

ಚಿತ್ರದುರ್ಗ: ಸರ್ಕಾರಿ ಸೇವೆಯಲ್ಲಿರುವಾಗ ಸಾರ್ವಜನಿಕರ ಸೇವೆಯೇ ಪರಮ ಗುರಿಯಾಗಿರಬೇಕು. ಅವರ ಹಿತಾಸಕ್ತಿ ಕಾಪಾಡಲು ಹೆಚ್ಚಿನ ಒತ್ತು ನೀಡಬೇಕು ಎಂದು ರಾಜ್ಯ ಲೋಕೋಪಯೋಗಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಡಾ.ಕೆ.ಎಸ್.ಕೃಷ್ಣಾರೆಡ್ಡಿ ಸಲಹೆ ನೀಡಿದರು.
ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಶನಿವಾರ ಪಿಡಬ್ಲುೃಡಿ ಚಿತ್ರದುರ್ಗ ವಿಭಾಗ, ಗುತ್ತಿಗೆದಾರರ ಸಂಘ, ಲೋಕೋಪಯೋಗಿ ಇಲಾಖೆ ನೌಕರರಿಂದ ಆಯೋಜಿಸಿದ್ದ ಗೌರವ ಸಮರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಧಿಕಾರ, ದರ್ಪದ ವರ್ತನೆ ಶೋಭೆ ತರುವಂತದಲ್ಲ. ಆದ್ದರಿಂದ ಜವಾಬ್ದಾರಿ ಅರಿತು ಉತ್ತಮ ಕೆಲಸ ಮಾಡಿದರೆ ಸಾರ್ವಜನಿಕರ ಮೆಚ್ಚುಗೆಗೂ ಪಾತ್ರರಾಗಬಹುದು. ಆದರಾಭಿಮಾನ, ಗೌರವವೂ ಲಭಿಸುತ್ತದೆ ಎಂದರು.
ಬಯಲು ಸೀಮೆ ಚಿತ್ರದುರ್ಗ ಜಿಲ್ಲೆಯಲ್ಲಿ ಈವರೆಗೂ ಯಾವುದೇ ನೀರಾವರಿ ಸೌಕರ್ಯಗಳು ಇರಲಿಲ್ಲ. ಭದ್ರಾ ಮೇಲ್ದಂಡೆ ಯೋಜನೆಯಡಿ ಈ ಭಾಗದ ಕೆರೆಗಳು ಮತ್ತು ವಿ.ವಿ.ಸಾಗರಕ್ಕೆ ನೀರುಣಿಸುವ ಕಾರ್ಯಕ್ಕೆ ನಾವೆಲ್ಲರೂ ಕೂಡ ಪ್ರಾದೇಶಿಕ ಅಭಿಮಾನದಿಂದ ಹಗಲು ರಾತ್ರಿಯೆನ್ನದೇ ಸರ್ಕಾರದ ಆಶಯದಂತೆ ಕಾರ್ಯನಿರ್ವಹಿಸಿದ್ದೇವೆ. ಇಲಾಖೆಯ ಅಧಿಕಾರಿಗಳು ಹೆಚ್ಚು ಸಹಕಾರ ನೀಡಿದ್ದರಿಂದಾಗಿ ಇದು ಸಾಧ್ಯವಾಯಿತು. ಮಣ್ಣಿನ ಋಣ ಪ್ರತಿಯೊಬ್ಬರೂ ತೀರಿಸಬೇಕಿದೆ ಎಂದು ಕಿವಿಮಾತು ಹೇಳಿದರು.
ಶಿವಮೊಗ್ಗ ಪಿಡಬ್ಲುೃಡಿ ಮುಖ್ಯ ಇಂಜಿನಿಯರ್ ಬಿ.ಟಿ.ಕಾಂತರಾಜ್ ಮಾತನಾಡಿ, ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಿ. ಕರ್ತವ್ಯ ಪ್ರಜ್ಞೆ, ನಿಸ್ವಾರ್ಥತೆಯಿಂದ ದುಡಿದಾಗ ಸಮುದಾಯ ನಮ್ಮನ್ನು ಗೌರವಿಸುತ್ತದೆ ಎಂದರು.
ಚಿತ್ರದುರ್ಗ ಪಿಡಬ್ಲುೃಡಿ ಕಾರ್ಯಪಾಲಕ ಇಂಜಿನಿಯರ್ ಟಿ.ಎಸ್.ಮಲ್ಲಿಕಾರ್ಜುನ ಮಾತನಾಡಿ, ಈ ಜಿಲ್ಲೆಯ ಭದ್ರಾ ಮೇಲ್ದಂಡೆ ಯೋಜನೆ, ನಗರ ಮತ್ತು ಗ್ರಾಮೀಣ ಪ್ರದೇಶಗಳ ರಸ್ತೆ, ಸೇತುವೆಗಳೂ ಸೇರಿ ಹತ್ತು ಹಲವು ಕಾಮಗಾರಿಗಳನ್ನು ಸಮರ್ಪಕವಾಗಿ ಕಾರ್ಯಗತಗೊಳಿಸುವಲ್ಲಿ ಕೃಷ್ಣಾರೆಡ್ಡಿ ಅವರ ಶ್ರಮ ನಾವೆಲ್ಲರೂ ಮೆಚ್ಚುವಂತದ್ದು ಎಂದರು.
ಶಿವಮೊಗ್ಗ ಪಿಡಬ್ಲುೃಡಿ ಅಧೀಕ್ಷಕ ಕೆ.ಜಿ.ಜಗದೀಶ, ಚಿತ್ರದುರ್ಗ ನೋಂದಾಯಿತ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಆರ್.ಮಂಜುನಾಥ, ಪಿಡಬ್ಲುೃಡಿ ನಿವೃತ್ತ ಕಾರ್ಯದರ್ಶಿ ಗುರುಪ್ರಸಾದ್, ಮುಖ್ಯ ಇಂಜಿನಿಯರ್ ದುರುಗಪ್ಪ, ಪಿಡಬ್ಲುೃಡಿ ಅಧೀಕ್ಷಕ ಸತೀಶಬಾಬು, ನಿವೃತ್ತ ಅಧೀಕ್ಷಕ ಎಸ್.ರಮೇಶ್, ಸುಮಾ, ಗೋಪಿಕಾ ಇತರರಿದ್ದರು.