ಸಾಮೆ ಬೆಳೆಯತ್ತ ರೈತರ ಒಲವು

16 11
Published on

ಬಂಗಾರಪೇಟೆಯಲ್ಲಿ ಪಾರಂಪರಿಕ ಕೃಷಿಗೆ ಮರಳಿದ ಕೃಷಿಕರು

ಜಿ.ನಾಗರಾಜ್​ ಬೂದಿಕೋಟೆ

ಬಂಗಾರಪೇಟೆ ತಾಲೂಕಿನ ರೈತರು ಸಿರಿ ಧಾನ್ಯ ಬೆಳೆಯಲು ಹೆಚ್ಚಿನ ಆಸಕ್ತಿ ತೋರಿದ್ದು, ಸುಮಾರು 62 ಹೆಕ್ಟೇರ್​ ಪ್ರದೇಶದಲ್ಲಿ ಪಾರಂಪರಿಕ ಬೆಳೆಯಾದ ಸಾಮೆ ಬೆಳೆದು ಉತ್ತಮ ಸಲಿನ ನಿರೀಕ್ಷೆಯಲ್ಲಿದ್ದಾರೆ.

ಸಮರ್ಪಕವಾಗಿ ಮಳೆಯಾಗದ ಕಾರಣ ನೆಲಗಡಲೆ, ರಾಗಿ ಸೇರಿ ಇತರ ಬೆಳೆಗಳು ಕೈಕೊಟ್ಟಿದ್ದು, ಈಗ ಕಡಿಮೆ ಮಳೆಯಲ್ಲಿಯೂ ಸಿರಿ ಧಾನ್ಯ ಬೆಳೆಯಬಹುದು ಎಂದು ಅರಿತ ರೈತರು ಸಾಮೆ ಬೆಳೆಯಲು ಹೆಚ್ಚಿನ ಒಲವು ತೋರಿದ್ದಾರೆ.

ಸಾಮೆ ಪ್ರತಿ ಎಕರೆಗೆ 3 ರಿಂದ 4 ಕ್ವಿಂಟಾಲ್​ ಇಳುವರಿ ಕಾಣಬಹುದು. ಬೆಳೆಗೆ ಹೆಚ್ಚಿನ ಗೊಬ್ಬರದ ಬಳಕೆ ಅವಶ್ಯಕತೆ ಇಲ್ಲ. ರೋಗಬಾಧೆಯಿಲ್ಲದೆ ಹುಲುಸಾಗಿ ಬೆಳೆಯುವುದರಿಂದ ಜಾನುವಾರುಗಳಿಗೂ ಮೇವು ಸಿಗುವ ಜತೆಗೆ ಆರ್ಥಿಕವಾಗಿ ಚೇತರಿಸಿಕೊಳ್ಳಲು ಕೃಷಿಕರಗಿ ವರದಾನವಾಗಿದೆ. ಈ ಬಾರಿ ತಾಲೂಕಿನಲ್ಲಿ ಮುಂಗಾರು ಮತ್ತು ಹಿಂಗಾರು ಕೈಕೊಟ್ಟರೂ ಅಲ್ಪಸ್ವಲ್ಪ ಪ್ರಮಾಣದಲ್ಲಿ ಬಿದ್ದ ಮಳೆಯಿಂದ ಬೆಳೆಯು ಸಮೃದ್ಧವಾಗಿ ಬೆಳೆದಿದೆ. ಇತ್ತೀಚೆಗೆ ನಗರ ಸೇರಿ ಗ್ರಾಮೀಣ ಭಾಗದಲ್ಲಿಯೂ ಸಿರಿಧಾನ್ಯ ಬೇಡಿಕೆ ಹೆಚ್ಚಿರುವ ಕಾರಣ ಮಾರುಕಟ್ಟೆಯ ತಲೆನೋವು ಇಲ್ಲ. ಆದ್ದರಿಂದ ವರ್ಷದಿಂದ ವರ್ಷಕ್ಕೆ ಸಿರಿಧಾನ್ಯಗಳತ್ತ ರೈತರು ಮುಖ ಮಾಡಿದ್ದಾರೆ.

