ಸಾರೋಟು ಮೆರವಣಿಗೆ ಮಾಡ್ತಾರ?

14Rajesh2
Published on

ಚಾಮರಾಜನಗರ: ಮುಂದಿನ ವರ್ಷದ ಜಿಲ್ಲಾ ದಸರಾ ಮಹೋತ್ಸವದಲ್ಲಿ ಗತಕಾಲದ ರಾಜವೈಭವ ಮರುಕಳಿಸಲು ಕುದುರೆ ಸಾರೋಟು ನಡೆಯಲಿದೆಯೇ..?

ಚಾಮರಾಜನಗರದ ಹಾದಿಬೀದಿಗಳಲ್ಲಿ ಬೀಡಾಡಿ ಕುದುರೆಗಳು ಹಿಂಡು ಹಿಂಡಾಗಿ ಅಡ್ಡಾಡುತ್ತಿವೆ. ಮುಂದಿನ ವರ್ಷದ ದಸರಾ ಮಹೋತ್ಸವದಲ್ಲೇನಾದರೂ ಈ ಬೀಡಾಡಿ ಕುದುರೆಗಳನ್ನು ಸ್ಥಳೀಯ ಸಂಪನ್ಮೂಲವಾಗಿ ಬಳಸಿಕೊಂಡು ಸಾರೋಟು ಮೆರವಣಿಗೆ ನಡೆಸುವ ಯೋಚನೆ ಇರಬಹುದೇ ಎಂಬ ಪ್ರಶ್ನೆ ಮೂಡಿದೆ.

ಈ ಸಲ ‘ಚೆಲುವ ಚಾಮರಾಜನಗರ’ ದಸರಾ ಮಹೋತ್ಸವದಲ್ಲಿ ವಿವಿಧ ಕಾರ್ಯಕ್ರಮ ಮಾಡಿ ಜಿಲ್ಲಾಡಳಿತ ಅಪಾರ ಮೆಚ್ಚುಗೆ ಗಳಿಸಿತ್ತು. ಇದರಲ್ಲಿ ನಗರಸಭೆ ಪಾತ್ರವೂ ಇತ್ತು. ಮುಂದಿನ ಸಲ ಮತ್ತಷ್ಟು ಮೆಚ್ಚುಗೆ ಗಳಿಸಲು ಬೀಡಾಡಿ ಕುದುರೆಗಳಂತಹ ಸ್ಥಳೀಯ ಸಂಪನ್ಮೂಲವನ್ನು ಬಳಸಿಕೊಂಡು ಸಾರೋಟು ಮೆರವಣಿಗೆ ಮಾಡಬಹುದು. ಇದಕ್ಕಾಗಿಯೇ ಇವುಗಳ ಹಾವಳಿ ಮಿತಿ ಮೀರಿದ್ದರೂ, ಹಲವು ಬಾರಿ ಇದು ಸುದ್ದಿಯಾಗಿದ್ದರೂ ನಗರಸಭೆ ಫೀಲ್ಡ್‌ಗೆ ಇಳಿದು ಕಡಿವಾಣ ಹಾಕುವ ಕೆಲಸ ಮಾಡಿಲ್ಲ. ಕಚೇರಿಯಲ್ಲಿ ಕುಳಿತು ಸಾರೊಟು ಮೆರವಣಿಗೆಯ ಕುದುರೆಗಳಿಗೆ ಲಾಳ ಹೊಡೆಯಲು ಸಿದ್ಧತೆ ನಡೆಸುತ್ತಿರಬಹುದು ಎನಿಸುತ್ತಿದೆ.

ನಗರಸಭೆಗೆ ಹಿಡಿಶಾಪ: ಚಾಮರಾಜನಗರದಲ್ಲಿ ಪ್ರಮುಖ ಬೀದಿಗಳಿರುವುದೇ ಬೆರಳೆಣಿಕೆಯಷ್ಟು. ಇವುಗಳ ತುಂಬೆಲ್ಲಾ ಬೀಡಾಡಿ ಕುದುರೆಗಳ ಗುಂಪು ತುಂಬಿಕೊಂಡಿವೆ. ನಗರಸಭೆ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲೇ ಕೆಲವೊಮ್ಮೆ ಕುದುರೆಗಳು ಠಿಕಾಣಿ ಹೂಡಿಬಿಟ್ಟಿರುತ್ತಿವೆ. ವಾಹನ ಸವಾರರ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ.

