

ಧಾರವಾಡ: ಕರೊನಾ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಗಣೇಶೋತ್ಸವ ಆಚರಿಸಲು ಕೇಂದ್ರ ಗೃಹ ಮಂತ್ರಾಲಯ ಹಾಗೂ ರಾಜ್ಯ ಸರ್ಕಾರ ಹೊರಡಿಸಿರುವ ನಿರ್ದೇಶನದಂತೆ ಜಿಲ್ಲೆಯಲ್ಲಿ ಜಾರಿಗೊಳಿಸಿರುವ ಮಾರ್ಗಸೂಚಿಗಳನ್ನು ಜಿಲ್ಲಾಧಿಕಾರಿ ನಿತೇಶ ಪಾಟೀಲ ಪ್ರಕಟಿಸಿದ್ದಾರೆ.
ಗಣೇಶ ಚತುರ್ಥಿ ಹಬ್ಬವನ್ನು ಸರಳ ಹಾಗೂ ಭಕ್ತಿಪೂರ್ವಕವಾಗಿ ದೇವಸ್ಥಾನ ಅಥವಾ ಮನೆಗಳಲ್ಲಿ ಆಚರಿಸುವುದು. ರಸ್ತೆ, ಗಲ್ಲಿ, ಓಣಿ, ಮೈದಾನ ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವಂತಿಲ್ಲ.
ಗಣೇಶ ಮೂರ್ತಿಗಳನ್ನು ನದಿ, ಕೆರೆ, ಕೊಳ, ಬಾವಿ ಮತ್ತು ಕಲ್ಯಾಣಿಗಳಲ್ಲಿ ವಿಸರ್ಜನೆ ಮಾಡುವಂತಿಲ್ಲ. ಮೂರ್ತಿಗಳನ್ನು ತರುವಾಗ ಹಾಗೂ ವಿಸರ್ಜನೆ ಸಮಯದಲ್ಲಿ ಮೆರವಣಿಗೆ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಮನೆಯಲ್ಲಿ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಗಳನ್ನು ಮನೆ ಆವರಣದಲ್ಲೇ ಬಕೆಟ್, ನೀರಿನ ಬ್ಯಾರಲ್ಗಳಲ್ಲಿ ವಿಸರ್ಜಿಸಬೇಕು.
ಗಣೇಶ ಹಬ್ಬ ಆಚರಿಸುವ ದೇವಸ್ಥಾನಗಳಲ್ಲಿ ನಿತ್ಯ ಸ್ಯಾನಿಟೈಸೇಷನ್, ದರ್ಶನಕ್ಕೆ ಬರುವ ಭಕ್ತರಿಗೆ ಸ್ಯಾನಿಟೈಸರ್ ಕೊಡಬೇಕು, ಥರ್ಮಲ್ ಸ್ಕ್ರೀನಿಂಗ್ ಮಾಡಬೇಕು. ದರ್ಶನ ಸರದಿಯಲ್ಲಿ ಜನರು ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಕಡ್ಡಾಯ.
ಹಬ್ಬ-ಹರಿದಿನಗಳು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಾಮರಸ್ಯ ಉಂಟಾಗಲು ಪೂರಕವಾಗಿರುವುದರಿಂದ ಗಣೇಶೋತ್ಸವವನ್ನು ಸೌಹಾರ್ದ ರೀತಿಯಿಂದ ಆಚರಿಸಿ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ಬಾರದಂತೆ ಎಚ್ಚರ ವಹಿಸಬೇಕು.
ರಾಜ್ಯ ಸರ್ಕಾರ, ಜಿಲ್ಲಾಡಳಿತ ಹೊರಡಿಸುವ ಆದೇಶ ಮತ್ತು ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ಭಾರತೀಯ ದಂಡ ಸಂಹಿತೆ ಸೆಕ್ಷನ್ 188ರ ಅಡಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕಣ್ಣೀರು ಹಾಕುತ್ತಿರುವ ಕಲಾವಿದರು!
ಧಾರವಾಡ: ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಸರ್ಕಾರ ಹೇರಿರುವ ನಿರ್ಬಂಧ ಸದ್ಯ ಮೂರ್ತಿ ಕಲಾವಿದರನ್ನು ಅತಂತ್ರ ಮಾಡಿದ್ದು, ಧಾರವಾಡದ ಕಲಾವಿದರೊಬ್ಬರು ಬಹಿರಂಗವಾಗಿಯೇ ‘ನಾವು ಮಾಡಿದ ಗಣೇಶ ಮೂರ್ತಿ ಸಮೇತ ಕೆರೆ, ಬಾವಿ ನೋಡಿಕೊಳ್ಳುತ್ತೇವೆ’ ಎಂಬರ್ಥದಲ್ಲಿ ಫೇಸ್ಬುಕ್ನಲ್ಲಿ ಅಳಲು ತೋಡಿಕೊಂಡಿದ್ದಾರೆ.
