

ಚಿಕ್ಕಬಳ್ಳಾಪುರ : ಅತ್ತ ಸರ್ಕಾರವೂ ಬಗ್ಗದೆ, ಇತ್ತ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರೂ ಜಗ್ಗದೆ ಮುಂದುವರಿದಿರುವ 6ನೇ ವೇತನ ಆಯೋಗದ ಜಾರಿ ಜಟಾಪಟಿ ಜಿಲ್ಲೆಯ ಮೇಲೂ ಪರಿಣಾಮ ಬೀರಿದೆ. ಜಿಲ್ಲೆಯ ಸಾರಿಗೆ ನೌಕರರು ಕರ್ತವ್ಯದಿಂದ ದೂರ ಉಳಿದಿರುವುದರಿಂದ ಕೋಟ್ಯಂತರ ರೂ. ನಷ್ಟ ಉಂಟಾಗುತ್ತಿರುವ ನಡುವೆ ಪರ್ಯಾಯ ವ್ಯವಸ್ಥೆಗೂ ಅಡ್ಡಿಪಡಿಸುತ್ತಿರುವ ಮತ್ತೊಂದು ಸಮಸ್ಯೆ ಸೃಷ್ಟಿಯಾಗಿದೆ.
ಮುಷ್ಕರದ ನಡುವೆಯೂ ಕರ್ತವ್ಯಕ್ಕೆ ಹಾಜರಾಗುವ ನೌಕರರಿಗೆ ಬೆದರಿಕೆ ಹಾಕುತ್ತಿರುವ, ಸಾರಿಗೆ ಬಸ್‌ಗಳ ಬದಲು ಖಾಸಗಿ ವಾಹನಗಳ ಪರ್ಯಾಯ ವ್ಯವಸ್ಥೆಗೆ ಅಡ್ಡಿಪಡಿಸುತ್ತಿರುವ ಪ್ರಕರಣಗಳು ನಡೆಯುತ್ತಿರುವುದು ಸಂಚಾರಕ್ಕೆ ಅಡ್ಡಿಯಾಗಿದೆ.
ಜಿಲ್ಲೆಯಲ್ಲಿ ಈವರೆಗೂ ಕರ್ತವ್ಯಕ್ಕೆ ಅಡ್ಡಿ, ಬಸ್ ಮೇಲೆ ಕಲ್ಲು ತೂರಾಟ, ಕೆಲಸದಲ್ಲಿರುವ ಸಿಬ್ಬಂದಿ ಮೇಲೆ ಹಲ್ಲೆ, ಬೆದರಿಕೆ ಮತ್ತು ಗಲಾಟೆಗೆ ಸಂಬಂಧಿಸಿದಂತೆ 14 ಕಿಡಿಗೇಡಿ ನೌಕರರ ವಿರುದ್ಧ 4 ಪ್ರಕರಣಗಳು ದಾಖಲಾಗಿದ್ದು, ಈಗಾಗಲೇ 6 ನೌಕರರನ್ನು ಬಂಧಿಸಿ ನ್ಯಾಯಾಂಗದ ವಶಕ್ಕೆ ನೀಡಲಾಗಿದೆ, ಹಾಗೆಯೇ ತಲೆ ಮರೆಸಿಕೊಂಡಿರುವ ನೌಕರರ ಪತ್ತೆಗೆ ಬಲೆ ಬೀಸಲಾಗಿದೆ.
ಬೆರಳೆಣಿಕೆ ಸಿಬ್ಬಂದಿ ಹಾಜರು : ಸಂಘಟನೆ ಮುಷ್ಕರಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲೆಯ 6 ತಾಲೂಕಿನಲ್ಲೂ ಬಹುತೇಕ ನೌಕರರು ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಏ.6ರ ಮಧ್ಯಾಹ್ನದಿಂದಲೇ ಬಸ್‌ಗಳು ಡಿಪೋಗಳಲ್ಲಿ ನಿಂತಿವೆ. ಇದರ ನಡುವೆಯೂ ಬೆರಳೆಣಿಕೆ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು ಪ್ರತಿ ಡಿಪೋಗಳಲ್ಲಿ ಕನಿಷ್ಠ 8 ಬಸ್‌ಗಳು ಸಂಚರಿಸುತ್ತಿವೆ. ಆದರೆ ಗಲಾಟೆ ಸಂಭವಿಸುವ ಹಿನ್ನೆಲೆಯಲ್ಲಿ ಪ್ರತಿ ಬಸ್‌ನಲ್ಲೂ ಪೊಲೀಸ್ ಸಿಬ್ಬಂದಿ ನಿಯೋಜಿಸಿರುವುದಲ್ಲದೆ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸುವ ಇಲ್ಲವೇ ಅಹಿತಕರ ಘಟನೆಗಳಿಗೆ ಕಾರಣವಾಗುವವರ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಲಾಗುತ್ತಿದೆ.
