ಸಾರ್ವಜನಿಕರ ಅನುಕೂಲಕ್ಕಾಗಿ ಕೆರೆ ಅಭಿವೃದ್ಧಿ

23KUDLIGI2
Published on

ಕೂಡ್ಲಿಗಿ: ಪಟ್ಟಣದ ಸುಂದರೀಕರಣ, ಸ್ವಚ್ಛತೆ ಹಾಗೂ ಮೂಲಸೌಕರ್ಯಕ್ಕೆ ಆದ್ಯತೆ ನೀಡುವುದಾಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.

ಸಂಸದರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಪಟ್ಟಣದ ಉಡುಸಲಮ್ಮನ ಕೆರೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಗುರುವಾರ ಮಾತನಾಡಿದರು. ಶತಮಾನಗಳಷ್ಟು ಹಳೆಯದಾದ ಉಡುಸಲಮ್ಮನ ಕೆರೆ ಪಟ್ಟಣ ಬೆಳೆದಂತೆ ಹೃದಯಭಾಗದಲ್ಲಿ ಇದೆ. ಕೆಲವರು ಕೆರೆಯ ಭೂ ಪ್ರದೇಶದಲ್ಲಿ ಅನಧಿಕೃತವಾಗಿ ಕಟ್ಟಡ ಕಟ್ಟಿದ್ದಾರೆ. ಇನ್ನು ಕೆಲ ನಿರಾಶ್ರಿತರು ಕೆರೆಯ ಏರಿ ಭಾಗದಲ್ಲಿ ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.

ಈ ನಿವಾಸಿಗಳಿಗೆ ಬೇರೆ ಕಡೆ ನಿವೇಶನ ನೀಡಿ ಸ್ಥಳಾಂತರ ಮಾಡಲಾಗುವುದು. ಅಕ್ರಮವಾಗಿ ಮನೆಗಳನ್ನು ನಿರ್ಮಿಸಿರುವ ಜಾಗವನ್ನು ವಶಪಡಿಸಿಕೊಂಡು, ವಾಯು ವಿಹಾರ ಮಾಡುವ ಸಾರ್ವಜನಿಕರಿಗೆ ಉತ್ತಮ ವಾತಾವರಣ ಕಲ್ಪಿಸುವ ಉದ್ದೇಶದಿಂದ ಕೆರೆಯನ್ನು ಸ್ವಚ್ಛಗೊಳಿಸಲಾಗುತ್ತಿದೆ. ಮಕ್ಕಳಿಗೆ ಆಟಿಕೆ ಸಾಮಗ್ರಿಗಳು, ವಾಯು ವಿಹಾರಿಗಳ ವಿಶ್ರಾಂತಿಗೆ ಆಸನಗಳು, ಬೋಟಿಂಗ್ ವ್ಯವಸ್ಥೆ ಮಾಡಲು ಯೋಜನೆ ರೂಪಿಸಲಾಗಿದೆ. ಜನರು ಏನಾದರೂ ಸಲಹೆ ನೀಡಿದರೆ ಪರಿಗಣಿಸಲಾಗುವುದು ಎಂದರು.

ಪಟ್ಟಣದ ಹೌಸಿಂಗ್ ಬೋರ್ಡ್ ಕಾಲನಿಯ ಉದ್ಯಾನವನ್ನು ಅಂದಾಜು 1 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗುವುದು. ವಾಯುವಿಹಾರ ಹಾಗೂ ಮಕ್ಕಳ ಆಟದ ಪರಿಕರಗಳನ್ನು ಅಳವಡಿಸುವ ಕಾಮಗಾರಿ ಶೀಘ್ರ ಕೈಗೆತ್ತಿಗೊಳ್ಳಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಗುರುಸಿದ್ದನ ಗೌಡ, ನಾಗಮಣಿ ಜಿಂಕಾಲ್, ಹಿರೇಕುಂಬಳಗುಂಟೆ ಉಮೇಶ್, ಹಡಗಲಿ ವೀರಭದ್ರಪ್ಪ, ಮಾದಿಹಳ್ಳಿ ನಜೀರ್, ಢಾಣಿ ರಾಘವೇಂದ್ರ, ಬಿ.ಕೆ.ರಾಘವೇಂದ್ರ, ಜಿಲಾನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net