ಸಾರಿಗೆ ಮುಷ್ಕರ 1.20 ಕೋಟಿ ರೂ. ನಷ್ಟ

20201214_115030 copy
Published on


ಯಾದಗಿರಿ: ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ಸಿಬ್ಬಂದಿಗಳು ಕಳೆದ ಮೂರು ದಿನಗಳಿಂದ ನಡೆಸುತ್ತಿದ್ದ ಮುಷ್ಕರ ಹಿಂಪಡೆದುಕೊಂಡ ಕಾರಣ ಜಿಲ್ಲಾದ್ಯಂತ ಬಸ್ ಸಂಚಾರ ಪುನರಾರಂಭಗೊಂಡ

ಕಳೆದ ಮೂರು ದಿನಗಳಿಂದ ಸಾರಿಗೆ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗದೆ ಮುಷ್ಕರ ನಡೆಸಿದ್ದರಿಂದ ಜಿಲ್ಲೆಯಲ್ಲಿ ಬಸ್ ಕಾರ್ಯಾಚರಣೆ ಇಲ್ಲದೆ ಪ್ರಯಾಣಿಕರು ತೀವೃ ತೊಂದರೆ ಪಡುವಂತಾಗಿತ್ತು. ಆದರೆ ಸರ್ಕಾರ ನೌಕರರ ಕೆಲ ಬೇಡಿಕೆ ಈಡೇರಿಸಲು ಒಪ್ಪಿಕೊಂಡ ಕಾರಣ ಸೋಮವಾರ ಮಧ್ಯಾಹ್ನದಿಂದ ಜಿಲ್ಲಾದ್ಯಂತ ಬಸ್ ಸೇವೆ ಆರಂಭಗೊಂಡಿತು. ಪೊಲೀಸ್ ಭದ್ರತೆಯೊಂದಿಗೆ ಬಸ್ಗಳು ಜಿಲ್ಲೆಯಿಂದ ವಿವಿಧ ಮಾರ್ಗಗಳಿಗೆ ತೆರಳಿದವು.

ಇತ್ತ ಸಾರಿಗೆ ಬಸ್ ಸೇವೆ ಆರಂಭಗೊಂಡು ಪ್ರಯಾಣಿಕರು ಮಾತ್ರ ನಿಲ್ದಾಣಕ್ಕೆ ಆಗಮಿಸದೆ ದೂರವೇ ಉಳಿದ ಕಾರಣ ಜಿಲ್ಲೆಯಲ್ಲಿನ ಬಸ್ ನಿಲ್ದಾಣಗಳು ಜನರಿಲ್ಲದೆ ಬಣಗುಡುತ್ತಿದ್ದವು. ಬಸ್ ಇಲ್ಲದ ಕಾರಣ ಜನತೆ ಖಾಸಗಿ ವಾಹನಗಳ ಮೇಲೆ ಅವಲಂಬನೆಯಾಗಿ ಹೈರಾಣಾಗುವಂತಾಗಿತ್ತು. ಗ್ರಾಮೀಣ ಭಾಗಕ್ಕೆ ಬಸ್ ಇಲ್ಲದೆ ಜನತೆ ತೊಂದರೆ ಅನುಭವಿಸುವಂತಾಯಿತು. ಶಹಾಪುರ ಘಟಕದಿಂದ 17, ಯಾದಗಿರಿಯಿಂದ 5, ಸುರಪುರದಿಂದ 3 ಹಾಗೂ ಗುರುಮಠಕಲ್ನಿಂದ 2 ಬಸ್ಗಳು ವಿವಿಧ ಮಾರ್ಗಗಳಿಗೆ ಕಾರ್ಯಾಚರಣೆ ನಡೆಸಿದವು.

ಇನ್ನೂ ಬಸ್ ಸೇವೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಈಶಾನ್ಯ ರಸ್ತೆ ಸಾರಿಗೆಯ ಯಾದಗಿರಿ ವಿಭಾಗಕ್ಕೆ 1.20 ಕೋಟಿ ರೂ. ನಷ್ಟವಾಗಿದೆ ಎಂದು ನಿಯಂತ್ರಣಾಧಿಕಾರಿ ಹರಿಬಾಬು ಮಾಹಿತಿ ನೀಡಿದರು.ನಿಲ್ದಾಣದಲ್ಲಿ ಪ್ರಯಾಣಿಕರಿಲ್ಲದ ಕಾರಣ ಕ್ಯಾಂಟೀನ್, ಬುಕ್ಸ್ಟಾಲ್, ಹಣ್ಣಿನ ಅಂಗಡಿಗಳ ವ್ಯಾಪಾರಸ್ಥರು ಸಹ ನಷ್ಟ ಅನುಭವಿಸಬೇಕಾಯಿತು.ಕೋವಿಡ್-19 ನಿಂದ ಮೊದಲೇ ನಷ್ಟ ಅನುಭವಿಸಿದ ನಮಗೆ ಸಿಬ್ಬಂದಿಗಳ ಮುಷ್ಕರಿಂದ ಮತ್ತೆ ಮೂರು ದಿನ ಸಾವಿರಾರು ರೂ.ಗಳ ನಷ್ಟ ಅನುಭವಿಸುವಂತಾಗಿದೆ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net