ಸಾರಿಗೆ ನಿಗಮ ವಿದ್ಯಾರ್ಥಿಸ್ನೇಹಿಯಾಗಲಿ

2
Published on

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಸೂಚನೆ

ತುಮಕೂರು: ಗ್ರಾಮೀಣ ಮಕ್ಕಳು ಶಿಕ್ಷಣ ಪಡೆದುಕೊಳ್ಳಲು ಸಾರಿಗೆ ವ್ಯವಸ್ಥೆ ಬಹುಮುಖ್ಯ ಪಾತ್ರವಹಿಸುತ್ತದೆ. ಆದರೆ, ಸರ್ಕಾರಿ ಮಕ್ಕಳಿಗೆ ಸಾರಿಗೆ ವ್ಯವಸ್ಥೆ ಮಾಡಿಕೊಡುವಲ್ಲಿ ಉದಾಸೀನ ಮಾಡುತ್ತಿರುವ ಕಾರಣದಿಂದ ಸಮಸ್ಯೆಗಳು ಜಾಸ್ತಿಯಾಗಿವೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ಕೆ.ಟಿ.ತಿಪ್ಪೇಸ್ವಾಮಿ ಬೇಸರಿಸಿದರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ತುಮಕೂರು ವಿಭಾಗದ ಅಧಿಕಾರಿಗಳೊಂದಿಗೆ ಮಂಗಳವಾರ ಸಭೆ ನಡೆಸಿದ ಅವರು, ಸಾರಿಗೆ ನಿಗಮವು ವಿದ್ಯಾರ್ಥಿಸ್ನೇಹಿಯಾಗಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

ಆಯಾ ವಿಭಾಗದ ವ್ಯಾಪ್ತಿಯಲ್ಲಿ ಬರುವ ಶಾಲೆ, ಕಾಲೇಜುಗಳ ಪ್ರಾಂಶುಪಾಲರನ್ನು ಸಂಪರ್ಕಿಸಿ ಸಮಯವನ್ನು ತಿಳಿದುಕೊಂಡು ಆ ಸಮಯಕ್ಕೆ ಬಸ್​ಗಳನ್ನು ಸಂಚರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳಿಂದ ಯಾವುದೇ ಸಾರಿಗೆ ಸಂಬಂಧಿಸಿದ ವಿಷಯಕ್ಕೆ ಮನವಿಗಳು ಬಂದರೆ ತಡಮಾಡದೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ವಿದ್ಯಾರ್ಥಿಗಳು ಹೆಚ್ಚಿಗೆ ಸೇರುವ ಜಂಕ್ಷನ್​ಗಳಲ್ಲಿ ಸಾರಿಗೆ ಸೇವೆಗಳ ಮೇಲ್ವಿಚಾರಣೆಗೆ ಸಂಚಾರ ನಿಯಂತ್ರಕರು ಅಥವಾ ಮೇಲ್ವಿಚಾರಕರನ್ನು ತಪ್ಪದೇ ನಿಯೋಜಿಸಿ ಸುಗಮ ಕಾರ್ಯಚಾರಣೆಗೆ ನಿಗಾ ವಹಿಸಬೇಕು. ವಿದ್ಯಾರ್ಥಿಗಳು ಬಸ್ಸಿನಲ್ಲಿ ಪ್ರಾಯಾಣಿಸಲು ಅನುವಾಗಲು ನಿಗದಿತ ಬಸ್​ ನಿಲ್ದಾಣಗಳಲ್ಲಿ ನಿಲುಗಡೆ ನೀಡಿ ಅವರನ್ನು ಹತ್ತಿಸಿ ಇಳಿಸಿಕೊಂಡು ಮುಂದೆ ಹೋಗುವುದರ ಜತೆಗೆ ವಿದ್ಯಾರ್ಥಿಗಳ ಜತೆಗೆ ಸೌಜನ್ಯದಿಂದ ವರ್ತಿಸಲು ಸಿಬ್ಬಂದಿಗೆ ತಿಳಿಹೇಳಬೇಕು ಎಂದರು. ಬಾಲಾ ನ್ಯಾಯ ಕಾಯ್ದೆ ಮತು ಪೋಕ್ಸೋ ಕಾಯ್ದೆ ಬಗ್ಗೆ ತರಬೇತಿ ನೀಡಬೇಕು. ಅಲ್ಲದೆ ಅತಿ ಹೆಚ್ಚಿನ ವಿದ್ಯಾರ್ಥಿಗಳು ನಿಂತು ಪ್ರಯಾಣಿಸುವ ಸರತಿಗಳ ಬಗ್ಗೆ ವಿಭಾಗ ಮಟ್ಟದಲ್ಲಿ ಸಮೀಕ್ಷೆ ನಡೆಸಿ ಹೆಚ್ಚುವರಿ ಸರತಿಗಳನ್ನು ಅಳವಡಿಸುವ ಅವಶ್ಯಕತೆ ಬಗ್ಗೆ ಪರಿಶೀಲಿಸಿ ಕ್ರಮವಹಿಸಬೇಕು ಎಂದರು.

