

ಅರಕಲಗೂಡು: ಸರ್ಕಾರಿ ಕಚೇರಿಗಳಲ್ಲಿ ಜನರ ಕೆಲಸ ಕಾರ್ಯಗಳನ್ನು ವ್ಯವಸ್ಥಿತವಾಗಿ ಮಾಡದ ಕುರಿತು ಸಮಸ್ಯೆಗಳಿದ್ದಲ್ಲಿ ಸಾರ್ವಜನಿಕರು ಲೋಕಾಯುಕ್ತಕ್ಕೆ ದೂರು ನೀಡಿದಲ್ಲಿ ಈ ಕುರಿತು ಪರಿಶಿಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹಾಸನ ಲೋಕಾಯುಕ್ತ ಎಸ್ ಪಿ ಮಲ್ಲಿಕ್ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಿಗೆ ಸಿಬ್ಬಂದಿಯೊಂದಿಗೆ ತೆರಳಿ ತಿಂಗಳು ಅಥವಾ ಎರಡು ತಿಂಗಳಿಗೊಮ್ಮೆ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸುವ ಕಾರ್ಯ ನಡೆಸಲಾಗುತ್ತಿದೆ. ಸಾರ್ವ ಜನಿಕರು ತಮ್ಮ ಸಮಸ್ಯೆಗಳ ಕುರಿತು ಲಿಖಿತವಾಗಿ ದೂರು ನೀಡಿದಲ್ಲಿ ಪರಿಶೀಲಿಸಿ ಕ್ರಮ ವಹಿಸಲಾಗುವುದು. ಗುಪ್ತ ಮಾಹಿತಿಗಳಿದ್ದರೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರವ ತಮ್ಮ ಕಚೇರಿಗೆ ಬಂದು ದೂರು ನೀಡಬಹುದು. ಇಲ್ಲವೆ ಕಚೇರಿ ದೂರವಾಣಿ ನಂ 08172- 295198 ಗೆ ಕರೆ ಮಾಡಿ ಮಾಹಿತಿ ನೀಡಿದರೂ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ವಿವಿಧ ಸಮಸ್ಯೆಗಳಿಗೆ ಸಂಬಂದಿಸಿದಂತೆ 12 ದೂರು ಗಳು ಬಂದಿವೆ. ಕಂದಾಯ, ಸರ್ವೆ ಇಲಾಖೆಗಳ ಕುರಿತು ಹೆಚ್ಚಿನ ದೂರುಗಳಿವೆ, ಗ್ರಾಪಂ ಹಾಗೂ ಪಪಂ ಸಮಸ್ತೆಗಳ ಬಗ್ಗೆಯೂ ದೂರುಗಳು ಬಂದಿವೆ. ದೂರುಗಳ ಕುರಿತು ಸಂಬಂಧಿಸಿದ ಇಲಾಖೆ ಅಧಿಕಾರಿಗಳನ್ನು ಕರೆಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದು ಒಂದು ವಾರದಲ್ಲಿ ಇತ್ಯರ್ಥವಾಗಲಿದೆ. ಎರಡು ಅರ್ಜಿಗಳ ಕುರಿತು ಪರಿಶಿಲಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಡಿವೈಎಸ್ ಪಿ ರವಿಕುಮಾರ್, ಇನ್ಸೆಪೆಕ್ಟರ್ ಬಾಲು ಮತ್ತು ಸಿಬ್ಬಂದಿ ಇದ್ದರು.