

ತಿ.ನರಸೀಪುರ: ತಾಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಕೇಂದ್ರ ಸರ್ಕಾರದ ಲಕ್ಷ್ಯ ಮಾನ್ಯತೆ ಪ್ರಶಸ್ತಿ ದೊರೆತಿರುವ ಹಿನ್ನೆಲೆಯಲ್ಲಿ ಸೋಮವಾರ ಆಡಳಿತ ಅಧಿಕಾರಿ ಡಾ.ಎಸ್.ಬಿ.ಅಭಿಲಾಷ್ ಅವರನ್ನು ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘ, ಸಂಸ್ಥೆಗಳ ಮುಖಂಡರು ಆಸ್ಪತ್ರೆಯ ಸಭಾಂಗಣದಲ್ಲಿ ಸನ್ಮಾನಿಸಿ ಅಭಿನಂದಿಸಿದರು.
ತಾಲೂಕು ಅಂಬೇಡ್ಕರ್ ಅಭಿವೃದ್ಧಿ ಸಂಘದ ಅಧ್ಯಕ್ಷ ಕರೋಹಟ್ಟಿ ಮಹದೇವಯ್ಯ ಮಾತನಾಡಿ, ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಸರ್ಕಾರಿ ವೈದ್ಯಕೀಯ ಸೇವೆಯನ್ನು ನೀಡುತ್ತಿರುವ ಸಾರ್ವಜನಿಕ ಆಸ್ಪತ್ರೆಯ ವೈದ್ಯರ ಸೇವೆ ಹಾಗೂ ಕಾಳಜಿಗೆ ಕೇಂದ್ರ ಸರ್ಕಾರದ ಲಕ್ಷ್ಯ ಪ್ರಶಸ್ತಿ ಲಭಿಸಿರುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ಆಡಳಿತ ವೈದ್ಯಾಧಿಕಾರಿ ಎಸ್.ಬಿ.ಅಭಿಲಾಷ್ ನೇತೃತ್ವದಲ್ಲಿ ಸಾರ್ವಜನಿಕರಿಗೆ ಹಾಗೂ ಬಡವರಿಗೆ ಮತ್ತಷ್ಟು ಉತ್ತಮವಾದ ಸರ್ಕಾರಿ ವೈದ್ಯಕೀಯ ಸೇವೆ ಲಭ್ಯವಾಗಲಿ ಎಂಬ ಆಶಯವನ್ನು ವ್ಯಕ್ತಪಡಿಸಿದ್ದರು.
ಜಿ.ಪಂ. ಮಾಜಿ ಅಧ್ಯಕ್ಷ ಎಸ್.ಎನ್.ಸಿದ್ದಾರ್ಥ ಮಾತನಾಡಿ, ಸಾರ್ವಜನಿಕ ಆಸ್ಪತ್ರೆಯಲ್ಲಿ ಇತ್ತೀಚಿನ ದಿನಗಳಲ್ಲಿ ಎಲ್ಲ ವಿಧವಾದ ಸರ್ಕಾರಿ ವೈದ್ಯಕೀಯ ಸೇವೆ ಲಭಿಸುತ್ತಿದ್ದು, ಪ್ರತಿನಿತ್ಯ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆಯು ಹೆಚ್ಚುತ್ತಿರುವುದರಿಂದ ವೈದ್ಯರು ಮತ್ತು ಸಿಬ್ಬಂದಿ ಎಲ್ಲ ರೋಗಿಗಳಿಗೂ ಸ್ಪಂದಿಸಿ, ಅವರ ಕಾಯಿಲೆಯನ್ನು ಗುಣಮುಖ ಮಾಡುವ ನಿಟ್ಟಿನಲ್ಲಿ ಸೇವೆ ಸಲ್ಲಿಸಬೇಕು ಎಂದು ಮನವಿ ಮಾಡಿದರು.
ಎಸ್ಸಿ /ಎಸ್‌ಟಿ ಹಿತರಕ್ಷಣಾ ಸಮಿತಿಯ ಸದಸ್ಯ ಸೋಸಲೆ ಮಹದೇವಸ್ವಾಮಿ ಮಾತನಾಡಿ, ವೈದ್ಯರ ಸೇವೆ ಅತ್ಯಮೂಲ್ಯವಾದದ್ದು, ತಾಲೂಕಿನ ಜನತೆ ಸಾರ್ವಜನಿಕ ಆಸ್ಪತ್ರೆಯ ಬಗ್ಗೆ ಅಪಾರ ನಂಬಿಕೆಯನ್ನಿಟ್ಟುಕೊಂಡಿದ್ದಾರೆ. ಈಗ ಆಸ್ಪತ್ರೆಯಲ್ಲಿ ಎಲ್ಲ ರೀತಿಯ ತಜ್ಞ ವೈದ್ಯರಿದ್ದಾರೆ. ಉತ್ತಮ ವೈದ್ಯಕೀಯ ಸೇವೆ ಸಿಗುತ್ತದೆ ಎಂಬ ಬಡವರು ಮತ್ತು ಮಧ್ಯಮ ವರ್ಗದ ಜನರ ನಂಬಿಕೆಗೆ ಹುಸಿಯಾಗದಂತೆ ವೈದ್ಯರು ಉತ್ತಮ ಸೇವೆ ನೀಡುವ ಮೂಲಕ ಅವರ ಪ್ರೀತಿ ವಿಶ್ವಾಸವನ್ನು ಗಳಿಸುವಂತೆ ಸಲಹೆ ನೀಡಿದರು.
ಜಿಲ್ಲಾ ಜನ ಜಾಗೃತಿ ಸಮಿತಿಯ ಅಧ್ಯಕ್ಷ ಕೆ.ಎನ್.ಪ್ರಭುಸ್ವಾಮಿ, ಸೋಮನಾಥಪುರ ಗಣೇಶ್, ತಾ.ಪಂ. ಮಾಜಿ ಉಪಾಧ್ಯಕ್ಷ ಎಂ.ಎಸ್. ಬಸವರಾಜು, ಮುಖಂಡರಾದ ತುಂಬಲ ಮಂಜುನಾಥ, ಬನ್ನಹಳ್ಳಿ ಸೋಮಣ್ಣ, ಬಂಗಾರಿ ಮಹದೇವ, ಸೋಸಲೆ ರಾಜಶೇಖರ್, ಬಿಎಸ್ಪಿ ಮಹದೇವಸ್ವಾಮಿ, ತಾಯೂರು ಮಧು, ಕೋಮಲಾಕ್ಷಿ, ಶ್ವೇತ, ರುಕ್ಮಿಣಿ, ಹೊನ್ನಮ್ಮ ಹಾಗೂ ಇತರರಿದ್ದರು.