

ಧಾರವಾಡ: ಕರ್ನಾಟಕ ವಿಶ್ವ ವಿದ್ಯಾಲಯದ ಸಂಶೋಧನಾ ಕೇಂದ್ರದ ವಸ್ತು ಸಂಗ್ರಹಾಲಯದಲ್ಲಿ ಇಡಲಾಗಿದ್ದ ಪುಟ್ಟ ಮಕ್ಕಳ ಮಣ್ಣಿನ ಶವ ಪಟ್ಟಿಗೆ (ಸಾರ್ಕೆಫಾಗಸ್)ಯನ್ನು ಬಳ್ಳಾರಿಯ ಪುರಾತತ್ವ ವಸ್ತು ಸಂಗ್ರಹಾಲಯಕ್ಕೆ ಹಸ್ತಾಂತರ ಮಾಡಲಾಗಿದ್ದು, ವಿವಿಯ ಈ ಕ್ರಮ ಚರ್ಚೆಗೆ ಗ್ರಾಸವಾಗಿದೆ.
ಸುಮಾರು 3400 ವರ್ಷಗಳ ಹಿಂದಿನ ಶವ ಪೆಟ್ಟಿಗೆ ನೋಡಲು ಆನೆ ಆಕೃತಿಯಂತಿದೆ. ಬಳ್ಳಾರಿ ಜಿಲ್ಲೆಯಲ್ಲಿ ಕವಿವಿಯ ಸಂಶೋಧಕರು ಇದನ್ನು ಪತ್ತೆ ಮಾಡಿದ್ದರು. ನಂತರದಲ್ಲಿ ಅದನ್ನು ಕವಿವಿಯ ಸಂಶೋಧನಾ ಕೇಂದ್ರದಲ್ಲಿ ಇಡಲಾಗಿತ್ತು. ಆದರೆ ಒಂದೂವರೆ ತಿಂಗಳ ಹಿಂದೆ ಆ ಪೆಟ್ಟಿಯನ್ನು ಬಳ್ಳಾರಿಗೆ ಹಸ್ತಾಂತರ ಮಾಡಲಾಗಿದೆ. ಕೆಲ ಸಂಶೋಧಕರು ಹಾಗೂ ಸಾರ್ವಜನಿಕರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸುಮಾರು 16 ವರ್ಷಗಳ ಹಿಂದೆ ಪುರಾತತ್ವ ಸಂಶೋಧಕ, ಕವಿವಿಯ ಡಾ. ರವಿ ಕೋರಿಶೆಟ್ಟರ್ ಅವರಿದ್ದ ತಂಡ ಸಂಶೋಧನೆ ನಡೆಸುತ್ತಿದ್ದ ಸಂದರ್ಭದಲ್ಲಿ ಬಳ್ಳಾರಿಯ ಕುಡುತಿನಿ ಹತ್ತಿರದ ಬೂದಿಗುಡ್ಡದಲ್ಲಿ ಮಣ್ಣಿನ ಶವ ಪೆಟ್ಟಿಗೆ ಹಾಗೂ ಮಡಿಕೆಗಳು ಪತ್ತೆಯಾಗಿದ್ದವು. ಇದೀಗ ಬಳ್ಳಾರಿಯಲ್ಲಿ ನೂತನವಾಗಿ ಪ್ರಾರಂಭವಾಗುವ ಪುರಾತತ್ವ ಇಲಾಖೆಯ ವಸ್ತು ಸಂಗ್ರಹಾಲಯದಲ್ಲಿ ಇಡಲು ಅಲ್ಲಿನ ಜಿಲ್ಲಾಧಿಕಾರಿಯವರು ಧಾರವಾಡ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. ಹೀಗಾಗಿ ಅ. 24ರಂದು ಕವಿವಿ ಒಪ್ಪಿಗೆ ಮೇರೆಗೆ ಮಣ್ಣಿನ ಶವ ಪೆಟ್ಟಿಗೆಯನ್ನು ಬಳ್ಳಾರಿಯ ವಸ್ತು ಸಂಗ್ರಹಾಲಯಕ್ಕೆ ಹಸ್ತಾಂತರ ಮಾಡಲಾಗಿದೆ.