ನಿರ್ವಹಣೆ ಇಲ್ಲದೆ ಸೊರಗಿರುವ ಪಾರ್ಕ್‌ಗಳ ಒಳಗೆ ಕುದುರೆಗಳ ಹಿಂಡು ತುಂಬಿಕೊಂಡಿರುತ್ತವೆ. ಮುಂಜಾನೆ ವಾಯುವಿಹಾರಕ್ಕೆ ಬರುವವರಿಗೆ ಇವುಗಳಿಂದ ಕಿರಿಕಿರಿ ಉಂಟಾಗುತ್ತಿದೆ.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣ, ಪೇಟೆ ಪ್ರೈಮರಿ ಶಾಲೆ, ಪಿಡಬ್ಲುೃಡಿ ಕಾಲನಿಯಲ್ಲಿರುವ ಸರ್ಕಾರಿ ಶಾಲೆ ಮೈದಾನಗಳಲ್ಲಿ ಮುಂಜಾನೆ ಹೊತ್ತು ಕುದುರೆಗಳು ಚಿನ್ನಾಟವಾಡುತ್ತಿದ್ದರೆ ವಾಯುವಿಹಾರಿಗಳಿಗೆ ಪ್ರಾಣ ಸಂಕಟವಾಗುತ್ತಿರುತ್ತದೆ. ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಅಕ್ಕಪಕ್ಕದ ರಸ್ತೆಗಳು ಸದಾಕಾಲ ಗಿಜಿಗುಡುತ್ತವೆ. ಾಸ್ಟ್‌ುಡ್ ಅಂಗಡಿಗಳ ಮುಂದೆ ಜನರು ತುಂಬಿಕೊಳ್ಳುತ್ತಾರೆ. ಇಲ್ಲೆಲ್ಲಾ ಬಿಡಾಡಿ ಕುದುರೆಗಳು ಧಾವಿಸಿ ಜನರಿಗೆ ಭಯ ಹುಟ್ಟಿಸುತ್ತಿವೆ. ವ್ಯಾಪಾರ-ವಹಿವಾಟು ನಡೆಯುವ ದೊಡ್ಡಂಗಡಿ ಬೀದಿ-ಚಿಕ್ಕಂಗಡಿ ಬೀದಿ ಸಂಚಾರ ದಟ್ಟಣೆಯಿಂದ ಬಳಲುತ್ತಿದೆ. ಎರಡು ದೊಡ್ಡ ಗಾಡಿಗಳ ಮುಖಾಮುಖಿಯಾಗಿ ಬಿಟ್ಟರೆ ಇಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಬಿಡುತ್ತದೆ. ಇಂತಹ ವೇಳೆಯಲ್ಲಿ ಕುದುರೆಗಳು ರಸ್ತೆಯಲ್ಲಿ ನಿಂತು ಬಿಡುತ್ತವೆ. ಬಡಾವಣೆಗಳಲ್ಲೂ ಕುದುರೆಗಳ ಸಂಚಾರ ಜೋರಾಗಿದೆ. ಇವುಗಳ ಹಾವಳಿ ತಪ್ಪಿಸಲಾಗದ ನಗರಸಭೆಗೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

ಪ್ಲಾಸ್ಟಿಕ್, ಕಸವೇ ಆಹಾರ:

ನಗರಸಭೆ ಸಕಾಲಕ್ಕೆ ವಿಲೇವಾರಿ ಮಾಡದ ಕಸ, ಪ್ಲಾಸ್ಟಿಕ್ ತ್ಯಾಜ್ಯವೇ ಬೀಡಾಡಿ ಕುದುರೆಗಳ ಆಹಾರವಾಗುತ್ತಿರುವುದು ಬೇಸರದ ಸಂಗತಿ. ಕುದುರೆಗಳ ಹಿಂಡು ಊರೆಲ್ಲಾ ಅಲೆಯುತ್ತಾ ಸಿಕ್ಕ ಸಿಕ್ಕ ಕಸದ ರಾಶಿಯಲ್ಲಿ ಆಹಾರ ಹುಡುಕಿ ಹೊಟ್ಟೆ ತುಂಬಿಸಿಕೊಳ್ಳುತ್ತಿವೆ. ನಗರದ ಕೆಲವು ಹೋಟೆಲ್‌ಗಳಲ್ಲಿ ಪ್ಲಾಸ್ಟಿಕ್ ಕವರ್‌ಗಳಲ್ಲಿ ಇಡ್ಲಿ ಬೇಯಿಸಿ ಮನುಷ್ಯರ ಹೊಟ್ಟೆಗೆ ಪ್ಲಾಸ್ಟಿಕ್ ಸೇರುತ್ತಿರುವಾಗ ಕಸವನ್ನು ಆಹಾರ ಮಾಡಿಕೊಂಡಿರುವ ಬೀಡಾಡಿ ಕುದುರೆಗಳ ಉದರಕ್ಕೆ ಪ್ಲಾಸ್ಟಿಕ್ ತ್ಯಾಜ್ಯ ಸೇರದೆ ಇರುವುದೇ?. ಇವು ಅನಾರೋಗ್ಯಕ್ಕೆ ಒಳಗಾಗಿ ಸತ್ತು ಹೋದಾಗಷ್ಟೇ ಇಲ್ಲಿಂದ ಮುಕ್ತಿ ಎನ್ನುವಂತಾಗಿದೆ.

