

ಭದ್ರಾವತಿ: ಹಳೇ ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಹೋಗುವ ಮುಖ್ಯರಸ್ತೆಯಲ್ಲಿ ಜನ, ವಾಹನಗಳ ದಟ್ಟಣೆ ಹೆಚ್ಚುತ್ತಿದ್ದು ಸಾರ್ವಜನಿಕರ ಓಡಾಟಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ.
ಚನ್ನಗಿರಿ ಮಾರ್ಗದ ಮುಖ್ಯರಸ್ತೆಯಿಂದ ಸಾರ್ವಜನಿಕ ಆಸ್ಪತ್ರೆಗೆ ಆರೋಗ್ಯ ತಪಾಸಣೆಗೆಂದು ಪ್ರತಿನಿತ್ಯ ನೂರಾರು ಜನರು, ವಾಹನಗಳು ಸಂಚರಿಸುತ್ತವೆ. ಅಲ್ಲದೆ ಸ್ಥಳೀಯ ಭೂತನಗುಡಿ, ಗಾಂಧಿನಗರ, ಹೊಸಮನೆ ಸೇರಿದಂತೆ ತರೀಕೆರೆ ರಸ್ತೆಗೂ ಇದು ಸಂಪರ್ಕ ರಸ್ತೆಯಾಗಿದೆ.
ಕಿರಿದಾಗಿರುವ ಈ ರಸ್ತೆಯ ಅಕ್ಕಪಕ್ಕ ಎಲ್ಲೆಂದಲ್ಲಿ ವಾಹನ ನಿಲುಗಡೆ ಮಾಡುವ ಕೆಲವರಿಂದ ಆಸ್ಪತ್ರೆಗೆ ಹೋಗುವವರ ಹಾಗೂ ಬರುವವರ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ. ಅಷ್ಟೇ ಅಲ್ಲದೆ ಆಸ್ಪತ್ರೆಯ ತುರ್ತು ವಾಹನವೂ ಆಸ್ಪತ್ರೆಗೆ ಹೋಗಬೇಕಾದರೆ ವಾಹನದ ಚಾಲಕ ದೀರ್ಘ ಶಬ್ದ ಮಾಡುತ್ತಲೇ ದಾರಿ ಬಿಡಿಸಿಕೊಳ್ಳಬೇಕಾಗಿದೆ. ಜತೆಗೆ ಆಸ್ಪತ್ರೆ ರಸ್ತೆಯ ನಾಮಫಲಕವೂ ಕಾಣದಂತಾಗಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶಗಳಿಂದ ಚಿಕಿತ್ಸೆಗಾಗಿ ಬರುವ ರೋಗಿಗಳು ಸರ್ಕಾರಿ ಆಸ್ಪತ್ರೆ ಎಲ್ಲಿದೆ ಎಂದು ಕೇಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಸಂಚಾರ ಮಾರ್ಗ ಸುಗಮಗೊಳಿಸಲು ಪೊಲೀಸ್ ಅಧಿಕಾರಿಗಳು ಮುಂದಾಗಬೇಕು ಎಂಬುದು ಆಗ್ರಹವಾಗಿದೆ.
ಆಸ್ಪತ್ರೆಯ ಕಾಂಪೌಂಡ್‌ಗಳ ಸುತ್ತ ಸಣ್ಣ ಬಟ್ಟೆ ಅಂಗಡಿಗಳು, ಪೆಟ್ಟಿಗೆ ಅಂಗಡಿ, ಚಪ್ಪಲಿ ಅಂಗಡಿ, ಹಣ್ಣು ಮಾರಾಟಗಾರರ ಗಾಡಿಗಳು ಹಾಗೂ ಸ್ಟಾಲ್‌ಗಳಿವೆ, ಈ ಸ್ಟಾಲ್‌ಗಳಲ್ಲಿ ವಸ್ತುಗಳನ್ನು ಖರೀದಿ ಮಾಡಲು, ಟೀ, ಕಾಫಿ ಚಹಾ ಸೇವನೆಗೆಂದು ಬರುವ ಹಲವು ನಾಗರಿಕರು, ದ್ವಿಚಕ್ರ ವಾಹನ ಸವಾರರು ತಮ್ಮ ವಾಹನಗಳನ್ನು ರಸ್ತೆ ಮಧ್ಯೆಯೇ ನಿಲ್ಲಿಸುತ್ತಿರುವುದರಿಂದ ಇರುವ ರಸ್ತೆ ಮತ್ತಷ್ಟು ಕಿರಿದಾಗುತ್ತದೆ. ಅನಗತ್ಯವಾಗಿ ವಾಹನ ನಿಲ್ಲಿಸುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ವಾಹನ ನಿಲುಗಡೆ ನಿಷೇಧ ಫಲಕಗಳನ್ನು ಹಾಕುವುದು ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಬೇರೆಡೆ ವ್ಯಾಪಾರಕ್ಕೆ ನಗರಸಭೆ ವ್ಯವಸ್ತೆ ಮಾಡಿಕೊಟ್ಟರೆ ಅನುಕೂಲವಾಗಲಿದೆ ಎನ್ನುವುದು ಸಾರ್ವಜನಿಕರ ಅಳಲಾಗಿದೆ.