ಪ್ರತಿ ಬಸ್​ ನಿಲ್ದಾಣದಲ್ಲಿ ಹಾಗೂ ಬಸ್​ಗಳಲ್ಲಿ ಮಕ್ಕಳ ಸಹಾಯವಾಣಿ ಕಡ್ಡಾಯವಾಗಿ ಪ್ರದರ್ಶನ ಮಾಡಬೇಕು. ಅಗತ್ಯವಿದ್ದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಕಾರ ಪಡೆದು ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಕ್ಕಳ ಸ್ನೇಹಿಯಾದ ಸಾರಿಗೆ ಸೇವೆ ನೀಡಬೇಕು ಎಂದರು.ಮಕ್ಕಳ ಸಹಾಯವಾಣಿಗೆ ಬಂದ ಸಾರಿಗೆ ಸಂಬಂಧಿಸಿದ ದೂರುಗಳು, ಆಯೋಗದಲ್ಲಿ ದಾಖಲಾಗಿರುವ ದೂರುಗಳು ಮತ್ತು ಮಕ್ಕಳೊಂದಿಗೆ ಸಂವಾದ ನಡೆಸಿದ ಸಂದರ್ಭದಲ್ಲಿ ಮಕ್ಕಳಿಂದ ಸ್ವೀಕರಿಸಿದ ಅಹವಾಲುಗಳ ಬಗ್ಗೆ ಚರ್ಚಿಸಿ ಸದರಿ ಕೋರಿಕೆಗಳನ್ನು ಆದ್ಯತೆಯ ಮೇರೆಗೆ ಪರಿಹರಿಸಿ ಆಯೋಗಕ್ಕೆ ವರದಿ ನೀಡಲು ಸೂಚಿಸಿದರು. ಸಭೆಯ ನಂತರ ತುಮಕೂರು ನಗರ ಬಸ್​ ನಿಲ್ದಾಣಕ್ಕೆ ಭೇಟಿನೀಡಿ ಮಕ್ಕಳ ಸಹಾಯವಾಣಿ ಪ್ರದರ್ಶನ, ಮಕ್ಕಳಿಗೆ ಹಾಲುಣಿಸುವ ಕೇಂದ್ರ ಸೇರಿದಂತೆ ವಿವಿಧೆಡೆ ಪರಿಶೀಲನೆ ನಡೆಸಿದರು. ಸಭೆಯಲ್ಲಿ ತುಮಕೂರು ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್​, ತುಮಕೂರು ವಿಭಾಗದ ವಿವಿಧ ಡಿಪೋಗಳ ನಿರ್ವಾಹಕರು, ಕಾನೂನು ಅಧಿಕಾರಿಗಳು, ಮಕ್ಕಳ ಸಹಾಯವಾಣಿ ಜಿಲ್ಲಾ ಸಂಯೋಜಕಿ ಅನುಷಾ, ಮಕ್ಕಳ ರಕ್ಷಣಾಧಿಕಾರಿ ಶಿವಣ್ಣ ಇದ್ದರು.

ಸ್ವಯಂ ಪ್ರೇರಿತ ದೂರು ದಾಖಲಿಸಿ : ವಿದ್ಯುತ್​ ಅವಘಡಗಳಿಂದ ತುಮಕೂರು ಜಿಲ್ಲೆಯಲ್ಲಿ ಕಳೆದ 3 ವರ್ಷದಲ್ಲಿ 6 ಮಕ್ಕಳು ಸಾವನ್ನಪ್ಪಿದ್ದು, 4 ಮಕ್ಕಳು ಅಪಘಾತಕ್ಕೆ ಒಳಗಾಗಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಆಯೋಗ, ಕೆಲವು ಪ್ರಕರಣಗಳಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿದೆ ಎಂದು ಡಾ.ಕೆ.ಟಿ.ತಿಪ್ಪೇಸ್ವಾಮಿ ಕಳವಳ ವ್ಯಕ್ತಪಡಿಸಿದರು.

