

ಗದಗ: ‘ಏಯ್ ಹುಣಸೀಮರದ, ಓಯ್ ಬಂಡಿವಡ್ಡರ, ಸುಮ್ನೆ ಕುತ್ಕೊ, ಏನ್ ಮಾಡ್ತಿ..., ನೀನೇನು ಮಾಡ್ತಿ..., ಏಯ್ ಪೌರಾಯುಕ್ತರೇ ಸುಮ್ನೆ ಕುತ್ಕೋರಿ, ಯಾಕ್ ಸುಮ್ನೆ ಮಾತಾಡ್ತೀರಿ, ನನಗೂ ಗೊತ್ತು ಏನ್ ಮಾಡಬೇಕೂ ಅಂತ!’
ಗದಗ-ಬೆಟಗೇರಿ ನಗರಸಭೆ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಅಧಿಕಾರಿಗಳನ್ನು ಏಕವಚನದಲ್ಲಿ ಸಂಬೋಧಿಸಿದ ಪರಿ ಇದು.
ಸಭೆಯುದ್ದಕ್ಕೂ ಅಸಂವಿಧಾನಿಕ ಪದ ಬಳಸಿ ಜೋರಾಗಿ ಮಾತನಾಡುವ ಶೈಲಿ ನಿರಾಂತಕವಾಗಿ ಸಾಗಿತು. ಇದಕ್ಕೆ ಅಧ್ಯಕ್ಷೆ ಉಷಾ ದಾಸರ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಹೀಗಾಗಿ, ಸಂತೆಯಲ್ಲಿ ಕೂಗುವಂತೆ ಹೋಗೋ, ಬಾರೋ ಎಂಬ ಪದಗಳು ಸಭೆಯಲ್ಲಿ ಸಲೀಸಾಗಿ ಬಂದು ಹೋದವು.
ಸಭೆಯಲ್ಲಿ ಕುಡಿಯುವ ನೀರಿನ ವಿಷಯ ಕುರಿತು ಚರ್ಚೆ ನಡೆಯಿತು. ನೀರು ಪೂರೈಕೆ ಸಮರ್ಪಕವಾಗಿಲ್ಲ ಎಂದು ಪ್ರತಿಪಕ್ಷದ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ಆರಂಭಿಸಿದರು. ಅಧಿಕಾರಿಗಳ ವಿರುದ್ಧ ಅಸಮಾಧಾನ, ಆಕ್ರೋಶ ವ್ಯಕ್ತಪಡಿಸಿದರು. ಆದರೆ, ಈ ಸಂದರ್ಭದಲ್ಲಿ ಕೆಲ ಆಡಳಿತರೂಢ ಹಾಗೂ ಪ್ರತಿಪಕ್ಷದ ಸದಸ್ಯರು ಅಧಿಕಾರಿಗಳನ್ನು ದಬಾಯಿಸಿದರು. ಹಿರಿಯ ಸದಸ್ಯರ ಅಸಂವಿಧಾನಿಕವಾಗಿ ಪದಗಳನ್ನು ಬಳಸಿದ್ದರಿಂದ ಸದನದ ಗೌರವಕ್ಕೆ ಧಕ್ಕೆಯಾದಂತೆ ಭಾಸವಾಯಿತು. ಪ್ರತಿಸಭೆಯಲ್ಲಿ ಅಧಿಕಾರಿಗಳನ್ನು ಗುರಿಯಾಗಿಟ್ಟುಕೊಂಡು ಏಕವಚನ ಬಳಸಿ ಸದಸ್ಯರು ಮಾತನಾಡುವುದು ಕೆಟ್ಟ ಬೆಳವಣಿಗೆಯಾಗಿದೆ.
