ಸಾರ್ವಜನಿಕರೊಂದಿಗೆ ಒಡನಾಟ ಉತ್ತಮವಾಗಿರಲಿ

CTD 30 ZP CEO BETI
Published on

ಚಿತ್ರದುರ್ಗ: ತಾಲೂಕಿನ ಕಾಲ್ಗೆರೆ, ಇಸ್ಸಾಮುದ್ರ ಗ್ರಾಪಂಗಳಿಗೆ ಗುರುವಾರ ಜಿಪಂ ಸಿಇಒ ಎಸ್.ಜೆ. ಸೋಮಶೇಖರ್ ಹಠಾತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಾಲ್ಗೆರೆ ಗ್ರಾಪಂ ಕಚೇರಿಯಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆ ಕಡತ ಪರಿಶೀಲಿಸಿದರು. ನಂತರ ಅಜಾದ್ ನಗರದಲ್ಲಿ ಬೂದು ನಿರ್ವಹಣೆ ಕಾಮಗಾರಿ ವೀಕ್ಷಿಸಿದರು. ನರೇಗಾದಡಿ ನಿಯಮಾನುಸಾರ ಕಾಮಗಾರಿ ಅನುಷ್ಠಾನಗೊಳಿಸಬೇಕು. ಗುಣಮಟ್ಟವನ್ನೂ ಕಾಪಾಡಿಕೊಳ್ಳಬೇಕು ಎಂದು ಸೂಚಿಸಿದರು.

ಇಸ್ಸಾಮುದ್ರ ಗ್ರಾಪಂಗೆ ಭೇಟಿ ನೀಡಿ ಕಂದಾಯ ವಸೂಲಿ ಮಾಹಿತಿ ಪಡೆದರು. ಸಿಬ್ಬಂದಿಯ ಹಾಜರಾತಿ ಪರಿಶೀಲಿಸಿದರು. ಅಧಿಕಾರಿಗಳು ಮತ್ತು ಸಿಬ್ಬಂದಿ ಸರಿಯಾದ ಸಮಯಕ್ಕೆ ಕೆಲಸಕ್ಕೆ ಹಾಜರಾಗಬೇಕು. ಸಾರ್ವಜನಿಕರೊಂದಿಗೆ ಉತ್ತಮ ಒಡನಾಟವಿಟ್ಟುಕೊಳ್ಳಬೇಕು. ಯಾವುದೇ ಸಮಸ್ಯೆಗಳು ಬಾರದಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.

ನರೇಗಾ ಯೋಜನೆ ಕಡತ ಪರಿಶೀಲಿಸಿ, ಮಾರ್ಗಸೂಚಿ ಮತ್ತು ಚೆಕ್‌ಲಿಸ್ಟ್ ಪ್ರಕಾರ ಕಾರ್ಯನಿರ್ವಹಿಸಲು ಸೂಚಿಸಿದರು. ನಂತರ ಅದೇ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳ ಹಾಜರಾತಿ, ಆರೈಕೆ, ಆರೋಗ್ಯ, ಗುಣಮಟ್ಟದ ಆಹಾರದ ಬಗ್ಗೆ ಪರಿಶೀಲಿಸಿದರು. ಮಕ್ಕಳ ಹಾಜರಾತಿ ಸರಿಯಾಗಿ ನಿರ್ವಹಿಸುವಂತೆ ಅಂಗನವಾಡಿ ಕಾರ್ಯಕರ್ತೆಗೆ ಸೂಚಿಸಿದರು.

ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಮಕ್ಕಳ ಹಾಜರಾತಿ, ಅವರ ವಿದ್ಯಾಭ್ಯಾಸ, ಫಲಿತಾಂಶಗಳ ಬಗ್ಗೆ ಮಾಹಿತಿ ಪಡೆದರು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಅಡುಗೆ ಕೋಣೆ, ಆಹಾರದ ಗುಣಮಟ್ಟ ಪರಿಶೀಲಿಸಿ, ಮಕ್ಕಳೊಂದಿಗೆ ಬಿಸಿಯೂಟ ಸವಿದರು.

ಜಿಪಂ ಉಪ ಕಾರ್ಯದರ್ಶಿ ಕೆ. ತಿಮ್ಮಪ್ಪ, ತಾಪಂ ಇಒ ವೈ. ರವಿಕುಮಾರ್, ಜಿಪಂ ನರೇಗಾ ಯೋಜನೆ ಎಡಿಪಿಸಿ ಮೋಹನ್‌ಕುಮಾರ್, ಬಿಆರ್‌ಸಿ ಸಂಪತ್‌ಕುಮಾರ್, ಕಾಲ್ಗೆರೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ದಿಲೀಪ್‌ಕುಮಾರ್, ಗ್ರಾಪಂ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net