

ಶ್ರೀರಂಗಪಟ್ಟಣ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿನ ತೀವ್ರ ನಿಗಾ ಘಟಕ ಹಾಗೂ ವಿವಿಧ ಶಸ್ತ್ರ ಚಿಕಿತ್ಸಾ ಕೊಠಡಿಗಳ ಉದ್ಘಾಟನೆಯನ್ನು ಸೋಮವಾರ ಶಾಸಕ ರವೀಂದ್ರ ಶ್ರೀಕಂಠಯ್ಯ ನೆರವೇರಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತಾಲೂಕು ಆರೋಗ್ಯಾಧಿಕಾರಿ ಡಾ.ಎನ್.ಕೆ.ವೆಂಕಟೇಶ್ ಹಾಗೂ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಪಿ.ಮಾರುತಿ ಅವರೊಂದಿಗೆ ಸೋಮವಾರ ಭೇಟಿ ನೀಡಿದ ಶಾಸಕರು, ರಾಜ್ಯ ಸರ್ಕಾರದ ಅನುದಾನದಿಂದ ಅತ್ಯಾಧುನಿಕವಾಗಿ ನಿರ್ಮಾಣವಾಗಿರುವ 19 ಹಾಸಿಗೆಗಳ ಸುಸಜ್ಜಿತ ಸೌಲಭ್ಯಗಳ ಐಸಿಯು ಕೊಠಡಿ ಹಾಗೂ ಉನ್ನತೀಕರಿಸಿದ ಮೂಳೆರೋಗ ಶಸ್ತ್ರಚಿಕಿತ್ಸಾ ಕೊಠಡಿ, ಕಣ್ಣಿನ ಶಸ್ತ್ರಚಿಕಿತ್ಸಾ ಕೊಠಡಿ, ನವೀಕರಣಗೊಂಡ ಉನ್ನತ ಮಟ್ಟದ ಸಾಮಾನ್ಯ ಹಾಗೂ ಹೆರಿಗೆ ಶಸ್ತ್ರಚಿಕಿತ್ಸಾ ಕೊಠಡಿ ಮತ್ತು ಕಿರು ಶಸ್ತ್ರಚಿಕಿತ್ಸಾ ಕೊಠಡಿ, ಮುಖ್ಯವಾಗಿ ಆಸ್ಪತ್ರೆಗೆ ಬರುವ ಹೊರ ರೋಗಿಗಳು ಯಾವುದೇ ನೂಕುನುಗ್ಗಲು ಉಂಟಾಗದಂತೆ ಸಾಲಿನಲ್ಲಿ ಸರಳವಾಗಿ ಚೀಟಿ ಪಡೆಯಲು ಗಣಕೀಕೃತ ನೋಂದಣಿಯ ನೂತನ ಕೌಂಟರ್‌ನ್ನೂ ಜನರ ಬಳಕೆಗೆ ಅರ್ಪಿಸಲಾಯಿತು.
ಬಳಿಕ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ಶ್ರೀರಂಗಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೌಲಭ್ಯ ಹಾಗೂ ಸೇವೆಗಳಿಂದ ಬಹಳಷ್ಟು ಉನ್ನತೀಕರಣಗೊಳಿಸಲಾಗುತ್ತಿದ್ದು, ಅಗತ್ಯ ಉಪಕರಣಗಳ ಅಳವಡಿಕೆಯೊಂದಿಕೆ ತಕ್ಷಣವೇ ಬಳಕೆಯ ಸೇವೆಯನ್ನು ರೋಗಿಗಳಿಗೆ ನೀಡಲು ಚಾಲನೆ ನೀಡಲಾಗಿದೆ. ಈಗಾಗಲೇ ಆಸ್ಪತ್ರೆಯ ಅಗತ್ಯತೆಗೆ ಸಾಕಷ್ಟು ಸೌಲಭ್ಯಗಳನ್ನು ಒದಗಿಸಿ, ಗುಣಮಟ್ಟದ ಚಿಕಿತ್ಸೆಯನ್ನು ವೈದ್ಯರು ಹಾಗೂ ಸಿಬ್ಬಂದಿ ನೀಡುತ್ತಿದ್ದು, ಮುಂದೆ ಇನ್ನಷ್ಟು ಸೌಲಭ್ಯಗಳನ್ನು ತರಲಾಗುವುದು ಎಂದರು.