ನಿಲ್ದಾಣದಲ್ಲಿ ಖಾಸಗಿ ದರ್ಬಾರ್ : ಬಹುತೇಕ ಸಾರಿಗೆ ಸಂಸ್ಥೆ ಬಸ್‌ಗಳು ಆಯಾ ಘಟಕಗಳಲ್ಲಿ ನಿಂತಿರುವುದರಿಂದ ಸಾರಿಗೆ ಬಸ್ ನಿಲ್ದಾಣಗಳಲ್ಲಿ ಖಾಸಗಿ ವಾಹನಗಳು ಸೇವೆ ಸಲ್ಲಿಸುತ್ತಿವೆ. ಆದರೂ ನಿರ್ದಿಷ್ಟ ಊರುಗಳಿಗೆ ತೆರಳಲು ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. ಸೀಟು ಭರ್ತಿಯಾಗುವವರೆಗೂ ಬಸ್ ಸಂಚರಿಸುವುದಿಲ್ಲ. ಜತೆಗೆ ಹೆಚ್ಚಿನ ಪ್ರಯಾಣಿಕರ ನಿರೀಕ್ಷೆಯ ಊರುಗಳಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದ್ದು, ಗ್ರಾಮೀಣ ಭಾಗದ ಬಹುತೇಕ ಕಡೆ ಸೌಕರ್ಯ ಇಲ್ಲವಾಗಿದೆ. ಅನವಶ್ಯಕವಾಗಿ ಕಾಯುವಿಕೆ, ಸರಿಯಾದ ಸಮಯಕ್ಕೆ ಬಾರದ ಬಸ್‌ಗಳಿಂದ ವಿದ್ಯಾರ್ಥಿಗಳು, ಖಾಸಗಿ ಮತ್ತು ಸರ್ಕಾರಿ ನೌಕರರು ಸೇರಿ ಹಲವರು ದ್ವಿಚಕ್ರ ವಾಹನ, ಇತರ ವಾಹನಗಳನ್ನು ನೆಚ್ಚಿಕೊಂಡಿದ್ದು, ಸಾರಿಗೆ ಸುಗಮ ಸಂಚಾರವಂತೂ ಅಸ್ತವ್ಯಸ್ತವಾಗಿದೆ.
ಅಲ್ಲಲ್ಲಿ ಅಹಿತಕರ ಘಟನೆಗಳು : 1. ಬೆಂಗಳೂರಿನಿಂದ ಹೈದರಾಬಾದ್‌ಗೆ ಪೆರೇಸಂದ್ರ ಮಾರ್ಗವಾಗಿ ತೆರಳುತ್ತಿದ್ದ ಓಲ್ವಾ ಸ್ಲೀಪರ್ ಕೋಚ್ ಮೇಲೆ ಚೆಂಡೂರು ಕ್ರಾಸ್ ಬಳಿ ಕಲ್ಲು ತೂರಾಟ ನಡೆಸಲಾಗಿದೆ.2. ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲಕ ತಟ್ಲಹಳ್ಳಿ ಮುನಿರೆಡ್ಡಿ, ಚಾಲಕ ಮತ್ತು ನಿರ್ವಾಹಕರಾದ ಮನ್ಸೂರ್ ಮತ್ತು ಬಹದ್ದೂರ್ ಸಾಬ್ ಬಂಧನ. 3. ಗೌರಿಬಿದನೂರಿನಿಂದ ಚಿಕ್ಕಬಳ್ಳಾಪುರ ಕಡೆಗೆ ಮಂಚೇನಹಳ್ಳಿ ಮಾರ್ಗವಾಗಿ ತೆರಳುತ್ತಿದ್ದ ಬಸ್ಸನ್ನು ಹಿರೇಬಿದನೂರು ಬಳಿ ನಿಲ್ಲಿಸಿ ಚಾಲಕ ಮತ್ತು ನಿರ್ವಾಹಕರೊಂದಿಗೆ ಗಲಾಟೆ ಮಾಡಲಾಗಿದ್ದು ಈ ಹಿನ್ನೆಲೆಯಲ್ಲಿ ನಾಗಮಣಿ, ರೇಷ್ಮಾ, ನಿರ್ವಾಹಕ ಚಂದ್ರಪ್ಪ ವಶಕ್ಕೆ. 4.ಚಿಕ್ಕಬಳ್ಳಾಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗೆ ಬೆದರಿಕೆಯೊನ್ನೊಡ್ಡಿದ ಪತ್ತೂರು ಸುನೀಲ್ ಕುಮಾರ್, ಗಂಗಾಧರ, ಶರವಣ ವಿರುದ್ಧ ಪ್ರಕರಣ ದಾಖಲು. 5.ಬಾಗೇಪಲ್ಲಿ ಬಸ್ ನಿಲ್ದಾಣದಲ್ಲಿ ನಿರ್ವಾಹಕಿ ಮಂಜುಳಾ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಸಾರಿಗೆ ಸಿಬ್ಬಂದಿ ಸಂಬಂಧಿಕರಾದ ಜಯಶ್ರೀ, ವಿಷ್ಣು, ಮಂಜುಳಾ, ಪ್ರೀತಿ ವಿರುದ್ಧ ಪ್ರಕರಣ ದಾಖಲು.