ನಗರಸಭೆ ಸದಸ್ಯರೆಂದರೆ ಸವೋಚ್ಚ ಎಂದು ಕೆಲವರು ತಿಳಿದುಕೊಂಡಿದ್ದು, ಮಾತಿನ ಮೇಲೆ ಹಿಡಿತವಿಲ್ಲದೆ ಮಾತನಾಡುತ್ತಾರೆ. ಅಧಿಕಾರಿಗಳು, ಸಿಬ್ಬಂದಿ ತಪ್ಪು ಮಾಡಿದಾಗ, ಕೆಲಸ ಮಾಡದಿದ್ದಾಗ ಕಿವಿ ಹಿಂಡಿ ಕೆಲಸ ಮಾಡಿಸಿಕೊಳ್ಳುವುದು ಸದನದ ಕರ್ತವ್ಯ. ತಾಕೀತು ಮಾಡಿದ ಮೇಲೂ, ಎಚ್ಚರಿಕೆ ಕೊಟ್ಟ ಮೇಲೆಯೂ ಕೆಲಸ ಮಾಡದವರನ್ನು ಅಲ್ಲಿಂದ ವರ್ಗಾಯಿಸಬೇಕು. ಗಂಭೀರ ಆರೋಪಗಳಿದ್ದರೆ ತಪ್ಪಿತಸ್ಥರನ್ನು ಅಮಾನತು ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಲು ಸದನಕ್ಕೆ ಅವಕಾಶವಿದೆ. ಶೋಕಾಸ್ ನೋಟಿಸ್ ನೀಡುವ ಅಧಿಕಾರವೂ ಉಂಟು. ಹೀಗಿದ್ದರೂ ನೌಕರರಿಗೆ ಮೇಲೆ ಮನಬಂದಂತೆ ನಿಂದಿಸುವುದು, ಅವಾಜ್ ಹಾಕುವ ರೀತಿಯಲ್ಲಿ ಮಾತನಾಡುವುದು, ‘ಸುಮ್ನೆ ಕುತ್ಕೋ’, ‘ಬಾಯಿ ಮುಚ್ಚಿಕೊಂಡಿರು’ ಇಂತಹ ಅಸಭ್ಯ ಪದಗಳ ಬಳಕೆ ಸಭೆಯಲ್ಲಿ ಯಥೇಚ್ಚವಾಗಿತ್ತು.
ಕುಡಿಯುವ ನೀರಿನ ವಿಷಯಕ್ಕೆ ಪ್ರತಿಪಕ್ಷದ ಸದಸ್ಯರು ಅರ್ಧ ಗಂಟೆಗೂ ಹೆಚ್ಚು ಕಾಲ ಧರಣಿ ನಡೆಸಿದರು. ಮಾತಿನ ಚಕಮಕಿಯೂ ನಡೆಯಿತು. ಕುಳಿತುಕೊಂಡು ಚರ್ಚೆ ಮಾಡಿ ಸಮಸ್ಯೆ ಬಗೆಹರಿಸೋಣ ಎಂದು ಆಡಳಿತರೂಢ ಸದಸ್ಯರು ಮನವಿ ಮಾಡಿದರೂ ಜಗ್ಗಲಿಲ್ಲ. ಅರ್ಧ ಗಂಟೆ ನಂತರ ಪ್ರತಿಪಕ್ಷದ ಸದಸ್ಯರನ್ನು ಸಮಾಧಾನಪಡಿಸಿದ ಮೇಲೆ ಸಭೆ ಮುಂದುವರಿಯಿತು.
‘ನಿಮ್ಮ ನಾಯಕರು ಕುಡಿಯುವ ನೀರಿನ ಯೋಜನೆಯನ್ನು ಉದ್ಘಾಟಿಸಿ ಸರಿಯಾಗಿ ಕೆಲಸ ಮಾಡದ್ದರಿಂದ ಯೋಜನೆ ಹಳ್ಳ ಹಿಡಿಯಿತು’ ಎಂದು ಆಡಳಿತರೂಢ ಬಿಜೆಪಿ ಸದಸ್ಯರು ಆರೋಪಿಸಿದರು. ಇದಕ್ಕೆ ಪ್ರತಿಪಕ್ಷದ ಸದಸ್ಯರು, ‘ನಮ್ಮ ನಾಯಕರ ಮೇಲೆ ಏಕೆ ಆರೋಪ ಮಾಡುತ್ತೀರಿ’ ಎಂದು ಕೂಗಾಡಿದರು. ‘ನಿಮ್ಮ ನಾಯಕರು ಪ್ರತಿ ವಸ್ತುಗಳ ಮೇಲೆ ಜಿಎಸ್ಟಿ ಹೇರಿ ಬಡವರ ಬದುಕನ್ನು ಹಾಳು ಮಾಡಿದ್ದಾರೆ’ ಎಂದು ಪ್ರತ್ಯಾರೋಪ ಮಾಡಿದ್ದರಿಂದ ಗದ್ದಲ ನಡೆಯಿತು. ಇಂತಹ ಅರ್ಥವಿಲ್ಲದ ಚರ್ಚೆಯಲ್ಲೇ ಸಮಯ ಹಾಳು ಮಾಡಲಾಯಿತು.
ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಯಳವತ್ತಿ, ಚಂದ್ರು ತಡಸದ, ವಿನಾಯಕ ಮಾನ್ವಿ, ಪ್ರತಿಪಕ್ಷದ ನಾಯಕ ಎಲ್.ಡಿ. ಚಂದಾವರಿ, ಲಕ್ಷ್ಮಿ ಸಿದ್ದಮ್ಮನಹಳ್ಳಿ, ಸುರೇಶ ಕಟ್ಟಿಮನಿ, ಚಂದ್ರು ಕರಿಸೋಮನಗೌಡ, ಬರಕತ್ ಅಲಿ ಮುಲ್ಲಾ, ಅನಿಲ ಅಬ್ಬಿಗೇರಿ, ಅನಿತಾ ಗಡ್ಡಿ ಇದ್ದರು.