ಆಯುರ್ವೇದ ವೈದ್ಯೆಗೆ ರೇಗಿದ ಶಾಸಕ: ಆಸ್ಪತ್ರೆಯ ಐಸಿಯು ಉದ್ಘಾಟನೆಗೆ ಆಗಮಿಸಿದ್ದ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರಿಗೆ ಸಮಸ್ಯೆ ಬಗೆಹರಿಸಿ ಎಂದು ಎರಡೆರಡು ಬಾರಿ ಮನವಿ ಮಾಡಿದ ಆರ್ಯುವೇದ ವೈದ್ಯೆಗೆ ನಾನ್‌ಸೆನ್ಸ್ ನಿಲ್ಲಿಸು, ಎಲ್ಲಿ ಏನ್ ಕೇಳಬೇಕು ಗೊತ್ತಾಗಲ್ವಾ? ಎಂದು ಶಾಸಕ ಏರುದನಿಯಲ್ಲಿ ರೇಗಿದ್ದರಿಂದ ವೈದ್ಯೆಗೆ ಜನರೆದುರು ಮುಜುಗರಕ್ಕೆ ಒಳಗಾದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿನ ಆಯುರ್ವೇದ ಚಿಕಿತ್ಸಾ ಕೇಂದ್ರ ಹಾಗೂ ಶವಾಗಾರಕ್ಕೆ ತೆರಳುವ ರಸ್ತೆ ಸಾಕಷ್ಟು ವರ್ಷಗಳಿಂದ ಅವ್ಯವಸ್ಥೆಯಿಂದ ಕೂಡಿದ್ದು ಜನರು ಇಲ್ಲಿಗೆ ಆಗಮಿಸಲು ಭಯಪಡುತ್ತಿದ್ದರು. ಇಲ್ಲಿನ ರೋಗಿಗಳು ಚಿಕಿತ್ಸಾ ಕೇಂದ್ರಕ್ಕೆ ಆಗಮಿಸಲು ಮಾರ್ಗ ವ್ಯವಸ್ಥೆ ಇರದೆ ಹಾಗೂ ಮಳೆಗಾಲದಲ್ಲಿ ಸಾಕಷ್ಟು ಸಮಸ್ಯೆ ಎದುರಿಸುವಂತಾಗಿತ್ತು. ಹೀಗಾಗಿ ಈ ವಿಚಾರವನ್ನು ಶಾಸಕರ ಗಮನಕ್ಕೆ ತರಲು ಯತ್ನಿಸಿದ ವೈದ್ಯೆ ಡಾ.ರಮ್ಯಾ, ಸ್ಥಳಕ್ಕೆ ಆಗಮಿಸಿ ಪರಿಶೀಲಿಸಲು ಶಾಸಕರಿಗೆ ಎರಡೆರಡು ಬಾರಿ ಕೋರಿದರು.
ಇದರಿಂದ ಸಿಡಿಮಿಡಿಗೊಂಡ ಶಾಸಕ ವೈದ್ಯೆ ವಿರುದ್ದ ಹರಿಹಾಯ್ದರು. ಕೊನೆಗೆ ಸಮಸ್ಯೆ ಸ್ಥಳಕ್ಕೆ ಆಸ್ಪತ್ರೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ಶಾಸಕ ರವೀಂದ್ರ ಅಲ್ಲಿನ ಸಮಸ್ಯೆ ಬಗೆಹರಿಸಲು ಜಿಲ್ಲಾ ಪಂಚಾಯಿತಿ ಅನುದಾನದ 5 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ದುರಸ್ತಿಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದರೊಂದಿಗೆ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ವಸತಿ ಗೃಹಗಳು ಮತ್ತು ಅಲ್ಲಿನ ಸುತ್ತಮುತ್ತಲ ಸಮಸ್ಯೆಗಳ ಕುರಿತ ದೂರನ್ನು ಪರಿಹರಿಸುವ ಭರವಸೆ ನೀಡಿದರು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಸದಸ್ಯರಾದ ಗಂಜಾಂ ಕೃಷ್ಣಪ್ಪ, ಶಿವು, ಎಸ್.ಟಿ.ರಾಜು, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ನಾಗರಾಜು, ಪ್ರಶಾಂತ್, ಆಸ್ಪತ್ರೆ ವೈದ್ಯ ಡಾ.ರಾಜು, ಸಿಡಿಪಿಒ ಅಶೋಕ್, ಪ್ರಯೋಗ ಶಾಲಾ ತಂತ್ರಜ್ಞೆ ಭಾನುಮತಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬೆನ್ನೂರ, ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ಮೋಹನ್ ಇತರರು ಇದ್ದರು.