ಸಾರ್ವಜನಿಕರ ಕೆಲಸಗಳನ್ನು ತ್ವರಿತವಾಗಿ ಮಾಡಿಕೊಡಿ

16M.D.R.2
ಮದ್ದೂರು ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಾರ್ವಜನಿಕರ ಅಹವಾಲು, ದೂರು ಸ್ವೀಕಾರ ಮತ್ತು ಕುಂದುಕೊರತೆ ಸಭೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದೂರು ಸ್ವೀಕರಿಸಿದರು. ಪುಟ್ಟಮಾದಯ್ಯ, ಸುನೀಲ್ ಕುಮಾರ್, ಟಿ.ಎನ್.ನರಸಿಂಹಮೂರ್ತಿ ಇತರರು ಇದ್ದರು.
Published on

ಮದ್ದೂರು: ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರ ಹಾಗೂ ರೈತರ ಕೆಲಸಗಳನ್ನು ತ್ವರಿತವಾಗಿ ಮಾಡಿಕೊಡಬೇಕು. ಇಲ್ಲದಿದ್ದರೆ, ಅಂತಹ ಅಧಿಕಾರಿಗಳ ವಿರುದ್ಧ್ದ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕಾಯುಕ್ತ ಎಸ್ಪಿ ಪುಟ್ಟಮಾದಯ್ಯ ಎಚ್ಚರಿಕೆ ನೀಡಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸಾರ್ವಜನಿಕರಿಂದ ಅಹವಾಲು, ದೂರು ಸ್ವೀಕಾರ ಮತ್ತು ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರಿಗೆ ಶೀಘ್ರವಾಗಿ ಕೆಲಸಗಳನ್ನು ಮಾಡಿಕೊಡಬೇಕು. ಅನಗತ್ಯವಾಗಿ ಕಚೇರಿಗೆ ಅಲೆಸುವುದು, ಕೆಲಸ ಮಾಡಿಕೊಡಲು ಹಣಕ್ಕೆ ಬೇಡಿಕೆ ಇಡುವುದನ್ನು ಮಾಡಿದರೆ ಅಂತಹ ಅಧಿಕಾರಿಗಳ ವಿರುದ್ಧ್ದ ಕ್ರಮ ಕೈಗೊಳ್ಳಲಾಗುವುದು ಎಂದರು.

