

ಹಾಸನ: ಸಾಮ್ರಾಟ ಅಶೋಕನ ಜೀವನ ಚರಿತ್ರೆಯನ್ನು ಶಾಲಾ ಮಟ್ಟದ ಪಠ್ಯಪುಸ್ತಕದಲ್ಲಿ ಅಳವಡಿಸಿ, ಅವರ ಜಯಂತಿ ಆಚರಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಕಾನಿಷ್ಕ ಬುದ್ಧ ವಿಹಾರದ ಅಧ್ಯಕ್ಷ ಸ್ಟೀವನ್ ಪ್ರಕಾಶ್ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ವಿವಿಧ ಸರ್ಕಾರಗಳು ಕೇವಲ ಮತ ಗಳಿಕೆ ಉದ್ದೇಶದಿಂದ ಒಂದೊಂದು ಸಮುದಾಯಗಳ ಮಹನೀಯರ ಜಯಂತಿ ಆಚರಣೆ ಮಾಡುತ್ತಿವೆ. ಅದರ ಜತೆಗೆ ದೇಶಕ್ಕೆ ಬಹುದೊಡ್ಡ ಕೊಡುಗೆ ನೀಡಿರುವ ಸಾಮ್ರಾಟ ಅಶೋಕ ಜಯಂತಿಯನ್ನು ಸರ್ಕಾರದ ವತಿಯಿಂದ ಆಯೋಜನೆ ಮಾಡಿ, ಅವರ ಕೊಡುಗೆಗೆ ಒಂದು ಅರ್ಥ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರಗಳು ಮುಂದಾಗಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಅಶೋಕ ಜಯಂತಿ ಜತೆಗೆ ಸಾಮ್ರಾಟ ಅಶೋಕ ಜೀವನ ಚರಿತ್ರೆಯನ್ನು ಶಾಲಾ ಪಠ್ಯದಲ್ಲಿ ಅಳವಡಿಸಿದರೆ ಮುಂದಿನ ಪೀಳಿಗೆಯ ಮಕ್ಕಳಿಗೆ ಸಾಮ್ರಾಟ ಅಶೋಕ ಚರಿತ್ರೆ ಮಕ್ಕಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಸವರಾಜು, ಹರೇಂದ್ರ, ತೋತೇಶ್, ಕಡಲೂರು ಮೋಹನ್, ನಗಸೆನ್ ಹಾಜರಿದ್ದರು.