,ಕುರುಬರಹಳ್ಳಿ,ಬಿಆರ್‌ಎಫ್ ರಸ್ತೆ,ದೊಡ್ಡಹುಲ್ಲೂರು ಮೂಲಕ ಹಲಸಹಳ್ಳಿ ಬಳಿ ರಾ.ಹೆ-4 ಸೇರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net