

ಮದ್ದೂರು: ಐವತ್ತು ವರ್ಷಗಳಿಂದ ಬಸ್ ಸೌಲಭ್ಯದಿಂದ ವಂಚಿತವಾಗಿದ್ದ ಗ್ರಾಮಗಳಿಗೆ ಶಕ್ತಿ ಯೋಜನೆಯಡಿ ಬಸ್ ಸೌಲಭ್ಯ ಕಲ್ಪಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಶುಕ್ರವಾರ ಚಾಲನೆ ನೀಡಿದರು.
ತಾಲೂಕಿನ ಕೊಪ್ಪ ಹೋಬಳಿಯ ತರಿಕೆರೆ ಕಾಲನಿ ಗ್ರಾಮದಲ್ಲಿ ಸರ್ಕಾರಿ ಬಸ್ ಸಂಚಾರಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದ ಚಲುವರಾಯಸ್ವಾಮಿ, ತರಿಕೆರೆ ಕಾಲನಿ, ತರಿಕೆರೆ, ಮೂಡ್ಯ, ಯಡವನಹಳ್ಳಿ, ಕಿರಂಗೂರು, ಕೆ.ಎಚ್.ಕೊಪ್ಪಲು 50 ವರ್ಷಗಳಿಂದ ಸಾರಿಗೆ ಸೌಲಭ್ಯದಿಂದ ವಂಚಿತವಾಗಿದ್ದವು. ಈ ಗ್ರಾಮಗಳಿಗೆ ತೆರಳಲು ರಸ್ತೆಗಳು ಹದಗೆಟ್ಟಿವೆ ಎಂಬ ನೆಪವೊಡ್ಡಿ ಸಾರಿಗೆ ಬಸ್ ಸೇವೆ ಸ್ಥಗಿತಗೊಳಿಸ ಲಾಗಿತ್ತು ಎಂದರು.
ಕೊಪ್ಪ, ಕೌಡ್ಲೆ ಹಾಗೂ ವಿವಿಧ ಗ್ರಾಮಗಳಿಗೆ ತೆರಳಲು ಶಾಲಾ ಮಕ್ಕಳು, ಸಾರ್ವಜನಿಕರು ಆಸ್ಪತ್ರೆಗೆ ತೆರಳಲು ಕಾಲ್ನಡಿಗೆ, ದ್ವಿಚಕ್ರ ವಾಹನ ಹಾಗೂ ಆಟೋಗಳಲ್ಲಿ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿತ್ತು. ಆದರೆ, ರಾಜ್ಯ ಸರ್ಕಾರ ಈಗ ಈ ಗ್ರಾಮಗಳಿಗೆ ಬಸ್ ಸೌಲಭ್ಯ ಕಲ್ಪಿಸಿದೆ ಎಂದು ತಿಳಿಸಿದರು.
ಸದ್ಯ ಈ ಮಾರ್ಗದಲ್ಲಿ ಒಂದು ಬಸ್ ಸೌಲಭ್ಯ ಕಲ್ಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ಉತ್ತಮ ರಸ್ತೆ ನಿರ್ಮಿಸಿ ಅಗತ್ಯಕ್ಕೆ ತಕ್ಕಂತೆ ಬಸ್ ಓಡಿಸಲಾಗುವುದು ಎಂದು ಸಚಿವರು ಗ್ರಾಮಸ್ಥರಿಗೆ ಭರವಸೆ ನೀಡಿದರು.
ತರಿಕೆರೆ ಕಾಲನಿ ಗ್ರಾಮದಲ್ಲಿ ಸಾರಿಗೆ ಬಸ್‌ಗೆ ಬಾಳೆ ಕಂಬ, ಮಾವಿನ ತೋರಣ ಕಟ್ಟಿ ವಿಶೇಷ ಪೂಜೆ ನೆರವೇರಿಸಿ ಗ್ರಾಮಸ್ಥರು ಸಂಭ್ರಮಿಸಿದರು. ಇನ್ನು ತಮ್ಮ ಊರಿನಿಂದಲೇ ಬಸ್‌ನಲ್ಲಿ ಪ್ರಯಾಣಿಸಿ ಶಾಲೆ, ಕಾಲೇಜುಗಳನ್ನು ಸುರಕ್ಷಿತವಾಗಿ ತಲುಪಲು ಅವಕಾಶ ದೊರಕಿದ್ದರಿಂದ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು.
ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗಿಗೌಡ, ತಾಪಂ ಮಾಜಿ ಉಪಾಧ್ಯಕ್ಷ ಬೆಕ್ಕಳಲೆ ರಘು, ನಾಗಮಂಗಲ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ದಿವಾಕರ್, ರಮಾನಂದ ಮತ್ತಿತರರು ಇದ್ದರು.