ಸಾರ್ವಜನಿಕರ ಹಿತದೃಷ್ಟಿಯಿಂದ ಉದ್ಯಾನವನಗಳ ಅಭಿವೃದ್ಧಿ

9 ckm 7
ಚಿಕ್ಕಮಗಳೂರಿನ ಗೌರಿಕಾಲುವೆ ಸಮೀಪ ಜಯಪ್ರಕಾಶ್ ನಾರಾಯಣ ಉದ್ಯಾನವನಕ್ಕೆ ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಬುಧವಾರ ಮುಂಜಾನೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳವಾಸೆ ರವಿ, ಮಸೂದ್, ಮೆಹರಾಜ್, ದಯಾನಂದ್, ಸುಜಾತ, ಜಮೀಲ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಸಾರ್ವಜನಿಕರು ಹಾಗೂ ಬಡಾವಣೆ ನಿವಾಸಿಗಳ ಹಿತದೃಷ್ಟಿಯಿಂದ ಉದ್ಯಾನವನಕ್ಕೆ ಬೋರ್‌ವೇಲ್ ಸೇರಿದಂತೆ ಮೂಲಭೂತ ಸೌಲಭ್ಯಕ್ಕೆ ಹೆಚ್ಚಿನ ಮಹತ್ವ ನೀಡಲಾಗುವುದು ಎಂದು ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ತಿಳಿಸಿದರು.

ನಗರದ ಗೌರಿಕಾಲುವೆ ಸಮೀಪ ಜಯಪ್ರಕಾಶ್ ನಾರಾಯಣ ಉದ್ಯಾನವನಕ್ಕೆ ಬುಧವಾರ ಮುಂಜಾನೆ ಭೇಟಿ ನೀಡಿ ಮಾತನಾಡಿದ ಅವರು, ಸ್ವಚ್ಛತೆ ಕಾಪಾಡುವಲ್ಲಿ ನಗರಸಭೆ ಜೊತೆಗೆ ಸ್ಥಳೀಯ ನಿವಾಸಿಗಳು ಕೈ ಜೋಡಿಸಿದರೆ ಕಸದ ರಾಶಿ ಬೀಳದಂತೆ ಕ್ರಮ ವಹಿಸಬಹುದು ಎಂದು ಹೇಳಿದರು.

ಪ್ರಸ್ತುತ ಉದ್ಯಾನವನ ಅಭಿವೃದ್ಧಿ ಸಮಿತಿಯವರು ಬೋರ್‌ವೇಲ್ ಮತ್ತು ಕುಳಿತುಕೊಳ್ಳಲು ಆಸನದ ಕೊರತೆಯಿದೆ ಎಂಬುದು ಗಮನಕ್ಕೆ ತಂದಿದ್ದು, ಶೀಘ್ರದಲ್ಲೇ ಪಾರ್ಕ್ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಳಿಸಿ ಅಚ್ಚುಕಟ್ಟಾಗಿ ನಿರ್ವಹಿಸಿ ಸಾರ್ವಜನಿಕರಿಗೆ ಸಮರ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಪಾರ್ಕ್ಗಳಲ್ಲಿ ಕಸಕಡ್ಡಿಗಳನ್ನು ಹಾಕಿ ಸ್ವಚ್ಛತೆ ಹಾಳು ಮಾಡಬಾರದು. ಸ್ವಚ್ಚಂಧ ಪರಿಸರ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಸಸಿಗಳನ್ನು ನೆಟ್ಟು ಪೋಷಿಸಿದರೆ ಭವಿಷ್ಯದಲ್ಲಿ ಮಕ್ಕಳಿಗೆ ನೆರಳಾಗಿ ಕಾಪಾಡಲಿದೆ ಎಂಬುವ ಸಾಮಾನ್ಯ ಜ್ಞಾನ ಹೊಂದಬೇಕು ಎಂದು ತಿಳಿಸಿದರು.

ಉದ್ಯಾನವನ ಅಭಿವೃದ್ಧಿ ಸಮಿತಿ ಅಧ್ಯಕ್ಷ ರವಿ ಕಳವಾಸೆ ಮಾತನಾಡಿ, ರಾತ್ರಿವೇಳೆ ಕೆಲವು ಯುವಕರು ಪಾರ್ಕ್ ಒಳಗೆ ಅನೈತಿಕ ಚಟುವಟಿಕೆಗಳ ತಾಣವಾಗಿಸಿಕೊಂಡಿದ್ದಾರೆ. ಹೀಗಾಗಿ ನಗರಸಭೆ ಆಡಳಿತವು ರಾತ್ರಿಪಾಳಯದಲ್ಲಿ ಎಚ್ಚರಿಸಲು ಅಧಿಕಾರಿಗಳನ್ನು ನೇಮಿಸಿದರೆ ಅನುಕೂಲವಾಗಲಿದೆ ಎಂದರು.

ಪಾರ್ಕ್ ಅಭಿವೃದ್ಧಿ ಸಹಿಸದ ಕೆಲವರು ಮನೆಗಳ ಕಸಗಳನ್ನು ಪಾರ್ಕ್ಗಳಲ್ಲಿ ಹಾಕುತ್ತಿರುವುದು ಕಂಡು ಬಂದಿದೆ. ಹೀಗಾಗಿ ಸಿಸಿಟಿವಿ ಅಳವಡಿಸಿದರೆ ಅನುಕೂಲ. ಜೊತೆಗೆ ಪಾರ್ಕ್ ಆವರಣದಲ್ಲಿ ಅಂಗನವಾಡಿ ಕೇಂದ್ರವಿದ್ದು, ಮಕ್ಕಳಿಗೆ ಆಟೋಪಕರಣಗಳ ಸಾಮಾಗ್ರಿ ಅಳವಡಿಸಿ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಸಹಕರಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಉದ್ಯಾನವನ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಸೂದ್, ಸಮಿತಿಯವರಾದ ಮೆಹ ರಾಜ್, ದಯಾನಂದ್, ಸುಜಾತ, ಜಮೀಲ್, ಭವ್ಯ, ಸುಜಾತ ಶಂಕರ್, ಸರಸ್ವತಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net