ಪ್ರಕಟಣೆ ಕೊಟ್ಟಿದ್ದಷ್ಟೇ! ನಗರದಲ್ಲಿ ಬೀಡಾಡಿ ಕುದುರೆಗಳು ಮಾತ್ರವಲ್ಲ, ಹಸುಗಳು, ಹಂದಿಗಳ ಕಾಟವೂ ಮಿತಿ ಮೀರಿದೆ. ವಿಪರೀತವಿರುವ ಬೀದಿ ನಾಯಿಗಳ ಹಾವಳಿ ತಪ್ಪಿಸಲು ಸಂತಾನಶಕ್ತಿ ಹರಣ ಶಸಚಿಕಿತ್ಸೆ ನಡೆಸಲಾಗಿತ್ತು. ಆದರೆ ಬೀಡಾಡಿ ಕುದುರೆ, ಹಸು, ಹಂದಿಗಳ ಉಪಟಳವನ್ನು ನಿಲ್ಲಿಸಲು ಪತ್ರಿಕೆ ಪ್ರಕಟಣೆಯನ್ನು ಮಾತ್ರ ನೀಡಿರುವುದು ಬಿಟ್ಟರೆ ಬೇರೇನೂ ಮಾಡಿಲ್ಲ. ಬೀದಿಯಲ್ಲಿ ಅಡ್ಡಾಡುತ್ತಿರುವ ಹಸು, ಕುದುರೆ, ಹಂದಿಗಳನ್ನು ಮಾಲೀಕರು ಹಿಡಿದಿಟ್ಟುಕೊಳ್ಳದಿದ್ದರೆ ವಶಕ್ಕೆ ಪಡೆಯುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಇದಿಷ್ಟು ಮಾಡಿದರೆ ಬೀಡಾಡಿ ಕುದುರೆಗಳ ಹಾವಳಿ ನಿಯಂತ್ರಣಕ್ಕೆ ಬರಲು ಸಾಧ್ಯವೇ ಇಲ್ಲ. ಬೀಡಾಡಿ ಕುದುರೆಗಳನ್ನು ಹಿಡಿದು ಮೈಸೂರಿನ ಪಿಂಜರಾಪೋಲ್‌ನಂತಹ ಪ್ರಾಣಿ ಸಾಕಣೆ ಕೇಂದ್ರಗಳಿಗೆ ಬಿಡಬೇಕು. ಈ ಕೆಲಸವನ್ನು ನಗರಸಭೆ ಮಾಡಿದೆಯೇ? ಕಳೆದ ಕೆಲವು ವರ್ಷಗಳಲ್ಲಿ ಎಷ್ಟು ಬೀಡಾಡಿ ಕುದುರೆಗಳನ್ನು ಸಾಕಣೆ ಕೇಂದ್ರಗಳಿಗೆ ಬಿಟ್ಟಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ಪೌರಾಯುಕ್ತರು, ನಗರಸಭೆ ಅಧ್ಯಕ್ಷರು ಬದಲಾಗಿ ಹೊಸಬರು ಬಂದರೂ ಬೀಡಾಡಿ ಕುದುರೆಗಳ ಕಾಟ ತಪ್ಪುತ್ತಿಲ್ಲ.

ಬೀಡಾಡಿ ದನಗಳು, ಕುದುರೆಗಳನ್ನು ಹಿಡಿದುಕೊಂಡು ಹೋಗಬೇಕೆಂದು ಪ್ರಕಟಣೆಯನ್ನು ಹೊರಡಿಸಿದ್ದೆವು. ಕುದುರೆಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ವಾಹನಗಳ ಸಂಚಾರದ ವೇಳೆ ಅಡ್ಡಬಂದು ನಿಲ್ಲುತ್ತವೆ. ಈ ಹಿನ್ನೆಲೆಯಲ್ಲಿ ಸೂಕ್ತ ಸ್ಥಳಕ್ಕೆ ರವಾನಿಸಲು ಕ್ರಮ ತೆಗೆದುಕೊಳ್ಳುತ್ತೇವೆ. ರಾಮದಾಸ್ ಪೌರಾಯುಕ್ತ, ನಗರಸಭೆ, ಚಾಮರಾಜನಗರ ಚಾಮರಾಜನಗರದ ಇಂದಿರಾ ನಗರದ ಖಾಲಿ ನಿವೇಶನಗಳಲ್ಲಿ ಬೀಡಾಡಿ ಕುದುರೆಗಳು ಗುಂಪುಗೂಡಿ ಭಯ ಸೃಷ್ಟಿಸುತ್ತಿವೆ. ಕೆಲವು ದಿನಗಳ ಹಿಂದೆ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಹೋಗುತ್ತಿದ್ದ ನನ್ನ ತಂದೆಯ ಸ್ನೇಹಿತರಿಗೆ ಕುದುರೆಗಳು ಅಡ್ಡಬಂದು ಪೆಟ್ಟು ಬಿದ್ದಿತ್ತು. ನಗರಸಭೆ ಸಾರ್ವಜನಿಕರ ಹಿತದೃಷ್ಟಿ, ಪ್ರಾಣಿಗಳ ಮೇಲೆ ಮಾನವೀಯತೆ ತೋರಿ ಸಾಕಣೆ ಕೇಂದ್ರಕ್ಕೆ ಬಿಡಬೇಕು. ದರ್ಶನ್ ಇಂದಿರಾನಗರ ನಿವಾಸಿ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net