

ಮಂಡ್ಯ: ನಗರಸಭೆಗೆ ಸೇರಿದ ಹಾಗೂ ಸಾರ್ವಜನಿಕ ಜಾಗ ಹಾಗೂ ಸ್ಮಶಾನಕ್ಕೆ ಮೀಸಲಾಗಿರುವ ಜಾಗವನ್ನು ಒತ್ತುವರಿ ಮಾಡಿಕೊಳ್ಳಲು ಅವಕಾಶ ನೀಡಬೇಡಿ ಎಂದು ಶಾಸಕ ರವಿಕುಮಾರ್ ಗಣಿಗ ಸೂಚನೆ ನೀಡಿದರು.
ನಗರಸಭೆಯ ಧರಣಪ್ಪ ಸಭಾಂಗಣದಲ್ಲಿ ಅಧ್ಯಕ್ಷ ಎಂ.ವಿ.ಪ್ರಕಾಶ್ ಅಧ್ಯಕ್ಷತೆಯಲ್ಲಿ ಸೋಮವಾರ ಆಯೋಜಿಸಿದ್ದ ವಿಶೇಷ ಸಭೆಯಲ್ಲಿ ಸಾರ್ವಜನಿಕ ಜಾಗದ ಒತ್ತುವರಿ ವಿಷಯದ ಬಗ್ಗೆ ಗಂಭೀರ ಚರ್ಚೆ ನಡೆಯಿತು. ಸದಸ್ಯ ನಾಗೇಶ್ ಮಾತನಾಡಿ, ಉದಯಗಿರಿ ಬಡಾವಣೆಯಲ್ಲಿ ನಗರಸಭೆ ಜಾಗ ಮತ್ತು ಸ್ಮಶಾನ ಜಾಗ ಒತ್ತುವರಿಯಾಗಿದೆ. ಈ ವಿಷಯವಾಗಿ 2020ರಲ್ಲೇ ಜಿಲ್ಲಾಧಿಕಾರಿ ಎದುರು ಪ್ರಸ್ತಾವನೆ ಮಂಡಿಸಿದಾಗ ಈ ಜಾಗದ ಸರ್ವೇ ನಡೆಸುವಂತೆ ಆದೇಶಿಸಿದ್ದರೂ ಇದುವರೆಗೂ ತೆರವುಗೊಳಿಸಿಲ್ಲ ಎಂದು ಆರೋಪಿಸಿದರು.
ಜಿಲ್ಲಾಧಿಕಾರಿ ಆದೇಶದ ಬಳಿಕ ರವಿಕುಮಾರ್ ಶಾಸಕರಾಗಿ ಆಯ್ಕೆಯಾದ ನಂತರವೂ ಸರ್ವೇಗೆ ತೀರ್ಮಾನವಾಗಿತ್ತು. ಸಮಿತಿಯೂ ರಚನೆಯಾಗಿತ್ತು. ಇದುವರೆಗೂ ಸರ್ವೇ ಕಾರ್ಯ ನಡೆದಿಲ್ಲ. ಇದಕ್ಕೆ ಕಾರಣವೇನು ಎಂದು ಪ್ರಶ್ನಿಸಿದರು.
ಅಧ್ಯಕ್ಷರು ಪ್ರತಿಕ್ರಿಯಿಸಿ, 35 ವಾರ್ಡ್‌ಗಳಲ್ಲೂ ಇದೇ ಸಮಸ್ಯೆ ಇದೆ. ನಗರಸಭೆ ಜಾಗಗಳನ್ನು ಗುರುತಿಸಿ ನಾಮಫಲಕ ಹಾಕಿ ಎಂದು ಹಿಂದೆಯೇ ಸೂಚನೆ ನೀಡಲಾಗಿತ್ತು. ಆದಾಗಿಯೂ ಕಂದಾಯಾಧಿಕಾರಿಗಳು ಕ್ರಮ ವಹಿಸಿಲ್ಲ. ಒಂದು ವೇಳೆ ಅಧಿಕಾರಿಗಳಿಗೆ ಏನಾದರೂ ಒತ್ತಡವಿದೆಯಾ, ಅಡಚಣೆ ಇದೆಯೋ ಅಥವಾ ಜೀವ ಬೆದರಿಕೆ ಇದೆಯೋ ಏಕೆ ಈ ಕಾರ್ಯವನ್ನು ವಿಳಂಬ ಮಾಡುತ್ತಿದ್ದೀರಿ ಎಂದು ಕೇಳಿದರು.
