

ಬೀದರ್: ಕೇವಲ ಕಾಯಕ ಮಾಡಿದರೆ ಸಾಲದು. ಕಾಯಕದಿಂದ ಗಳಿಸಿದ ಹಣ ದಾಸೋಹ ಮೂಲಕ ಸಮಾಜದ ಉದ್ಧಾರಕ್ಕೆ ಬಳಸಬೇಕು. ಇದರಿಂದ ಬದುಕು ಸಾರ್ಥಕಗೊಳಿಸಿಕೊಳ್ಳಲು ಸಾಧ್ಯ ಎಂದು ಪೂಜ್ಯ ಚನ್ನಬಸವಾನಂದ ಸ್ವಾಮೀಜಿ ಹೇಳಿದರು.
ಶ್ರೀ ಸಿದ್ದೇಶ್ವರ ಟ್ರಸ್ಟ್ ಅಡಿಯ ಅಪ್ನಾ ಘರ್ ಸಂಸ್ಥೆಯಿಂದ ಜ.7ರಂದು ನಗರದಲ್ಲಿ ಆಯೋಜಿಸಿರುವ ಉಚಿತ ಸಾಮೂಹಿಕ ವಿವಾಹ ಹಿನ್ನೆಲೆಯಲ್ಲಿ ಸೋಮವಾರ ಇಲ್ಲಿ ಭಿತ್ತಪತ್ರ ಬಿಡುಗಡೆಗೊಳಿಸಿ ಮಾತನಾಡಿ, ಶಶಿಕಾಂತ ಮೋದಿ ದಂಪತಿ ತಮ್ಮ ಪುತ್ರಿ ಮದುವೆ ನಿಮಿತ್ತ ನಡೆಸುತ್ತಿರುವ 108 ಜೋಡಿಗಳ ಉಚಿತ ಸಾಮೂಹಿಕ ವಿವಾಹಕ್ಕೆ ಪ್ರತಿಯೊಬ್ಬರೂ ಬೆಂಬಲಿಸಿ ಇದರಲ್ಲಿ ಪಾಲ್ಗೊಳ್ಳಬೇಕು. ಹೆಚ್ಚಿನ ಜನರು ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.
ಕೇವಲ ತಮ್ಮ ಮಗಳ ಮದುವೆ ಮಾಡಿದರೆ ಸಾಲದು. ಕರೊನಾ ಹಾಗೂ ಲಾಕ್ ಡೌನ್ ಪ್ರಸ್ತುತ ಸನ್ನಿವೇಶದಲ್ಲಿ ಬಡವರ ಕಲ್ಯಾಣ ಮಹೋತ್ಸವ ಮಾಡಿಸಬೇಕು ಎಂಬುದು ಅವರ ಧ್ಯೇಯವಾಗಿದೆ. ಇದು ಮಾದರಿ ಕೆಲಸವಾಗಿದೆ ಎಂದರು.
ಮಾತೆ ಸತ್ಯಾದೇವಿ ನೇತೃತ್ವ, ಶಿವಶರಣಪ್ಪ ಪಾಟೀಲ್ ಹಾರೂರಗೇರಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಸಿದ್ದೇಶ್ವರ ಟ್ರಸ್ಟ್ ಅಧ್ಯಕ್ಷ ಶಶಿಕಾಂತ ಮೋದಿ, ಕಾರ್ಯದರ್ಶಿ ನೀಲಾಕ್ಷಿ ಮೋದಿ, ಮಹಾಲಿಂಗ ಸ್ವಾಮಿ ಚಟ್ನಳ್ಳಿ ಇದ್ದರು. ಮಹಾರುದ್ರ ಡಾಕುಳಗಿ ನಿರೂಪಣೆ ಮಾಡಿದರು. ಕಲ್ಪನಾ ಸಾವಲೆ ವಂದಿಸಿದರು.