ಮಕ್ಕಳ ಸುರಕ್ಷತೆಗೆ ತುರ್ತಾಗಿ ಸೂಕ್ತ ಕ್ರಮಕೈಗೊಳ್ಳಲು ಸೂಚಿಸಿತ್ತು. ಶಾಲೆ, ಅಂಗನವಾಡಿ ಹಾಗೂ ವಸತಿ ನಿಲಯಗಳ ಆವರಣಗಳಿಂದ ವಿದ್ಯುತ್​ ತಂತಿ, ಟ್ರಾನ್ಸ್​ ಪಾರ್ಮರ್​ಗಳನ್ನು ತೆರವುಗೊಳಿಸಲು ಮತ್ತು ಸ್ಥಳಾಂತರಿಸಲು ಬೆಸ್ಕಾಂ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು. ಈ ಸಂಬಂಧ ಕೈಗೊಂಡ ಕ್ರಮಗಳ ಬಗ್ಗೆ ತುಮಕೂರಿನ ಅಧೀಕ್ಷಕ ಇಂಜಿನಿಯರ್​ ಕಚೇರಿಯಲ್ಲಿ ಬೆಸ್ಕಾಂ ಮತ್ತು ಕೆಪಿಟಿಸಿಎಲ್​ ಅಧಿಕಾರಿಗಳ ಜತೆಗೆ ನಡೆಸಿದ ಸಭೆಯಲ್ಲಿ ಮಾತನಾಡಿದರು.

ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳು ಜಿಲ್ಲೆಯ 1183 ಶಾಲೆ, ಅಂಗನವಾಡಿ ಹಾಗೂ ವಸತಿ ನಿಲಯಗಳ ಆವರಣಗಳಿಂದ ವಿದ್ಯುತ್​ ತಂತಿ, ಟ್ರಾನ್ಸ್​ ಪಾರ್ಮರ್​ ತೆರವುಗೊಳಿಸಿದ ಬಗ್ಗೆ ವರದಿ ನೀಡಿದರು. ಸಾವನ್ನಪ್ಪಿದ 6 ಮಕ್ಕಳ ಕುಟುಂಬಕ್ಕೆ 29 ಲಕ್ಷ ರೂ. ಪರಿಹಾರ ವಿತರಣೆ ಮಾಡಿರುವ ಮಾಹಿತಿ ನೀಡಿದರು. ಅಪಘಾತಕ್ಕೆ ಒಳಗಾಗಿ ಪರಿಹಾರಕ್ಕೆ ಅರ್ಹವಾದ 4 ಪ್ರಕರಣಗಳಲ್ಲಿ ಇನ್ನೂ ಪರಿಹಾರ ವಿತರಣೆಯ ವಿಳಂಬಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಕ್ರಮಕೈಗೊಳ್ಳಲು ಸೂಚಿಸಿದರು. ಸಭೆಯಲ್ಲಿ ಬೆಸ್ಕಾಂ ತುಮಕೂರು ವೃತ್ತದ ಅಧೀಕ್ಷಕ ಇಂಜಿನಿಯರ್​ ನರಸಿಂಹಮೂರ್ತಿ, ಕೆಪಿಟಿಸಿಎಲ್​ ಅಧೀಕ್ಷಕ ಇಂಜಿನಿಯರ್​ ಕಾಂತಲಕ್ಷಿ$್ಮ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದಿನೇಶ್​, ಕಾರ್ಯನಿರ್ವಹಕ ಇಂಜಿನಿಯರ್​ ಪ್ರಶಾಂತ್​, ಸಂಧ್ಯಾ ಮತ್ತಿತರರು ಇದ್ದರು.

ಜಿಲ್ಲೆಯಲ್ಲಿ 71 ಕೋಟಿ ರೂ. ವೆಚ್ಚದಲ್ಲಿ 1183 ಶಾಲೆ, ಅಂಗನವಾಡಿ ಹಾಗೂ ವಸತಿ ನಿಲಯಗಳ ಆವರಣಗಳಿಂದ ವಿದ್ಯುತ್​ ತಂತಿ, ಟ್ರಾನ್ಸ್​ ಪಾರ್ಮರ್​ ತೆರವುಗೊಳಿಸುವ ಮತ್ತು ಸ್ಥಳಾಂತರ ಪ್ರಕ್ರಿಯೆ ನಿರೀಕ್ಷೆ ಮೀರಿ ಚುರುಕಾಗಿ ನಡೆದಿದ್ದು, ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಅದಕ್ಕಾಗಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಜಿಲ್ಲೆಯ ಬೆಸ್ಕಾಂ ಹಾಗೂ ಕೆಪಿಟಿಸಿಎಲ್​ ಅಧಿಕಾರಿಗಳನ್ನು ಅಭಿನಂದಿಸುತ್ತದೆ.| ಡಾ.ಕೆ.ಟಿ.ತಿಪ್ಪೇಸ್ವಾಮಿ

ಸದಸ್ಯ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net