

ಹನೂರು: ವಿದ್ಯುತ್ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಭೆಯಲ್ಲಿ ಸ್ವೀಕರಿಸುವ ದೂರುಗಳನ್ನು ಶೀಘ್ರ ಬಗೆಹರಿಸುವುದರ ಮೂಲಕ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಬೇಕು ಎಂದು ಸೆಸ್ಕ್ ಸೂಪರಿಂಟೆಂಡೆಂಟ್ ಇಂಜಿನಿಯರ್ ಸೋಮರಾಜು ಸೂಚಿಸಿದರು.
ಪಟ್ಟಣದ ಸೆಸ್ಕ್ ಉಪ ವಿಭಾಗೀಯ ಕಚೇರಿ ಆವರಣದಲ್ಲಿ ಶನಿವಾರ ಸಂಜೆ ವಿದ್ಯುತ್ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅಯೋಜಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದರು.
ಅಕ್ರಮ, ಸಕ್ರಮದಡಿ ರೈತರು ಈಗಾಗಲೇ ವಿದ್ಯುತ್ ಸಂಪರ್ಕವನ್ನು ಪಡೆದುಕೊಂಡಿದ್ದು, ಇದರಲ್ಲಿ ಇಲಾಖೆಗೆ ಹಣವನ್ನು ಪಾವತಿಸಿದವರಿಗೆ ವಿದ್ಯುತ್ ಸಂಪರ್ಕವನ್ನು ಸಕ್ರಮಗೊಳಿಸಬೇಕು. ನಿರಂತರ ವಿದ್ಯುತ್ ಜ್ಯೋತಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದರು.
ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ ಎಂಬ ದೂರಿದೆ. ಅದ್ದರಿಂದ ಈ ಬಗ್ಗೆ ಕ್ರಮ ವಹಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು. ವಿದ್ಯುತ್ ಸಂಗ್ರಹ ಸಾಮರ್ಥ್ಯ ಕ್ಷೀಣಿಸಿರುವ ಟಿಸಿಗಳನ್ನು ಬದಲಾಯಿಸಬೇಕು ಎಂದರು.
ಸೆಸ್ಕ್ ಇಲಾಖೆಯಿಂದ ಸಿಗುವ ಸವಲತ್ತುಗಳನ್ನು ಗ್ರಾಹಕರಿಗೆ ದೊರಕಿಸಿಕೊಡಬೇಕು. ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ 24 ಗಂಟೆಗಳ ಸೇವೆಯನ್ನು ಒದಗಿಸಬೇಕು. ಜತೆಗೆ ಪ್ರತಿಯೊಬ್ಬರೂ ಕಾರ್ಯ ಕ್ಷಮತೆಯನ್ನು ಹೆಚ್ಚಿಸುವುದರ ಮೂಲಕ ಉತ್ತಮ ಸೇವೆ ನೀಡಬೇಕು ಎಂದು ತಿಳಿಸಿದರು.
ಇದಕ್ಕೂ ಮುನ್ನಾ ತಾಲೂಕು ರೈತ ಸಂಘದ ಅಧ್ಯಕ್ಷ ಚಂಗಡಿ ಕರಿಯಪ್ಪ ಮಾತನಾಡಿ, ಹನೂರು ಭಾಗದಲ್ಲಿ ಕೆಲ ರೈತರು ವಿದ್ಯುತ್ ಟ್ರಾನ್ಸ್‌ಫಾರ್ಮರ್ ಅಳವಡಿಸುವ ಸಂಬಂಧ ಇಲಾಖೆಗೆ ಹಣ ಪಾವತಿಸಿ ವರ್ಷವೇ ಕಳೆದಿದೆ. ಆದರೆ ಇದುವರೆಗೂ ಟಿಸಿ ಅಳವಡಿಸಿಲ್ಲ. ಇನ್ನು ಕೆಲವೆಡೆ ಟಿಸಿ ಅಳವಡಿಸಲಾಗಿದೆ. ಅದರೆ ವಿದ್ಯುತ್ ಸಂಪರ್ಕ ನೀಡಿಲ್ಲ. ಇದರಿಂದ ರೈತರು ತೊಂದರೆ ಅನುಭವಿಸುವಂತಾಗಿದೆ. ಈ ಬಗ್ಗೆ ರೈತರು ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅದ್ದರಿಂದ ಈ ಬಗ್ಗೆ ಅಗತ್ಯ ಕ್ರಮವಹಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ವಿದ್ಯುತ್ ಸಮಸ್ಯೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ 16 ದೂರುಗಳು ಸ್ವೀಕಾರವಾದವು. ಈ ಸಂದರ್ಭದಲ್ಲಿ ಎಇಇ ಶಂಕರ್, ಎಇ ರಂಗಸ್ವಾಮಿ, ಜೆಇಗಳಾದ ವೆಂಕಟೇಶ್‌ಮೂರ್ತಿ, ಮಹೇಶ್ ಹಾಗೂ ಕಚೇರಿ ನೌಕರರು ಇದ್ದರು.