ಇದಕ್ಕೆ ಕಂದಾಯ ಅಧಿಕಾರಿ ರಾಜಶೇಖರ್ ಪ್ರತಿಕ್ರಿಯಿಸಿ, ಇದುವರೆಗೂ 65 ನಿವೇಶನ ಗುರುತಿಸಿದ್ದೇವೆ. ಕಂದಾಯ ನಿರೀಕ್ಷಕರು, ಬಿಲ್ ಕಲೆಕ್ಟರ್ ತರಬೇತಿಗಾಗಿ ದೆಹಲಿಗೆ ಹೋಗಿದ್ದಾರೆ. ಅವರು ಬಂದ ನಂತರ ಪ್ರಕ್ರಿಯೆ ಆರಂಭಿಸುವುದಾಗಿ ಹೇಳಿದಾಗ, ಪ್ರತಿಕ್ರಿಯಿಸಿದ ನಾಗೇಶ್, ಇದು ಸಮಂಜಸವಾದ ಉತ್ತರವಲ್ಲ. 2020ರಲ್ಲೇ ಆದೇಶವಾಗಿದ್ದರೂ, ಸಮಿತಿ ರಚನೆಯಾಗಿ ಎರಡೂವರೆ ವರ್ಷವಾಗಿದ್ದರೂ ಈಗ ಸಿಬ್ಬಂದಿ ಕಾರಣವನ್ನು ಮುಂದಿಡುತ್ತಿರುವುದು ಹಾಸ್ಯಾಸ್ಪದವಲ್ಲವೇ? ಪೌರಾಯುಕ್ತರು ಮಾರ್ಚ್ ತಿಂಗಳಿಂದಲೂ ಸರ್ವೇ ಮಾಡುವುದಾಗಿ ಹೇಳಿಕೊಂಡೇ ಬರುತ್ತಿದ್ದಾರೆ. ಆದರೆ ಇದುವರೆಗೂ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಆಗ ಮಧ್ಯಪ್ರವೇಶಿಸಿ ಮಾತನಾಡಿದ ಶಾಸಕ ರವಿಕುಮಾರ್ ಗಣಿಗ, ಜು.20ರೊಳಗೆ ಉದಯಗಿರಿ ಬಡಾವಣೆಯ ಸಾರ್ವಜನಿಕ ಜಾಗದ ಒತ್ತುವರಿಯನ್ನು ತೆರವುಗೊಳಿಸಬೇಕು. ಒತ್ತುವರಿಯಾಗಿರುವ ಜಾಗಕ್ಕೆ ಸಂಬಂಧಿಸಿದಂತೆ ಎಷ್ಟೇ ಪ್ರಭಾವಿಗಳಿದ್ದರೂ, ಯಾರದೇ ಒತ್ತಡವಿದ್ದರೂ ಮುಲಾಜಿಲ್ಲದೆ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇದಕ್ಕೆ ದನಿಗೂಡಿಸಿ ಮಾತನಾಡಿದ ನಾಗೇಶ್, ಶಾಸಕರು ಹೇಳಿದಂತೆ ಜು.20ರೊಳಗೆ ಜಾಗ ತೆರವುಗೊಳಿಸದಿದ್ದರೆ ನಗರಸಭೆ ಪ್ರವೇಶ ದ್ವಾರದಲ್ಲೇ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಸದಸ್ಯ ಶ್ರೀಧರ್ ಮಾತನಾಡಿ, ನಗರದಲ್ಲಿ ಅನಧಿಕೃತ ಕಟ್ಟಡಕ್ಕೆ ಅವಕಾಶವಾಗುವಂತೆ ರಾಜ್ಯ ಸರ್ಕಾರ ಬಿ-ಖಾತೆಗೆ ಅವಕಾಶ ಮಾಡಿಕೊಟ್ಟಿದೆ. ಬಿ-ಖಾತೆಯಲ್ಲಿ ಮಂಡ್ಯ ನಗರವನ್ನು ಮುಂಚೂಣಿ ಸ್ಥಾನದಲ್ಲಿರಿಸಲು ಶ್ರಮ ವಹಿಸುತ್ತಾ ಅಭಿಯಾನ ಆರಂಭಿಸಿದ್ದಾರೆ. ಈ ನಡುವೆ ಬಿ-ಖಾತೆಗೆ ಸಲ್ಲಿಕೆಯಾಗಿರುವ ಅರ್ಜಿಗಳು ತಿರಸ್ಕೃತಗೊಳ್ಳುತ್ತಿವೆ. ಈ ಸಮಸ್ಯೆ ಯಾರಿಂದ ಆಗುತ್ತಿದೆ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಂದಾಯಾಧಿಕಾರಿ ರಾಜಶೇಖರ್, ಕೆಲವೊಂದು ತಾಂತ್ರಿಕ ಸಮಸ್ಯೆಗಳಿಂದ ಅರ್ಜಿಗಳು ತಿರಸ್ಕೃತಗೊಂಡಿವೆ. ಇದರ ಬಗ್ಗೆ ಕಂದಾಯ ನಿರೀಕ್ಷಕರಿಂದ ಮಾಹಿತಿ ಪಡೆದುಕೊಂಡು ಸರಿಪಡಿಸುವುದಾಗಿ ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಉಪಾಧ್ಯಕ್ಷ ಎಂ.ಪಿ.ಅರುಣ್‌ಕುಮಾರ್, ಆಯುಕ್ತೆ ಯು.ಪಿ.ಪಂಪಾಶ್ರೀ ಇದ್ದರು.