

ಚಿಂತಾಮಣಿ : ಅಂಗವಿಕಲರು ಹಾಗೂ ಪಿಂಚಣಿದಾರರು ಇಲಾಖೆಗಳಿಗೆ ಅಲೆಯುವಂತೆ ಮಾಡಬಾರದು ಎಂದು ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಎಚ್.ವಿ.ಶಿವಶಂಕರ್ ತಿಳಿಸಿದರು.
ತಾಪಂ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಆಹಾರ ಅದಾಲತ್‌ನಲ್ಲಿ ಸಾರ್ವಜನಿಕರಿಂದ ಪಿಂಚಣಿ ಹಾಗೂ ಸಾಮಾಜಿಕ ಭದ್ರತೆ, ಅಂಗವಿಕಲರ ಸಮಸ್ಯೆಗಳ ಅಹವಾಲು ಸ್ವೀಕರಿಸಿ ಮಾತನಾಡಿದರು. ಕಚೇರಿಗಳಿಗೆ ಬರುವ ಸಾರ್ವಜನಿಕರ ಕೆಲಸ ತ್ವರಿತವಾಗಿ ಮಾಡಿಕೊಡಬೇಕು, ಮಾಸಿಕ ಪಿಂಚಣಿ ಆದೇಶ ಪತ್ರ ಸಮಯಕ್ಕೆ ಸರಿಯಾಗಿ ನೀಡುವ ಮೂಲಕ ಸಮಾಜದ ಕಟ್ಟ ಕಡೆಯ ಪ್ರಜೆಗೂ ಸರ್ಕಾರದ ಸೌಲಭ್ಯತಲುಪುವ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ಅಧಿಕಾರಿಗಳದ್ದು ಎಂದರು.
ಪಡಿತರ ನೀಡುವಲ್ಲಿ ವಿಳಂಬ, ಹಣ ಪಾವತಿಸಿಕೊಳ್ಳುವುದು ಕಾನೂನು ಉಲ್ಲಂಘನೆ ಯಾಗಲಿದೆ. ಅದಾಗ್ಯೂ ಪಡಿತರದಾರರಿಗೆ ತೊಡಕು ಉಂಟುಮಾಡುವ ನ್ಯಾಯಬೆಲೆ ಅಂಗಡಿಗಳ ಪರವಾನಗಿಯನ್ನೇ ರದ್ದುಪಡಿಸಲು ಶಿಫಾರಸ್ಸು ಮಾಡಲಾಗುವುದು ಈ ಬಗ್ಗೆ ಎಚ್ಚರದಿಂದ ಕಾರ್ಯನಿರ್ವಹಿಸಬೇಕು ಎಂದು ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ ಎಚ್ಚರಿಕೆ ನೀಡಿದರು.
ಆಹಾರ ಆಯೋಗದ ಸದಸ್ಯ ಬಿ.ಎ.ಮೊಹ್ಮದ್‌ಆಲಿ ಮಾತನಾಡಿ, ಇತ್ಯರ್ಥವಾಗದ ಅಹವಾಲುಗಳನ್ನು ಶೀಘ್ರದಲ್ಲಿ ಪರಿಹರಿಸುವಂತೆ ಇಲಾಖಾ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ರಾಜ್ಯ ಆಯೋಗದ ಸದಸ್ಯೆ ಮಂಜುಳಾ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರ ಇಲಾಖೆಯ ಜಿಲ್ಲಾ ಉಪ ನಿರ್ದೇಶಕಿ ಸವಿತಾ ,ತಹಸೀಲ್ದಾರ್ ಡಿ ಹನುಮಂತ ರಾಯಪ್ಪ, ತಾಪಂ ನಿರ್ವಹಣಾಧಿಕಾರಿ ಮಂಜುನಾಥ್. ಶಿರಸ್ತೇದಾರ್ ಶೋಭಾ, ಆಹಾರ ಇಲಾಖೆಯ ನಿರೀಕ್ಷಕ ಪ್ರಕಾಶ್, ಆರ್‌ಐ ಅಂಬರೀಶ್ ಮತ್ತಿತರರು ಇದ್ದರು.
ಪತ್ರಕರ್ತರಿಂದ ಮನವಿ: ತಾಲೂಕಿನಲ್ಲಿ 15 ಸಾವಿರಕ್ಕಿಂತ ಹೆಚ್ಚು ಮಂದಿಗೆ ಕಳೆದ 8 ತಿಂಗಳಿನಿಂದ ಪಿಂಚಣಿ ಸಿಗುತ್ತಿಲ್ಲ. ಪ್ರತಿನಿತ್ಯ ತಾಲೂಕು ಕಚೇರಿಗೆ ಅಲೆದಾಡುತ್ತಿದ್ದಾರೆ ಅವರ ಸಮಸ್ಯೆಯನ್ನು ಕೂಡಲೇ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಅವರೊಂದಿಗೆ ನಾವು ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳುತ್ತೇವೆ ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಮನವಿ ಸಲ್ಲಿಸಲಾಯಿತು.