ಧಾರವಾಡದ ಪರಿಸರ ಸ್ನೇಹಿ ಕಲಾವಿದರ ಮಂಜುನಾಥ ಹಿರೇಮಠ ಫೇಸ್ಬುಕ್ನಲ್ಲಿ ಅಳಲು ತೋಡಿಕೊಂಡಿದ್ದಾರೆ. ಕರೊನಾ ಲಾಕ್ಡೌನ್ ಸಡಿಲಿಕೆ ಬಳಿಕ ಮದ್ಯದಂಗಡಿ, ಹೋಟೆಲ್ ಹಾಗೂ ಮಾರುಕಟ್ಟೆಯ ವಿವಿಧ ಚಟುವಟಿಕೆಗಳಿಗೆಲ್ಲ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಗಣೇಶ ಹಬ್ಬಕ್ಕೂ ಅವಕಾಶ ದೊರೆಯುತ್ತದೆ ಎಂದು ಭಾವಿಸಿದ್ದರು. ಅದರಂತೆ ಉತ್ಸವ ಮಂಡಳಿಯವರು ಗಣೇಶ ಮೂರ್ತಿ ಮಾಡಿಕೊಡಲು ಕೇಳಿದ್ದರು. ಆದರೆ, ಈಗ ಬಿಡುಗಡೆ ಮಾಡಿರುವ ಮಾರ್ಗಸೂಚಿ ಉತ್ಸವ ಮಂಡಳಿಯವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಈ ಮೊದಲಿನಂತೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲು ಅವಕಾಶ ಇಲ್ಲ. ಆಯಾ ದೇವಸ್ಥಾನಗಳಲ್ಲಿ ಪ್ರತಿಷ್ಠಾಪನೆಗೆ ಅವಕಾಶ ಇದ್ದರೂ ನದಿ, ಬಾವಿ, ಕೆರೆಗಳಲ್ಲಿ ವಿಸರ್ಜನೆ ಮಾಡುವಂತಿಲ್ಲ ಎಂಬ ನಿಯಮ ಹೇರಲಾಗಿದೆ. ಹೀಗಾಗಿ ಬಹಳಷ್ಟು ಉತ್ಸವ ಮಂಡಳಿಯವರು ಈಗ ಗಣೇಶ ಮೂರ್ತಿ ಬೇಡ ಎಂದು ಹೇಳುತ್ತಿದ್ದು, ಇದು ಕಲಾವಿದರನ್ನು ಅತಂತ್ರರನ್ನಾಗಿ ಮಾಡಿದೆ.
ಉತ್ಸವ ಮಂಡಳಿಯವರು ಕೊಟ್ಟಿದ್ದ ಮುಂಗಡ ಹಣದಲ್ಲಿ ಕಲಾವಿದರು ಪರಿಕರಗಳನ್ನು ತಂದಿದ್ದು, ವಾಪಸ್ ಕೊಡಲು ಹಣವೂ ಇಲ್ಲ. ಸಿದ್ಧಪಡಿಸಿರುವ ಮೂರ್ತಿ ಮಾರಾಟವಾಗುವುದೂ ಇಲ್ಲ ಎಂಬ ಚಿಂತೆಯಾಗಿದೆ. ಈ ಹಿನ್ನೆಲೆಯಲ್ಲಿ ತೀವ್ರವಾಗಿ ನೊಂದಿರುವ ಧಾರವಾಡ ಕೆಲಗೇರಿಯ ಕಲಾವಿದ ಮಂಜುನಾಥ ಹಿರೇಮಠ, ಅಳಲು ತೋಡಿಕೊಂಡು, ಈಗ ಏಕಾಏಕಿ ಇಂಥ ಸ್ಥಿತಿ ಬಂದರೆ ನಾವು ಏನು ಮಾಡುವುದು, ಈ ಮೂರ್ತಿಗಳ ಜೊತೆಗೆ ನಾವು ಕೆರೆ, ಬಾವಿ ನೋಡಿಕೊಳ್ಳುತ್ತೇವೆ ಎಂದು ಗಳಗಳನೆ ಅತ್ತಿದ್ದಾರೆ.
ಹುಬ್ಬಳ್ಳಿ-ಧಾರವಾಡ ಅವಳಿ ನಗರವೊಂದರಲ್ಲಿಯೇ 300ರಷ್ಟು ಜನ ಪರಿಸರ ಸ್ನೇಹಿ ಮೂರ್ತಿಕಾರರಿದ್ದು, ಅವರೆಲ್ಲರ ಪರಿಸ್ಥಿತಿಯೂ ಈಗ ಅಡಕತ್ತರಿಯಲ್ಲಿ ಸಿಲುಕಿದ ಅಡಕೆಯಂತಾಗಿ ಹೋಗಿದೆ. ಸರ್ಕಾರ ತಕ್ಷಣ ನಿಯಮ ಸಡಿಲಿಸುವುದನ್ನು ಅವರೆಲ್ಲ ಎದುರು ನೋಡುತ್ತಿದ್ದಾರೆ.
EndFragment