

ಹಾಸನ: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯಿಂದ ಹಾನಿಯಾಗಿರುವ ರಸ್ತೆಗಳನ್ನು ತಕ್ಷಣ ಸರಿಪಡಿಸಲು ಕ್ರಮವಹಿಸಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಆಗದಂತೆ ಎಚ್ಚರವಹಿಸಿ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಳೆಯಿಂದ ಉಂಟಾಗುತ್ತಿರುವ ಪರಿಸ್ಥಿತಿಯನ್ನು ಪರಿಶೀಲಿಸಲು ಶುಕ್ರವಾರ ಕೆಲವು ಜಿಲ್ಲೆಗಳ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದದ ಮೂಲಕ ಮಾತನಾಡಿದ ಅವರು, ಶಿರಾಡಿ ಘಾಟ್, ಚಾರ್ಮುಡಿ ಘಾಟ್‌ಗಳಲ್ಲಿ ವಾಹನ ಸಂಚಾರಕ್ಕೆ ಸಂಬಂದಿಸಿದಂತೆ ಮಂಗಳೂರು ಮತ್ತು ಹಾಸನ ಜಿಲ್ಲಾಧಿಕಾರಿಗಳು ಮುನ್ನೆಚ್ಚರಿಕೆವಹಿಸಿ ವಿವೇಚನೆಯಿಂದ ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳುವಂತೆ ಸೂಚಿಸಿದರು.
ಹೆಚ್ಚಿನ ಮಳೆಯಿಂದಾಗಿ ನದಿಗಳಿಗೆ ಅಧಿಕ ನೀರು ಬರುವುದರಿಂದ ನದಿ ಪಾತ್ರದಲ್ಲಿರುವ ಸಾರ್ವಜನಿಕರು ಎಚ್ಚರವಹಿಸುವಂತೆ ತಿಳುವಳಿಕೆ ನೀಡಿ ಎಂದರಲ್ಲದೆ, ಯಾವುದೇ ಅನಾಹುತಗಳು ಸಂಭವಿಸದಂತೆ ನಿಗಾವಹಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮಳೆಯಿಂದ ಕೆಲವು ಜಿಲ್ಲೆಗಳಲ್ಲಿ ಜೀವ ಹಾನಿ, ಮನೆ, ಬೆಳೆ, ರಸ್ತೆ ಹಾನಿಯಾಗಿದೆ ತಕ್ಷಣ ಪರಿಹಾರ ನೀಡಲು ಕ್ರಮಕೈಗೊಳ್ಳುವಂತೆ ಸೂಚಿಸಿದರು. ಕಂದಾಯ, ಪೊಲೀಸ್, ಜಿಲ್ಲಾ ಪಂಚಾಯಿತಿ, ಆಗ್ನಿಶಾಮಕ ದಳ ಜಂಟಿಯಾಗಿ ಕೆಲಸ ಮಾಡುವಂತೆ ತಿಳಿಸಿದರು.
ಮಳೆಯಿಂದ ಹಾನಿಯಾಗಿರುವ ರಸ್ತೆ, ಶಾಲೆ, ಅಂಗನವಾಡಿ ಕಾಮಗಾರಿಗಳನ್ನು ಮಾಡಲು ತಕ್ಷಣ ಕ್ರಮವಹಿಸಿ 15 ದಿನದಲ್ಲಿ ಕೆಲಸ ಪೂರ್ಣಗೊಳಿಸಿ ಬಿಲ್ ಸಲ್ಲಿಸುವಂತೆ ಸೂಚಿಸಿದರಲ್ಲದೆ ಭೂ ಕುಸಿತವಾಗುವ ಸಂಭವವಿದ್ದಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನರಿಗೆ ಜಾಗೃತಿ ಮೂಡಿಸಿ ಎಂದು ಸೂಚಿಸಿದರು.
ಮಲೆನಾಡು ಪ್ರದೇಶದಲ್ಲಿ ಮಳೆಯಿಂದಾಗಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಾಸವಾಗುತ್ತದೆ ತಕ್ಷಣ ಸ್ಪಂದಿಸಿ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಚಿವರು ಯಾವುದೇ ದೂರುಗಳು ಬರದಂತೆ ನಿಗಾವಹಿಸುವಂತೆ ತಿಳಿಸಿದರು.
ವಿಡಿಯೋ ಸಂವಾದದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ಪೂರ್ಣಿಮಾ, ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ ಹಾಗೂ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.
ವಿಡಿಯೋ ಸಂವಾದದ ನಂತರ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾದಿಕಾರದ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ಪೂರ್ಣಿಮಾ ಅವರು, ಸಚಿವರ ಸೂಚನೆಯಂತೆ ಅಧಿಕಾರಿಗಳು ನಿಗಾವಹಿಸಿ ಮಳೆಯಿಂದ ಹಾನಿಯಾಗಿರುವ ಬಗ್ಗೆ ನೈಜವಾಗಿರುವುದನ್ನು ವರದಿ ಮಾಡುವುದರ ಜೊತೆಗೆ ಕೆಲಸ ಮಾಡಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಡೆಂೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಸ್ವಚ್ಚತೆಗೆ ಹೆಚ್ಚಿನ ಗಮನಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಾರ್ವಜನಿಕರು ಮನೆ ಸುತ್ತಮುತ್ತ ಸ್ವಚ್ಚತೆ ಕಾಪಾಡಲು ಜಾಗೃತಿ ಮೂಡಿಸಲು ಗ್ರಾಮೀಣ ಭಾಗದಲ್ಲಿರುವ ಯುವಪ್ರರ್ತಕರು, ಪಶು ಸಖಿ ಹಾಗೂ ಕೃಷಿ ಸಖಿಯರನ್ನು ಬಳಕೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕಾಫಿ, ಟೀ ಅಂಗಡಿಗಳ ಬಳಿ ಕುಡಿದು ಬಿಸಾಡಿದ ಖಾಲಿ ಕಪ್ಪುಗಳಲ್ಲಿ ನೀರು ಸಂಗ್ರಹವಾಗಿ ಸೋಳ್ಳೆಗಳು ಉತ್ಪತ್ತಿಯಾಗುತ್ತದೆ ಈ ನಿಟ್ಟಿನಲ್ಲಿ ಸ್ವಚ್ಚತೆ ಕಾಪಾಡದ ಅಂಗಡಿ ನಡೆಸುತ್ತಿರುವವರಿಗೆ ದಂಡ ವಿಧಿಸುವಂತೆ ಅಧಿಕಾರಿಗಳಿ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ ಅವರು ಮಾತನಾಡಿ, ಮಳೆಯಿಂದ ಮಾನವ, ಜಾನುವಾರು ಜೀವ ಹಾನಿಯಾದರೆ ತಕ್ಷಣ ಪರಿಹಾರ ನೀಡಲು ಅಧಿಕಾರಿಗಳು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಚೆಸ್ಕಾಂನಿಂದ ಕಂಟ್ರೋಲ್ ರೂಂ ತೆರೆದು ವಿದ್ಯುತ್ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವಂತೆ ಸೂಚಿಸಿದರು.
ಸಕಲೇಶಪುರ ತಾಲ್ಲೂಕಿನಲ್ಲಿ ಅಗತ್ಯ ಬಿದ್ದರೆ ಗಂಜಿ ಕೇಂದ್ರ ತೆರೆಯಲು ಸ್ಥಳ ಗುರುತಿಸಿಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.