

ಬೇಲೂರು: ರಸ್ತೆ ಗುಂಡಿಗೆ ಬಿದ್ದು, ಮೃತರಾದ ಮಹಿಳೆಯ ಕುಟುಂಬಕ್ಕೆ 2 ದಿನದಲ್ಲಿ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ ಬೇಲೂರು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಶಾಂತ್ ಮಾತನಾಡಿ, ಎರಡು- ಮೂರು ವರ್ಷಗಳಿಂದ ತಾಲೂಕಿನ ಎಲ್ಲ ರಸ್ತೆಗಳು ಮಾರುದ್ದ ಗುಂಡಿ ಬಿದ್ದು ವಾಹನಗಳು ಓಡಾಡದಂತೆ ಹಾಳಾಗಿದ್ದರೂ ಸ್ಥಳೀಯ ಶಾಸಕರು ರಸ್ತೆ ಅಭಿವೃದ್ಧಿ ಕಾಮಗಾರಿ ಮಾಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು.
ಈ ಕಾರಣದಿಂದ ಶುಕ್ರವಾರ ಬೆಳಗ್ಗೆ 7 ಗಂಟೆಯಲ್ಲಿ ತಾಲೂಕಿನ ಚೌಡನಹಳ್ಳಿ ಗ್ರಾಮದ 43 ವರ್ಷದ ಕಮಲ ಎಂಬ ಮಹಿಳೆ ಸಂಬಂಧಿಕರ ಬೈಕಿನಲ್ಲಿ ಬೇಲೂರಿಗೆ ಬರುತಿದ್ದ ಸಂದರ್ಭ ಸನ್ಯಾಸಿಹಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಬೈಕು ಗುಂಡಿಗೆ ಹಾರಿದ್ದರಿಂದ ನೆಲಕ್ಕೆ ಉರುಳಿ ಬಿದ್ದಿದ್ದಾರೆ. ಈ ಸಂದರ್ಭ ಮಹಿಳೆಗೆ ಗಂಭೀರ ಗಾಯವಾಯಿತು. ತಕ್ಷಣ ಬೇಲೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ದೂರಿದರು.
ಇಂತಹ ಘಟನೆಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು, ಸ್ಥಳೀಯ ಶಾಸಕರು ಮತ್ತು ಇಂದಿನ ಬಿಜೆಪಿ ಸರ್ಕಾರ ನೇರ ಹೊಣೆ ಹೊರಬೇಕಾಗುತ್ತದೆ. ಮೃತ ಮಹಿಳೆಯ ಕುಟುಂಬಕ್ಕೆ ಮುಂದಿನ ಎರಡು ದಿನದಲ್ಲಿ ಅಧಿಕಾರಿಗಳಾಗಲಿ ಅಥವಾ ಶಾಸಕರಾಗಲಿ 5 ಲಕ್ಷ ರೂ.ಗೂ ಹೆಚ್ಚು ಪರಿಹಾರ ಒದಗಿಸಬೇಕು. ಇಲ್ಲದಿದ್ದರೆ ತಾಲೂಕು ಕಾಂಗ್ರೆಸ್‌ನಿಂದ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಎಂ.ಆರ್.ವೆಂಕಟೇಶ್ ಮಾತನಾಡಿ, ಮಹಿಳೆಯೊಬ್ಬರು ಸಂಬಂಧಿಕರ ಬೈಕಿನಲ್ಲಿ ಬೇಲೂರಿಗೆ ಬರುವ ಸಂದರ್ಭ ರಸ್ತೆ ಗುಂಡಿ ತಪ್ಪಿಸಲು ಹೋಗಿ ನೆಲಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಅವರ ಮಕ್ಕಳ ಜೀವನ ಕಷ್ಟಕರವಾಗಿದೆ. ಸಾಕಷ್ಟು ವರ್ಷಗಳಿಂದ ರಸ್ತೆ ಗುಂಡಿ ಬಿದ್ದಿದ್ದರೂ ಗಮನಹರಿಸದೆ ಇರುವುದೇ ಇಂಥ ಘಟನೆಗಳಿಗೆ ಕಾರಣವಾಗುತ್ತಿದೆ. ಆದ್ದರಿಂದ ತಕ್ಷಣವೇ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಮಾಡಿಸಿ, ಮೃತ ಮಹಿಳೆ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದರು.
ಪ್ರತಿಭಟನೆಯಲ್ಲಿ ಚೌಡನಹಳ್ಳಿ ಗ್ರಾಪಂ ಸದಸ್ಯ ನಂದೀಶ್, ಸನ್ಯಾಸಿಹಳ್ಳಿ ಗ್ರಾಪಂ ಸದಸ್ಯ ಶಿವು, ಪುರಸಭೆ ಸದಸ್ಯರಾದ ಅಶೋಕ್, ಅಕ್ರಂಪಾಷ, ಮುಖಂಡರಾದ ಯೋಗಚಾರ್, ಮಂಜುನಾಥ್, ಚೌಡನಹಳ್ಳಿ ಗ್ರಾಮಸ್ಥರಾದ ಲೋಕೇಶ್, ರಂಗಸ್ವಾಮಿ, ಜಗದೀಶ್, ಮಹೇಶ್, ನಾಗರಾಜು, ಶೇಖರ್ ಇತರರಿದ್ದರು.