ಸಾಮೂಹಿಕ ಬಲ ಹೆಚ್ಚಳದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ

12CBP4 (1)
Published on

ಚಿಕ್ಕಬಳ್ಳಾಪುರ: ಸಾಮೂಹಿಕ ಬಲ ಹೆಚ್ಚಳದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಆದಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಆದಿಚುಂಚನಗಿರಿ ಮಠ ಶನಿವಾರ ಆಯೋಜಿಸಿದ್ದ ಸತ್ಸಂಗ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಆಧ್ಯಾತ್ಮಿಕ, ಸಾಂಸ್ಕೃತಿಕ, ಕಲಾತ್ಮಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಇದು ಜನರಲ್ಲಿ ಸಕಾರಾತ್ಮಕ ಮನೋಭಾವನೆ ಮೂಡಲು ಸಹಕಾರಿಯಾಗಲಿದೆ. ಹಿರಿಯರು ಕಿರಿಯರಿಗೆ ಒಳ್ಳೆಯ ಮಾರ್ಗದರ್ಶಕರಾಗಬೇಕು. ನುಡಿದಂತೆ ಒಳ್ಳೆಯ ಹಾದಿಯಲ್ಲಿ ನಡೆದು ಇತರರಿಗೆ ಮಾದರಿಯಾಗಬೇಕು ಎಂದರು.

ಶ್ರೀಗಳು ದೇವರ ಸಂಕೀರ್ತನೆ ಹಾಡಿದರು. ಮಂಟಪದಲ್ಲಿನ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಮಂಗಳನಾಥ ಸ್ವಾಮೀಜಿ, ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಆರ್.ನಾರಾಯಣಸ್ವಾಮಿ, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ನಗರಸಭಾ ಅಧ್ಯಕ್ಷ ಆನಂದ್ ರೆಡ್ಡಿ ಬಾಬು, ತಾಪಂ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಮುಖಂಡರಾದ ಡಾ ಕೆ.ಪಿ.ಶ್ರೀನಿವಾಸಮೂರ್ತಿ, ಅಗಲಗುರ್ಕಿ ಚಲಪತಿ, ಜಿ.ಆರ್.ಶ್ರೀನಿವಾಸ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net