ನೀರಿನ ಸೋರಿಕೆ ಬಂದ್ ಮಾಡಿ: ಗದಗ-ಬೆಟಗೇರಿ ಅವಳಿನಗರಕ್ಕೆ ನೀರು ಪೂರೈಕೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ನೇತೃತ್ವದಲ್ಲಿ ಜರುಗಿದ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇತ್ಯರ್ಥಕ್ಕೆ ಪರಿಹಾರ ಸೂಚಿಸಿದ್ದಾರೆ. ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಿದ ಗುತ್ತಿಗೆ ಅವಧಿ ಪೂರ್ಣಗೊಂಡಿದ್ದು, ಹೀಗಾಗಿ, ಏಜೆನ್ಸಿಯೊಂದಕ್ಕೆ ಟೆಂಡರ್ ನೀಡಿ ನೀರು ಪೂರೈಕೆ ಸಮಸ್ಯೆಯನ್ನು ಪರಿಹರಿಸಿಕೊಳ್ಳಿ ಎಂದು ನಿರ್ದೇಶನ ನೀಡಿದ್ದಾರೆ ಎಂದು ಪೌರಾಯುಕ್ತ ರಮೇಶ ಸುಣಗಾರ ಸಭೆಗೆ ವಿವರಿಸಿದರು. ಆಗ ಪ್ರತಿಪಕ್ಷದ ನಾಯಕ ಎಲ್.ಡಿ. ಚಂದಾವರಿ ಅವರು, ನೀರು ಪೂರೈಕೆಯಲ್ಲಿ ಆಗುತ್ತಿರುವ ಸೋರಿಕೆ ಬಂದ್ ಮಾಡಬೇಕು, ವಾಲ್ವಮನ್ ಗಳಿಗೆ ಸಂಬಳ ನೀಡಬೇಕು, ಇನ್ನೂ ಅನೇಕ ಪ್ರದೇಶಗಳಿಗೆ ನಲ್ಲಿ ಸಂಪರ್ಕ ನೀಡಬೇಕು ಎಂದು ಸಲಹೆ ನೀಡಿದರು. ಈ ವಿಷಯಗಳು ಗಮನದಲ್ಲಿದ್ದು ಕೆಯುಐಡಿಎಫ್ಸಿ ಮತ್ತು ನಗರಸಭೆ ಜಂಟಿಯಾಗಿ ನೀರು ಪೂರೈಕೆ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಕೆಯುಐಡಿಎಫ್ಸಿ ಎಇಇ ಸುಭಾಸ ಭಜಮ್ಮನವರ ಸಭೆಗೆ ವಿವರಿಸಿದರು.
ಸ್ಮಶಾನಕ್ಕೆ ಭೂಮಿ ನೀಡಲು ನಿರ್ಧಾರ: ನಗರದಲ್ಲಿ ನಗರಸಭೆಗೆ ಸಂಬಂಧಿಸಿದ 7 ಎಕರೆ ಭೂಮಿ ಇದ್ದು, ಇದರಲ್ಲಿ 2 ಎಕರೆ ಲಿಂಗಾಯತ ಬಣಕಾರ ಸಮಾಜ ಹಾಗೂ ಉಳಿದ ಐದು ಎಕರೆ ಭೂಮಿಯನ್ನು ಎಸ್ಸಿಎಸ್ಟಿ ಮತ್ತು ಒಬಿಸಿ ವರ್ಗದ ಸ್ಮಶಾನಕ್ಕೆ ನೀಡಲು ತೀರ್ವನಿಸಲಾಯಿತು. ಎಸ್ಸಿಪಿ, ಟಿಎಸ್ಪಿ ಯೋಜನೆಯಡಿ ವೈದ್ಯಕೀಯ ಸಹಾಯಧನ, ಲ್ಯಾಪ್ಟಾಪ್ ವಿತರಣೆ ಕುರಿತಂತೆ ಆಯ್ಕೆ ಮಾಡಲಾಗಿರುವ ಫಲಾನುಭವಿಗಳ ಪಟ್ಟಿಯನ್ನು ಅವೈಜ್ಞಾನಿಕವಾಗಿ ಆಯ್ಕೆ ಮಾಡಲಾಗಿದೆ ಎಂದು ಸದಸ್ಯರು ಆರೋಪಿಸಿದರು. ಹೀಗಾಗಿ, ಫಲಾನುಭವಿಗಳ ಪಟ್ಟಿಯನ್ನು ರದ್ದು ಪಡಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.