ಸಾರ್ವಜನಿಕರಿಗೆ ಮೂಲ ಸೌಕರ್ಯ ಕಲ್ಪಿಸಿ

Provide infrastructure to public
ವಿಜಯಪುರದ ವಿವಿಧ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಭೇಟಿ ನೀಡಿ ಪರಿಶೀಲಿಸಿದರು. ಪಾಲಿಕೆ ಆಯುಕ್ತ ಬದ್ರುದ್ದಿನ ಸೌದಾಗರ, ಉಪ ಆಯುಕ್ತ ಮಹಾವೀರ ಬೋರಣ್ಣವರ ಇದ್ದಾರೆ.
Published on

ವಿಜಯಪುರ: ರಸ್ತೆ, ಒಳಚರಂಡಿ, ಕುಡಿಯುವ ನೀರು ಸೇರಿದಂತೆ ಸಾರ್ವಜನಿಕರಿಗೆ ಮೂಲ ಸೌಕರ್ಯಗಳು ಸಕಾಲದಲ್ಲಿ ಸಮರ್ಪಕವಾಗಿ ದೊರೆಯುವಂತೆ ನೋಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದರು.

ಶುಕ್ರವಾರ ಬೆಳಗ್ಗೆ ನಗರದ ಜಾಮಿಯಾ ಮಸೀದಿ ರಸ್ತೆ, ಹಕೀಮ್ ಚೌಕ್, ಗೋಳಗುಮ್ಮಟ ರಸ್ತೆ, ರೈಲ್ವೆ ಸ್ಟೇಶನ್ ರಸ್ತೆ, ನವಬಾಗ ರಸ್ತೆ ಸೇರಿದಂತೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದರು.

ರೈಲ್ವೆ ಸ್ಟೇಶನ್ ರಸ್ತೆಯ ಬದಿಗಳಲ್ಲಿ ಒಳಚರಂಡಿ ಕಾಮಗಾರಿ ವೈಜ್ಞಾನಿಕವಾಗಿ ಕೈಗೊಳ್ಳುವಂತೆ ಸೂಚಿಸಿದರು. ಅತಿಕ್ರಮಣ ತೆರವುಗೊಳಿಸಬೇಕು. ಎಡಿಎಲ್‌ಆರ್ ಹಾಗೂ ಮಹಾನಗರ ಪಾಲಿಕೆ ಜಂಟಿಯಾಗಿ ಸಮೀಕ್ಷೆ ಕೈಗೊಳ್ಳಬೇಕೆಂದರು.

ನವಬಾಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ರಸ್ತೆ ಕೆಸರಿನಿಂದಾವೃತವಾಗಿದ್ದನ್ನು ಗಮನಿಸಿದರು. ಮಳೆ ಬಂದಾಗ ಬಡಾವಣೆಯ ನೀರು ರಸ್ತೆಗೆ ಆಗಮಿಸುತ್ತಿದೆ. ಒಳಚರಂಡಿ ನೀರಿನೊಂದಿಗೆ ಮಳೆ ನೀರು ಮಿಶ್ರಣಗೊಂಡು ಮನೆಗಳಿಗೆ ನುಗ್ಗುತ್ತಿದೆ ಎಂದು ಸ್ಥಳೀಯರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಕೂಡಲೇ ಸ್ಥಳದಲ್ಲಿದ್ದ ಪಾಲಿಕೆ ಆಯುಕ್ತರಿಗೆ ವ್ಯವಸ್ಥೆ ಸರಿಪಡಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಜಂಡಾ ಕಟ್ಟೆಯ ಬಳಿ ಸಿಸಿ ರಸ್ತೆ ನಿರ್ಮಾಣಕ್ಕೆ ಸೂಚಿಸಿದರು.

ನಾಗಠಾಣ ಕ್ಷೇತ್ರ ವ್ಯಾಪ್ತಿಯಲ್ಲಿರುವ ಗೋಳಗುಮ್ಮಟ ಸ್ಮಾರಕದ ಕೋಟೆಗೋಡೆ ಪಕ್ಕದ ರಸ್ತೆ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆಯ 140 ಲಕ್ಷ ರೂ.ಅನುದಾನ ಸದ್ಭಳಕೆ ಮಾಡಿಕೊಳ್ಳಬೇಕೆಂದರು. ಉದ್ದೇಶಿತ ರಸ್ತೆಯ ಸಮೀಕ್ಷೆ ಕೈಗೊಳ್ಳುವಂತೆ ಸೂಚಿಸಿದರು. ನಗರ ಸೌಂದರ್ಯೀಕರಣಕ್ಕೆ ಪೂರಕವಾಗಿ ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಸೂಚಿಸಿದರು.

ಮಹಾನಗರ ಪಾಲಿಕೆ ಆಯುಕ್ತ ಬದ್ರುದ್ದಿನ ಸೌದಾಗರ, ಉಪ ಆಯುಕ್ತ ಮಹಾವೀರ ಬೋರಣ್ಣವರ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ಕೆಆರ್‌ಐಡಿಎಲ್ ಅಭಿಯಂತರ ತಿಮ್ಮರಾಜಪ್ಪ, ಡಿಟಿಸಿ ಅನೀಲಕುಮಾರ ಬಣಜಿಗೇರ, ಪಾಲಿಕೆ ಕಾರ್ಯನಿರ್ವಾಹಕ ಅಭಿಯಂತರ ಶರಣಪ್ಪ, ಪರಿಸರ ಅಭಿಯಂತರ ಅಶೋಕ ಸಜ್ಜನ, ಮಲ್ಲಿಕಾರ್ಜುನ ಚಿಕೊಂಡ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net