ಸಾರ್ವಜನಿಕರಿಗೆ ಬಾಲ್ಯವಿವಾಹ ಅರಿವು ಅವಶ್ಯ

17Rajesh9
Published on

ಚಾಮರಾಜನಗರ: ಜಿಲ್ಲಾ ಕಾರಾಗೃಹದಲ್ಲಿ ಶೇ.50ರಷ್ಟು ಪೋಕ್ಸೋ ಪ್ರಕರಣಗಳಲ್ಲಿ ಯುವಕರು ಜೈಲುವಾಸ ಅನುಭವಿಸುತ್ತಿದ್ದಾರೆ. ಇದು ದುರದೃಷ್ಟಕರ ಸಂಗತಿಯಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಕಳವಳ ವ್ಯಕ್ತಪಡಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್ ಸಮ್ಮುಖದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಬಾಲ್ಯವಿವಾಹ ನಿಷೇದಾಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿ ಘೋಷಿಸುವ ಸಂಬಂಧ ಸಾರ್ವಜನಿಕರಿಗೆ ಅರಿವು ಮೂಡಿಸುವ ಪರಿಣಾಮಕಾರಿ ಚಟುವಟಿಕೆಗಳನ್ನು ಪ್ರತಿ ಗ್ರಾಮಪಂಚಾಯಿತಿ, ಹೋಬಳಿ, ತಾಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ಹಮ್ಮಿಕೊಳ್ಳಲು ಅವಶ್ಯ ಸಿದ್ದತೆಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.

ಮಾರ್ಚ್ 1ರಿಂದ ನವೆಂಬರ್ 14 ರವರೆಗೆ ಜಿಲ್ಲೆಯ 130 ಗ್ರಾಮ ಪಂಚಾಯಿತಿ ಹಾಗೂ ತಾಲೂಕುಗಳನ್ನು ಬಾಲ್ಯ ವಿವಾಹದಿಂದ ಮುಕ್ತಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳು ನಿರಂತರ ಕಾರ್ಯಾಚರಣೆಗೆ ಮುಂದಾಗಬೇಕು. ಈ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಮಟ್ಟದ ಅಧಿಕಾರಿ, ಸಿಬ್ಬಂದಿ ಗುರುತಿಸಿ ನವೆಂಬರ್ 14ರ ಮಕ್ಕಳ ದಿನಾಚರಣೆಯಂದು ಬಹುಮಾನ, ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಗುವುದು ಎಂದು ತಿಳಿಸಿದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್ ಮಾತನಾಡಿ, ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸುವ ಸಲುವಾಗಿ ಚೈಲ್ಡ್ ಮ್ಯಾರೇಜ್ ಪ್ರಿವೆನ್ಸನ್ ಪ್ರೊಟೆಕ್ಷನ್ ಕಮಿಟಿ ಕ್ರಿಯಾಶೀಲವಾಗಬೇಕು. ಬಾಲ್ಯವಿವಾಹ ಗ್ರಾಮ ಪಂಚಾಯಿತಿಗಳಲ್ಲಿ ಮಕ್ಕಳ ಗ್ರಾಮಸಭೆಗಳು, ಎಲ್ಲ ಶಾಲೆಗಳ ಶಾಲಾ ಅಭಿವೃದ್ಧಿ ಸಮಿತಿ, ಬಾಲವಿಕಾಸ ಸಮಿತಿ, ಮಕ್ಕಳ ಕಲ್ಯಾಣ ಸಮಿತಿಗಳು ನಿಗದಿತ ಕಾಲಮಿತಿಯಲ್ಲಿ ಸಭೆಗಳನ್ನು ನಡೆಸಿ ಕಾರ್ಯ ಚಟುವಟಿಕೆಗಳನ್ನು ಚುರುಕುಗೊಳಿಸಬೇಕು ಎಂದರು. ಪ್ರತಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಜರುಗುವ ಮದುವೆಗಳ ಬಗ್ಗೆ ಆಯಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮಾಹಿತಿ ನೀಡಬೇಕು. ಎಲ್ಲ ಗ್ರಾಮ ಪಂಚಾಯಿತಿ ಅಧಿಕಾರಿಗಳು ಜನರಿಗೆ ಬಾಲ್ಯವಿವಾಹಕ್ಕೆ ಮುಂದಾಗದಂತೆ ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಬೇಕು. ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪ್ರತಿ 15 ದಿನಗಳಿಗೆ ಪ್ರಗತಿ ಪರಿಶೀಲನಾ ಸಭೆಗಳನ್ನು ಏರ್ಪಡಿಸಬೇಕು. ಬಾಲ್ಯವಿವಾಹ ನಿರ್ಮೂಲನೆಗಾಗಿ ಆಕಾಶವಾಣಿ ಸೇರಿದಂತೆ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಬೇಕು. ಜಿಲ್ಲಾ ಮಟ್ಟದಲ್ಲಿ ಮಕ್ಕಳ ರಕ್ಷಣಾ ನೀತಿಯನ್ನು ರೂಪಿಸಿ ಜಾರಿಗೊಳಿಸಬೇಕು ಎಂದು ಸಲಹೆ ಮಾಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ ಪ್ರಸನ್ನ, ಡಿವೈಎಸ್‌ಪಿ ಲಕ್ಷ್ಮಯ್ಯ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಚಲುವರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಮಂಜುನಾಥ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್. ಚಿದಂಬರ, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net