

ಹುಬ್ಬಳ್ಳಿ: ಲಾಕ್ಡೌನ್ನಿಂದಾಗಿ ಸಿಲುಕಿಕೊಂಡಿದ್ದ ವಲಸೆ ಕಾರ್ವಿುಕರನ್ನು ಅವರವರ ಊರುಗಳಿಗೆ ತಲುಪಿಸಲು ಶ್ರಮ ವಹಿಸಿದ ಸಾರಿಗೆ ಸಂಸ್ಥೆಯ ಚಾಲಕ, ನಿರ್ವಾಹಕರು ಹಾಗೂ ಸಿಬ್ಬಂದಿಗೆ ಹೂ ಮಳೆಗರೆದು ಅಭಿನಂದನೆ ಸಲ್ಲಿಸಲಾಯಿತು.
ಗುರುವಾರ ಸಂಜೆ ನಗರದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ದೀಪಾ ಚೋಳನ್, ಕಳೆದ ಮೂರು ದಿನಗಳಿಂದ ಸರ್ಕಾರದ ನಿರ್ದೇಶನದಂತೆ ವಲಸೆ ಕಾರ್ವಿುಕರನ್ನು ಜಿಲ್ಲೆಗೆ ಬರಮಾಡಿಕೊಳ್ಳುವ ಹಾಗೂ ಜಿಲ್ಲೆಯಿಂದ ತೆರಳಲು ಅವಕಾಶ ಮಾಡಿಕೊಡಲಾಗಿದೆ. ಸಾರಿಗೆ, ವೈದ್ಯಕೀಯ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ಹಗಲು ರಾತ್ರಿ ಈ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಪ್ರಶಂಸಿಸಿದರು.
ವಾಕರಸಾ ಸಂಸ್ಥೆ ಎಂಡಿ ರಾಜೇಂದ್ರ ಚೋಳನ್ ಮಾತನಾಡಿ, ಬೆಂಗಳೂರಿನಿಂದ 148 ಬಸ್ಗಳಲ್ಲಿ ವಲಸೆ ಕಾರ್ವಿುಕರು ಆಗಮಿಸಿದ್ದಾರೆ. 200 ಬಸ್ಗಳಲ್ಲಿ ಬೆಂಗಳೂರು ಸೇರಿ ರಾಜ್ಯದ ಇತರೆ ಜಿಲ್ಲೆಗಳಿಗೆ ಸುಮಾರು 14 ಸಾವಿರ ಕಾರ್ವಿುಕರನ್ನು ಸಂಸ್ಥೆ ವ್ಯಾಪ್ತಿಯ 8 ಜಿಲ್ಲೆಗಳಿಂದ ಕಳುಹಿಸಿ ಕೊಡಲಾಗಿದೆ. ಹೊರ ರಾಜ್ಯಗಳಿಗೂ ವಲಸೆ ಕಾರ್ವಿುಕರನ್ನು ಸಂಸ್ಥೆಯ ಬಸ್ಗಳಲ್ಲಿ ಕಳುಹಿಸಲಾಗಿದೆ. ಈ ಕಾರ್ಯದಲ್ಲಿ ಸಂಸ್ಥೆಯ ಚಾಲಕ, ನಿರ್ವಾಹಕ ಹಾಗೂ ವೈದ್ಯಕೀಯ ಸಿಬ್ಬಂದಿ ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಿದ್ದಾರೆ. ಅವರಿಗೆ 1 ಸಾವಿರ ರೂ. ಗೌರವಧನ ನೀಡಿ ಅಭಿನಂದಿಸಲಾಗಿದೆ ಎಂದು ತಿಳಿಸಿದರು.
240 ಕೋಟಿ ನಷ್ಟ: ನಿತ್ಯ ಸಂಸ್ಥೆಯ ಬಸ್ಗಳು 5 ಸಾವಿರ ಅನುಸೂಚಿಗಳಲ್ಲಿ 16 ಲಕ್ಷ ಕಿ.ಮೀ. ಸಂಚರಿಸುತ್ತಿದ್ದವು. ಇದರಿಂದ 6 ಕೋಟಿ ಆದಾಯ ಬರುತ್ತಿತ್ತು. 40 ದಿನಗಳ ಲಾಕ್ಡೌನ್ನಿಂದಾಗಿ ಸುಮಾರು 240 ಕೋಟಿ ನಷ್ಟ ಉಂಟಾಗಿದೆ. ಬಿಆರ್ಟಿಎಸ್ ನಗರ ಸಾರಿಗೆಯಿಂದ ತಿಂಗಳಿಗೆ 5 ಕೋಟಿ ಆದಾಯ ಬರುತ್ತಿತ್ತು. ಅದರಲ್ಲೂ ನಷ್ಟ ಉಂಟಾಗಿದೆ. ಸಾರಿಗೆ ಸಚಿವರು ಹಾಗೂ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ನೌಕರರ ಪೂರ್ಣ ವೇತನ ನೀಡಲು ಆದೇಶ ನೀಡಿದ್ದಾರೆ. ಮೇ 17ರ ನಂತರ ಪರಸ್ಪರ ಅಂತರದೊಂದಿಗೆ ಬಸ್ಗಳನ್ನು ಓಡಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ವಿವೇಕಾನಂದ ವಿಶ್ವಜ್ಞ, ಎಚ್.ಆರ್. ರಾಮನ ಗೌಡರ್, ಹುಬ್ಬಳ್ಳಿ ನಗರ ತಹಶೀಲ್ದಾರ ಶಶಿಧರ ಮಾಡ್ಯಾಳ, ಡಿಟಿಒ ಅಶೋಕ್ ಪಾಟೀಲ ಇದ್ದರು.