ಸಾರ್ವಜನಿಕ ಉದ್ದಿಮೆಗಳು ಪಾರದರ್ಶಕತೆಯಿಂದ ಪ್ರಗತಿ ಸಾಧ್ಯ: ಡಾ.ಸಿ.ಎನ್. ಮಂಜುನಾಥ್ ಅಭಿಮತ

31
Published on

ಮೈಸೂರು: ಸಾರ್ವಜನಿಕ ಉದ್ದಿಮೆಗಳು ಪಾರದರ್ಶಕತೆಯಿಂದ ಗುಣಮಟ್ಟದ ಕೆಲಸ ಮಾಡಿದರೆ ದೇಶದ ಪ್ರಗತಿ ಹೆಚ್ಚಾಗಿ ಜನರ ಬದುಕು ಹಸನಾಗುತ್ತದೆ ಎಂದು ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯ ನಿರ್ದೇಶಕ ಪದ್ಮಶ್ರೀ ಡಾ.ಸಿ.ಎನ್. ಮಂಜುನಾಥ್ ತಿಳಿಸಿದರು.
ನಗರದ ಜಯದೇವ ಆಸ್ಪತ್ರೆಯಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತೀಯ ನೋಟು ಮುದ್ರಣಾಲಯ ನೀಡಿರುವ ಎಕೋಮಿಷನ್ ಹಾಗೂ ಬಣ್ಣ ಮತ್ತು ಅರಗು ಕಾರ್ಖಾನೆ ನೀಡಿರುವ ಕ್ಲೀನಿಂಗ್ ಮಿಷನ್‌ನ ಹಸ್ತಾಂತರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಜಯದೇವ ಹೃದ್ರೋಗ ಆಸ್ಪತ್ರೆಯನ್ನು ಸರ್ಕಾರದ ಅನುದಾನದಿಂದಲೇ ನಡೆಸಲು ಸಾಧ್ಯವಿಲ್ಲ. ಆದ್ದರಿಂದ ಸಂಸ್ಥೆಯ ಬಗ್ಗೆ ವಿಶ್ವಾಸವಿರುವ ಹಲವಾರು ದಾನಿಗಳು ಸ್ವಯಂ ಪ್ರೇರಿತರಾಗಿ ಸಹಾಯ ಮಾಡುತ್ತಿದ್ದಾರೆ. ಇಡೀ ಪ್ರಪಂಚದಲ್ಲಿಯೇ 55 ಎಕೋಮಿಷನ್‌ಗಳನ್ನು ಹೊಂದಿರುವ ಏಕೈಕ ಸಂಸ್ಥೆ ಎಂದರೆ ಅದು ಜಯದೇವ ಆಸ್ಪತ್ರೆ ಮಾತ್ರ ಎಂದರು.
ಮನುಷ್ಯನ ಬದುಕು ಪರಿಪೂರ್ಣವಾಗಬೇಕಾದರೆ ಕೇವಲ ಪದವಿಗಳಿಂದ ಆಗುವುದಿಲ್ಲ. ಪವಿತ್ರವಾದ ಮನಸ್ಸಿರಬೇಕು, ಹೃದಯ ವೈಶಾಲ್ಯತೆ ಇರಬೇಕು, ಸಂಸ್ಕಾರ ಇರಬೇಕು. ಹೆಚ್ಚು ಹಣ ಇರುವವರು ಜಿಪುಣರಾಗಿರುತ್ತಾರೆ. ಹೃದಯ ಶ್ರೀಮಂತಿಕೆ ಇರುವವರು ಮಾತ್ರ ದಾನ ಮಾಡುತ್ತಾರೆ ಎಂದರು.
ಬಣ್ಣ ಮತ್ತು ಅರಗು ಕಾರ್ಖಾನೆಯ ಅಧ್ಯಕ್ಷ ರಘು ಕೌಟಿಲ್ಯ ಮಾತನಾಡಿ, ಬಡವರ ಪಾಲಿಕೆ ಸಂಜೀವಿನಿಯಾಗಿ ಜಯದೇವ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುತ್ತ ರಾಜ್ಯದ ಮನೆಮಾತಾಗಿದೆ. ಇದಕ್ಕೆ ಮಂಜುನಾಥ್ ರೂವಾರಿಗಳಾಗಿದ್ದು, ಸಾರ್ಥಕ ಸೇವೆ ಮಾಡುತ್ತಿದ್ದಾರೆ ಎಂದು ಹೇಳಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಅನೇಕ ಆಸ್ಪತ್ರೆಗಳು ನಿರ್ಮಾಣವಾಗಿವೆ. ಆದರೆ ಸ್ವಾತಂತ್ರೃ ನಂತರದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದ ಏಕೈಕ ರೂವಾರಿ ಡಾ.ಸಿ.ಎನ್. ಮಂಜುನಾಥ್ ಎಂದು ಬಣ್ಣಿಸಿದರು.
ಭಾರತೀಯ ನೋಟು ಮುದ್ರಣಾಲಯದ ಹಿರಿಯ ಜನರಲ್ ಮ್ಯಾನೇಜರ್ ರಮೇಶ್‌ಕುಮಾರ್, ಡಿಜಿಎಂ ಎಸ್.ಎಂ. ಬ್ಯಾನರ್ಜಿ, ಮ್ಯಾನೇಜರ್ ಜಿ. ರವಿಶಂಕರ್, ಬಣ್ಣ-ಅರಗು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಜಿ.ಕುಮಾರಸ್ವಾಮಿ, ಜನರಲ್ ಮ್ಯಾನೇಜರ್ ಸಿ. ಹರಕುಮಾರ್, ಜಯದೇವ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಕೆ.ಎಸ್. ಸದಾನಂದ್, ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net