ಹಸ್ತಾಂತರಕ್ಕೆ ಕವಿವಿಯ ಕೆಲ ವಿಭಾಗಗಳಲ್ಲೇ ವಿರೋಧ ವ್ಯಕ್ತವಾಗಿತ್ತು. ಇದೇ ಕಾರಣಕ್ಕೆ ರಜಿಸ್ಟ್ರಾರ್ ಅಧ್ಯಕ್ಷತೆಯಲ್ಲಿ ಇತಿಹಾಸಕ್ಕೆ ಸಂಬಂಧಿಸಿ ಪ್ರಾಚೀನ ಭಾರತ, ಆಧುನಿಕ ಭಾರತ ಇತಿಹಾಸ ಹಾಗೂ ಕನ್ನಡ ಸಂಶೋಧನ ವಿಭಾಗಗಳ ಸಭೆ ನಡೆಸಿ, ಅಂತಿಮವಾಗಿ ಹಸ್ತಾಂತ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಈ ಪೆಟ್ಟಿಗೆಯನ್ನು ನೀಡುವಂತೆ 2013ರಲ್ಲೂ ಕೇಳಲಾಗಿತ್ತು. ಅಂದಿನ ಕುಲಪತಿಯಾಗಿದ್ದ ಡಾ. ಎಚ್.ಬಿ. ವಾಲೀಕಾರ ಹಸ್ತಾಂತರಕ್ಕೆ ನಿರಾಕರಿಸಿದ್ದರು. ಆದರೆ ಈ ಬಾರಿ ಆ ಮಹತ್ವದ ವಸ್ತುವನ್ನು ಜಿಲ್ಲೆಯಲ್ಲೇ ಉಳಿಸಿಕೊಳ್ಳಲು ಕವಿವಿ ವಿಫಲವಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ವಿವಿಧ ಜಿಲ್ಲೆಗಳಲ್ಲಿ ಪತ್ತೆ ಮಾಡಲಾದ ಅಪರೂಪದ ವಸ್ತುಗಳು ಕವಿವಿ ವಸ್ತು ಸಂಗ್ರಹಾಲಯದಲ್ಲಿವೆ. ಆಯಾ ಜಿಲ್ಲಾಡಳಿತಗಳೂ ವಸ್ತುಗಳನ್ನು ನೀಡುವಂತೆ ಬೇಡಿಕೆ ಸಲ್ಲಿಸಬಹುದು. ಹಾಗೆ ಆದಲ್ಲಿ, ಕವಿವಿಯ ಅಪರೂಪದ ವಸ್ತುಗಳ ಸಂಗ್ರಹಾಲಯ ಬಡವಾಗಲಿದೆ ಎಂದು ಅನೇಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಬಳ್ಳಾರಿ ಜಿಲ್ಲಾಧಿಕಾರಿಯವರು ಧಾರವಾಡ ಜಿಲ್ಲಾಧಿಕಾರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಕುಲಸಚಿವರ ಅಧ್ಯಕ್ಷತೆಯಲ್ಲಿ ಎಲ್ಲರ ಸಭೆ ನಡೆಸಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಅದು ಬಳ್ಳಾರಿ ಜಿಲ್ಲೆಯಲ್ಲಿ ದೊರೆತಿರುವ ಕಾರಣಕ್ಕೆ ತಮ್ಮ ಜಿಲ್ಲೆಯ ವಸ್ತು ಎಂದು ಅವರು ಸಹಜವಾಗಿ ಕೇಳಿದ್ದಾರೆ. ಹೀಗಾಗಿ ಸಂಶೋಧಕ ಕೋರಿಶೆಟ್ಟರ್ ಸೇರಿ ಎಲ್ಲರ ಒಪ್ಪಿಗೆ ಪಡೆದು ಹಸ್ತಾಂತರ ಮಾಡಲಾಗಿದೆ.| ಪ್ರೊ. ಅಶೋಕ ಶಿರಾಳಶೆಟ್ಟಿ, ಕವಿವಿ ಪ್ರಭಾರಿ ಕುಲಪತಿ
EndFragment