ತಾಲೂಕಿನ ಡಿ.ಮಲ್ಲಿಗೆರೆ ಗ್ರಾಮದ ಮಂಜು ಅವರು ಅರ್ಜಿ ಸಲ್ಲಿಸಿ ಮಾತನಾಡಿ, ತಾಲೂಕು ಪಂಚಾಯಿತಿ ನ್ಯಾಯಾಲಯದಲ್ಲಿ 11 ಬಿ ಇ-ಖಾತೆ ಮಾಡುವಂತೆ ಆದೇಶವಾಗಿದೆ. ದನದ ಕೊಟ್ಟಿಗೆ ನಿರ್ಮಾಣ ಮಾಡಲು ಆದೇಶವಾಗಿದ್ದರೂ ಪಿಡಿಒ ಮತ್ತು ಕಾರ್ಯದರ್ಶಿ ನನ್ನ ಕೆಲಸ ಮಾಡಿಕೊಡದೆ ಲಂಚ ನೀಡುವಂತೆ ಒತ್ತಾಯಿಸುತ್ತಿದ್ದರು. ಲಂಚ ನೀಡದ ಹಿನ್ನೆಲೆಯಲ್ಲಿ ನನ್ನ ಕೆಲಸ ಮಾಡಿಕೊಡಲು ಅನಗತ್ಯವಾಗಿ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಹೂತಗೆರೆ ಗ್ರಾಪಂನಲ್ಲಿ ವಿವಿಧ ಯೋಜನೆಗಳ ಅನುದಾನದಲ್ಲಿ ಅಂದಾಜು 20 ಲಕ್ಷಕ್ಕೂ ಹೆಚ್ಚು ಹಣ ದುರ್ಬಳಕೆಯಾಗಿದ್ದು, ಈ ಬಗ್ಗೆ ಮಾಹಿತಿ ಕೋರಿ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಲಾಗಿದೆ. ಆದರೆ, ಅರ್ಜಿ ದಿನಾಂಕ ಅವಧಿ ಮುಗಿದರೂ ಮಾಹಿತಿ ನೀಡುತ್ತಿಲ್ಲ. ಹೀಗಾಗಿ ಮಾಹಿತಿ ಕೊಡಿಸುವಂತೆ ರಾಮಲಿಂಗೇಗೌಡ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ರೈತ ಮುಖಂಡ ಹುರುಗಲವಾಡಿ ಉಮೇಶ್ ಮಾತನಾಡಿ, 1985 ರಿಂದ ಇಲ್ಲಿಯವರೆಗೆ ಖಾತೆ ಬುಕ್ ನೀಡುವಂತೆ ಬಿದರಕೋಟೆ ಗ್ರಾಪಂಗೆ ಹಲವಾರು ಬಾರಿ ಅರ್ಜಿ ಸಲ್ಲಿಸಿದರೂ ಸಂಬಂಧಪಟ್ಟ ಅಧಿಕಾರಿಗಳು ಖಾತೆ ಬುಕ್ ನೀಡಲು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಖಾತೆ ಬುಕ್ ನೀಡದ ಕಾರಣ ಈಗಾಗಲೇ ಕಳೆದ ಬಾರಿ ಲೋಕಾಯುಕ್ತ ಅಧಿಕಾರಿಗಳು ಸಭೆ ನಡೆಸಿದಾಗ ದೂರು ಸಲ್ಲಿಸಲಾಗಿತ್ತು. ಆದರೆ ಲೋಕಾಯುಕ್ತ ಅಧಿಕಾರಿಗಳು ಸಹ ಮಾಹಿತಿ ಕೊಡಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ವಿಚಾರವಾಗಿ ಮಾತನಾಡಿದ ಲೋಕಾಯುಕ್ತ ಅಧಿಕಾರಿಗಳು, ನಮಗೆ ದೂರಿನ ದಾಖಲಾತಿಯನ್ನು ಮತ್ತೊಮ್ಮೆ ನೀಡಿದರೆ ಆ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಅಂಕನಾಥಪುರದ ರೈತ ಸುನೀಲ್ ಮಾತನಾಡಿ, ಮುತ್ತುರಾಯನಕೆರೆಯಿಂದ ನಾಲೆ ಮೂಲಕ ನೀರು ತೆಗೆದುಕೊಂಡು ಹೋಗಿದ್ದಾರೆ. ಈ ವೇಳೆ ರೈತರಿಂದ ವಶಪಡಿಸಿಕೊಂಡಿರುವ ಜಮೀನುಗಳಿಗೆ ಸರ್ಕಾರ ಸೂಕ್ತ ಪರಿಹಾರ ನೀಡಿಲ್ಲ. ಕೆಲವರಿಗೆ ಪರಿಹಾರ ನೀಡಿದ್ದು, ಇನ್ನು ಕೆಲವರಿಗೆ ಪರಿಹಾರ ನೀಡಿಲ್ಲ. ಹೀಗಾಗಿ ಅಧಿಕಾರಿಗಳು ರೈತರಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದು, ರೈತರಿಗೆ ನ್ಯಾಯ ಕೊಡಿಸಬೇಕೆಂದು ಕೋರಿದರು.

ಇದೇ ವೇಳೆ ಸಾರ್ವಜನಿಕರು ತಾಲೂಕು ಕಚೇರಿಯ ಸರ್ವೇ ಇಲಾಖೆ ಹಾಗೂ ಇತರ ವಿಭಾಗಗಳಲ್ಲಿ ಸಮರ್ಪಕವಾಗಿ ದಾಖಲಾತಿಗಳು ಮತ್ತು ಕೆಲಸಗಳು ನಡೆಯುತ್ತಿಲ್ಲ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಡಿವೈಎಸ್ಪಿ ಸುನೀಲ್ ಕುಮಾರ್, ತಹಸೀಲ್ದಾರ್ ಟಿ.ಎನ್.ನರಸಿಂಹಮೂರ್ತಿ, ಇನ್ಸ್‌ಪೆಕ್ಟರ್‌ಗಳಾದ ಮೋಹನ್ ರೆಡ್ಡಿ, ಬ್ಯಾಟರಾಯಗೌಡ, ಸಿಬ್ಬಂದಿ ಮಹದೇವಸ್ವಾಮಿ, ನಂದೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net