ಪ್ರತಿದಿನ 60 ಲಕ್ಷ ರೂ., ನಷ್ಟ : ಚಿಕ್ಕಬಳ್ಳಾಪುರ ವಿಭಾಗೀಯ ಕೇಂದ್ರ ವ್ಯಾಪ್ತಿಯಲ್ಲಿನ ದೊಡ್ಡಬಳ್ಳಾಪುರ, ಗೌರಿಬಿದನೂರು, ಬಾಗೇಪಲ್ಲಿ, ಚಿಂತಾಮಣಿ ಮತ್ತು ಚಿಕ್ಕಬಳ್ಳಾಪುರ ಘಟಕಗಳಲ್ಲಿ ಸಾರಿಗೆ ಸಂಸ್ಥೆ ಬಸ್‌ಗಳ ನಿಲುಗಡೆಯಿಂದ ಪ್ರತಿನಿತ್ಯ 50 ರಿಂದ 60 ಲಕ್ಷ ರೂ., ನಷ್ಟ ಉಂಟಾಗಿದೆ. ಈ ಲೆಕ್ಕದಲ್ಲಿ ಏ.7ರಿಂದ ಇಲ್ಲಿಯವರೆಗೂ ಸುಮಾರು 5 ಕೋಟಿ ರೂ.ಗೂ ಹೆಚ್ಚು ಆದಾಯ ನಷ್ಟವಾಗಿದೆ ಎನ್ನಲಾಗಿದೆ.
ಸಾರಿಗೆ ಸಿಬ್ಬಂದಿ ಮುಷ್ಕರದ ಹಿನ್ನೆಲೆಯಲ್ಲಿ ಪರ್ಯಾಯ ವ್ಯವಸ್ಥೆ ಕೈಗೊಳ್ಳಲಾಗಿದೆ. ಕೆಲ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಕೆಲ ಮಾರ್ಗಗಳಲ್ಲಿ ಬಸ್‌ಗಳು ಸಂಚರಿಸುತ್ತಿವೆ. ಆದರೂ ಬಹುತೇಕ ಬಸ್‌ಗಳ ನಿಲುಗಡೆಯಿಂದ ನಷ್ಟ ಉಂಟಾಗುತ್ತಿದೆ. ಬಸವರಾಜ್, ವಿಭಾಗೀಯ ನಿಯಂತ್ರಣಾಧಿಕಾರಿ ಮುಷ್ಕರದ ನಡುವೆ ಸಂಚರಿಸುತ್ತಿರುವ ಸಾರಿಗೆ ಬಸ್‌ಗಳ ಜಖಂ, ಸಿಬ್ಬಂದಿಗೆ ಬೆದರಿಕೆ ಸೇರಿ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕರ್ತವ್ಯಕ್ಕೆ ಅಡ್ಡಿಪಡಿಸುವವರ ವಿರುದ್ಧ ಪ್ರಕರಣ ದಾಖಲಿಸಿ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತಿದೆ. ಜಿ.ಕೆ.ಮಿಥುನ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿಲ್ಲ. ಆದರೂ ಜನರಿಗೆ ತೊಂದರೆಯಾಗದಿರಲು ಸರ್ಕಾರದ ಮನವಿ ಮೇರೆಗೆ ಬಸ್‌ಗಳನ್ನು ಓಡಿಸಲಾಗುತ್ತಿದೆ. ರಮೇಶ್, ಖಾಸಗಿ ಬಸ್ ನಿರ್ವಾಹಕ