

ಶಿಕಾರಿಪುರ: ಸಾಹಿತಿ ಡಾ. ಎಸ್.ಎಲ್.ಭೈರಪ್ಪ ಅವರ ನಿಧನದ ಹಿನ್ನೆಲೆ ಕನ್ನಡ ಸಾಹಿತ್ಯ ಪರಿಷತ್‌ನಿಂದ ಪಟ್ಟಣದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಲಾಯಿತು.
ಪತ್ರಕರ್ತರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಎಸ್.ಹುಚ್ರಾಯಪ್ಪ ಮಾತನಾಡಿ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಎಸ್.ಎಲ್.ಭೈರಪ್ಪ ತಮ್ಮದೇ ಆದ ಓದುಗ ವಲಯ ಸೃಷ್ಟಿಸಿಕೊಂಡಿದ್ದರು. ಅವರ ಸಾಹಿತ್ಯ ಬಲಪಂಥೀಯ ಸಿದ್ಧಾಂತಕ್ಕೆ ಪೂರಕವಾಗಿದ್ದವು ಎಂಬ ಆರೋಪ, ಟೀಕೆಗಳು ಕೇಳಿಬಂದಿದ್ದವು. ಆದರೆ ಅವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಮಾತ್ರ ನಾವು ಸ್ಮರಿಸಬೇಕು ಎಂದು ತಿಳಿಸಿದರು.
ಡಾ. ಎಸ್.ಎಲ್.ಭೈರಪ್ಪ ಅವರು ಕನ್ನಡ ಸಾಹಿತ್ಯ ಸಾರಸತ್ವ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಭೈರಪ್ಪ ಅವರ ಕೃತಿಗಳು ಗಟ್ಟಿಯಾದ ಚಿಂತನೆ ಹೊಂದಿವೆ. ಅವರ ನಿಧನ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದರು. ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ರಘು, ಜಾನಪದ ಪರಿಷತ್ ಅಧ್ಯಕ್ಷ ಬಿ.ಪಾಪಯ್ಯ, ವೇಣುಗೋಪಾಲ್, ಬಿ.ಎಲ್.ರಾಜು, ಉಪನ್ಯಾಸಕರಾದ ಕೆ.ಎಚ್.ಪುಟ್ಟಪ್ಪ, ಬಂಗಾರಪ್ಪ, ವಸಂತನಾಯ್ಕ್, ಕಸಾಪ ಪದಾಕಾರಿಗಳಾದ ಪಾರಿವಾಳ ಶಿವಲಿಂಗಪ್ಪ, ಮೋಹನ್ ರಾಜ್, ಪ್ರಕಾಶ್, ಜಿಯಾವುಲ್ಲ, ಸದಸ್ಯ ದೊಡ್ಡಪ್ಪ ಇತರರಿದ್ದರು.