ಆಹಾರ ರೂಪದ ಔಷಧ: ಸಾಮೆ ಅಕ್ಕಿ ಗೋಧಿಗಿಂತ ಐದು ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಪ್ರೋಟಿನ್​, ವಿಟಮಿನ್​ ಹಾಗೂ ಖನಿಜಾಂಶ ಹೊಂದಿದೆ. ಇದರ ಸೇವನೆಯಿಂದ ಮಾನವನ ಹಲವು ರೋಗಗಳಿಗೆ ಆಹಾರ ರೂಪದ ಔಷಧವಾಗಿದೆ. ಇದರಿಂದಾಗಿ ಸಾಮೆಗೆ ಬೇಡಿಕೆ ಮತ್ತು ಬೆಲೆಯೂ ಅಧಿಕವಾಗಿದೆ. ಟೊಮ್ಯಾಟೊ, ಕೋಸು ಬೆಳೆದು ಕೈ ಸುಟ್ಟುಕೊಳ್ಳುವ ಬದಲಾಗಿ ಕಡಿಮೆ ಬಂಡವಾಳ ಹಾಕಿ ಸಾಮೆಯಿಂದ ಅಧಿಕ ಲಾಭ ಪಡೆಯುವತ್ತ ರೈತರು ಚಿತ್ತಹರಿಸಿದ್ದಾರೆ.

ತಾಲೂಕಿನಲ್ಲಿ ಕೃಷಿ ಇಲಾಖೆಯ ಸಹಾಯಧನದಿಂದ ಇ&ಸಾಯು ುಡ್ಸ್​ ಎಂಬ ಹೆಸರಿನ ಸಿರಿಧಾನ್ಯ ಮೌಲ್ಯವರ್ಧನಾ ಸಂಸ್ಕರಣಾ ಘಟಕವನ್ನು ಈಗಾಗಲೇ ಸ್ಥಾಪಿಸಲಾಗಿದೆ. ಇದರ ಮೂಲಕ ಸಿರಿಧಾನ್ಯಗಳನ್ನು ಸಂಸ್ಕರಣೆ ಮಾಡಿ ವಿವಿಧ ರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತಿದೆ. ತಾಲೂಕಿನಲ್ಲಿ ಸಿರಿಧಾನ್ಯ ಬೆಳೆಯುವ ರೈತರು ಸಹ ದಲ್ಲಾಳಿಗಳ ಹಾವಳಿ ಇಲ್ಲದೆ ಸಂಸ್ಕರಣಾ ಘಟಕಕ್ಕೆ ಮಾರಾಟ ಮಾಡಿ ಉತ್ತಮ ಆದಾಯ ಪಡೆಯಬಹುದಾಗಿದೆ. ಜತೆಗೆ ಸ್ಥಳಿಯ ಮಾರುಕಟ್ಟೆ ಸೌಲಭ್ಯವೂ ಇದೆ.

| ವಿಜಯಕುಮಾರ್​ ಕೃಷಿ ಅಧಿಕಾರಿ

ಪೂರ್ವಿಕರು ಈ ಹಿಂದೆ ಹೆಚ್ಚಿನ ಪ್ರಮಾಣದಲ್ಲಿ ಸಾಮೆ ಬೆಳೆಯುತ್ತಿದ್ದರು. ಬದಲಾದ ಆಹಾರ ಪದ್ಧತಿ ಮತ್ತು ವಿವಿಧ ಬೆಳೆಗಳ ಹೊಸ ಆವಿಷ್ಕಾರದಿಂದ ಸಾಮೆ ಬೆಳೆಯು ಕಾಲ ಕ್ರಮೇಣ ಮರೆಯಾಗಿತ್ತು. ಇತ್ತೀಚಿನ ದಿನಗಳಲ್ಲಿ ಸಿರಿಧಾನ್ಯಗಳು ರಕ್ತದೊತ್ತಡ ಮತ್ತು ಮಧುಮೇಹಕ್ಕೆ ರಾಮಬಾಣ ಎಂದು ಅರಿತ ಜನ ಮರಳಿ ಸಿರಿಧಾನ್ಯಗಳನ್ನು ಸೇವಿಸಲು ಮುಂದಾಗಿದ್ದಾರೆ. ಆದ್ದರಿಂದ ಈಗ ಸಾಮೆಗೆ ಬೇಡಿಕೆ ಹೆಚ್ವಿದ್ದು, ಕಡಿಮೆ ಬಂಡವಾಳದಲ್ಲಿ ಸಾಮೆ ಬೆಳೆಯಲಾಗಿದ್ದು, ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದೇವೆ.

| ಮಣಿ ರೈತ ಕಾರಮಾನಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net