

ಕೊಳ್ಳೇಗಾಲ: ಬಸ್ ನಿಲುಗಡೆ ವಿಚಾರಕ್ಕೆ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಮತ್ತು ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ್ದವರನ್ನು ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಸಿಂಗನಲ್ಲೂರು ಗ್ರಾಮದ ಬಾಬು, ರಮೇಶ್ ಹಾಗೂ ಮಂಜು ಬಂಧಿತ ಆರೋಪಿಗಳು. ಮಳವಳ್ಳಿ ತಾಲೂಕು ಅಣಸಾಲೆ ಗ್ರಾಮದ ಬಸ್ ನಿರ್ವಾಹಕ ಸತೀಶ್ ಹಾಗೂ ಬಸ್ ಚಾಲಕ ಶಿವಕುಮಾರ್ ಹಲ್ಲೆಗೊಳಗಾದವರು. ಮಳವಳ್ಳಿ ಡಿಪೋಗೆ ಸೇರಿದ ಕೆಎಸ್‌ಆರ್‌ಟಿಸಿ ಬಸ್ ಭಾನುವಾರ ಬೆಂಗಳೂರಿನಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವಾಗ ಮಾರ್ಗ ಮಧ್ಯ ಸಿಗುವ ಸಿಂಗನಲ್ಲೂರು ಗ್ರಾಮದ ಬಳಿ ರಾತ್ರಿ 8.50ಕ್ಕೆ ತೆರಳುವಾಗ ಬೈಕ್‌ನಲ್ಲಿ ಬಂದ ನಾಲ್ವರು ಬಸ್ ಅಡ್ಡಗಟ್ಟಿದ್ದಾರೆ. ಯಾಕೆ ಬಸ್ ನಿಲ್ಲಿಸುವುದಿಲ್ಲ ಎಂದು ಚಾಲಕ ಹಾಗೂ ನಿರ್ವಾಹಕನನ್ನು ಅವಾಚ್ಯ ಶಬ್ಧದಿಂದ ನಿಂದಿಸಿದ್ದಾರೆ.
ನಿರ್ವಾಹಕ ಸತೀಶ್ ಇದು ವೇಗದೂತ ಬಸ್ ಆದ್ದರಿಂದ ಬಸ್ ನಿಲುಗಡೆ ಇಲ್ಲ ಎಂದು ಸ್ಪಷ್ಟಪಡಿಸಿದರೂ ಚಾಲಕನ ಮೇಲೆ ಹಲ್ಲೆ ಮಾಡಿದ್ದಲ್ಲದೆ ನಿರ್ವಾಹಕನ ತಲೆಗೆ ಕಲ್ಲಿನಿಂದ ಹೊಡೆದು ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ಕಂಡಕ್ಟರ್ ಹೋಲಿ ಕ್ರಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಸೋಮವಾರ ಪೊಲೀಸರಿಗೆ ಸತೀಶ್ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹಲ್ಲೆ ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.