

ಚಾಮರಾಜನಗರ: ತಾಲೂಕಿನ ದೊಡ್ಡಮೋಳೆ, ಚಿಕ್ಕಮೋಳೆ, ಬ್ಯಾಡಮೂಡ್ಲು ಗ್ರಾಮಗಳಿಂದ ಹರದನಹಳ್ಳಿಯ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಸೂಕ್ತ ಸಾರಿಗೆ ಸೌಲಭ್ಯ ಒದಗಿಸಿಕೊಡಬೇಕೆಂದು ಮಕ್ಕಳು ಎಂಎಸ್‌ಐಎಲ್ ಅಧ್ಯಕ್ಷ ಸಿ.ಪುಟ್ಟರಂಗಶೆಟ್ಟಿ ಬಳಿ ಮನವಿ ಮಾಡಿಕೊಂಡರು.
ಹರದನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ 10ನೇ ತರಗತಿಯ ವಿದ್ಯಾರ್ಥಿಗಳ ಪಾಲಕರ ಸಭೆಯ ಬಳಿಕ ಎಂಎಸ್‌ಐಎಲ್ ಅಧ್ಯಕ್ಷ ಸಿ.ಪುಟ್ಟರಂಗಶೆಟ್ಟಿ ಬಳಿ ವಿದ್ಯಾರ್ಥಿಗಳು ಮನವಿ ಮಾಡಿಕೊಂಡರು. ದೊಡ್ಡಮೋಳೆ, ಚಿಕ್ಕಮೋಳೆ, ಬ್ಯಾಡಮೂಡ್ಲು ಗ್ರಾಮಗಳಲ್ಲಿ ಪ್ರೌಢಶಾಲೆಗಳಿಲ್ಲ. ಈ ಹಿನ್ನೆಲೆಯಲ್ಲಿ ಹರದನಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಗೆ ಬರಬೇಕು. ಆದೆ ಶಾಲೆಗೆ ಆಗಮಿಸಲು ಸೂಕ್ತ ಸಮಯಕ್ಕೆ ಬಸ್ ಸೌಲಭ್ಯವಿಲ್ಲ. ಹೀಗಾಗಿ ಆಟೋಗಳಲ್ಲಿ ಬರುತ್ತಿದ್ದೇವೆ. ಒಂದೊಂದು ದಿನ ಆಟೋ ಕೂಡ ಬರುವುದಿಲ್ಲ. ಆಗ ಶಾಲೆಗೆ ಆಗಮಿಸಲು ತಡವಾಗುತ್ತಿದೆ. ಇದರಿಂದ ನಮಗೆ ಶಿಕ್ಷಣ ಪಡೆಯುವುದಕ್ಕೆ ತೊಂದರೆಯಾಗುತ್ತಿದೆ ಎಂದು ಅಳಲು ತೋಡಿಕೊಂಡರು. ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ಎಂಎಸ್‌ಐಎಲ್ ಅಧ್ಯಕ್ಷ ಸಿ.ಪುಟ್ಟರಂಗಶೆಟ್ಟಿ ಯಾವ ಊರುಗಳಿಂದ ಎಷ್ಟು ವಿದ್ಯಾರ್ಥಿಗಳು ಬರುತ್ತೀರಿ ಎಂದು ಮಾಹಿತಿ ಪಡೆದುಕೊಂಡರು. ಬಳಿಕ ಬಸ್ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದರು. ಇದಕ್ಕೂ ಮೊದಲು ಶಾಲೆಯ ಆವರಣದಲ್ಲಿ ಪಾಲಕರ ಸಭೆ ನಡೆಯಿತು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್, ಮಹದೇವಶೆಟ್ಟಿ, ಗಡಿಯಜಮಾನ ಜಯಸ್ವಾಮಿ, ಎಸ್‌ಡಿಎಂಸಿ ಅಧ್ಯಕ್ಷ ಪುಟ್ಟರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ, ಮುಖಂಡರಾದ ಕೆ.ಶಿವರಾಮು ಇತರರು ಇದ್ದರು.
ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಶನಿವಾರದಿಂದ ಸಾರಿಗೆ ಸೌಲಭ್ಯ ಒದಗಿಸಿಕೊಡಲುವುದಾಗಿ ತಿಳಿಸಿದ್ದಾರೆ. ಸಿ.ಪುಟ್ಟರಂಗಶೆಟ್ಟಿ, ಎಂಎಸ್‌ಐಎಲ್ ಅಧ್ಯಕ್ಷ, ಚಾಮರಾಜನಗರ