ಸಾಮಾಜಿಕ ಹೋರಾಟಗಾರರ ಬಂಧನಕ್ಕೆ ಆಕ್ರೋಶ

8
Published on

ಮೈಸೂರು: ದೆಹಲಿಯಲ್ಲಿ ಹೋರಾಟನಿರತ ಮಹಿಳಾ ಕುಸ್ತಿ ಪಟುಗಳು ಹಾಗೂ ಸಾಮಾಜಿಕ ಚಳವಳಿ ಪ್ರಮುಖರನ್ನು ಪೊಲೀಸರು ಬಂಧಿಸಿರುವ ಕ್ರಮ ಖಂಡಿಸಿ ನಗರದಲ್ಲಿ ಭಾನುವಾರ ಎಐಡಿಎಸ್‌ಒ ವತಿಯಿಂದ ಪ್ರತಿಭಟನೆ ನಡೆಯಿತು.
ರಾಮಸ್ವಾಮಿ ವೃತ್ತದ ಬಳಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಕ್ರೀಡಾಪಟುಗಳು, ಸಾಮಾಜಿಕ ಚಳವಳಿಗಾರರ ಬಂಧನ ಪ್ರಜಾಪ್ರಭುತ್ವ ವಿರೋಧಿ ಕ್ರಮ ಎಂದು ಖಂಡಿಸಿದರು.
ಲೈಂಗಿಕ ಕಿರುಕುಳದ ಆರೋಪ ಮತ್ತು ಪೋಸ್ಕೊ ಕಾಯ್ದೆಯಡಿ ಅಪರಾಧಿ ಆಗಿರುವ ಸಂಸದನ ರಕ್ಷಣೆಗೆ ಸರ್ಕಾರ ಬದ್ಧವಾಗಿರುವುದು ನಿಜಕ್ಕೂ ಆಘಾತಕಾರಿ. ಹೋರಾಟಕ್ಕೆ ಸಂಬಂಧಪಟ್ಟ ಎಲ್ಲ ನಾಯಕರನ್ನು ಈ ಕೂಡಲೇ ಬೇಷರತ್ತಾಗಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಹೋರಾಟನಿರತ ಮಹಿಳಾ ಕುಸ್ತಿಪಟುಗಳು ನೀಡಿದ್ದ ಮಹಾ ಪಂಚಾಯತ್ ಕರೆಗೆ ಸ್ಪಂದಿಸಿ, ಬೆಂಬಲ ಸೂಚಿಸಲು ದೆಹಲಿಯ ಜಂತರ್ ಮಂತರ್ ಕಡೆಗೆ ತೆರಳುತ್ತಿದ್ದ ಹಲವು ಕಾರ್ಯಕರ್ತರು ಹಾಗೂ ಸಾಮಾಜಿಕ ಚಳವಳಿಯ ಪ್ರಮುಖ ನಾಯಕರನ್ನು ದೆಹಲಿ ಪೊಲೀಸರು ಬಂಧಿಸಿರುವುದು ಖಂಡನೀಯ ಎಂದು ಕಿಡಿಕಾರಿದರು.
ಒಂದೆಡೆ ಪ್ರಧಾನಮಂತ್ರಿ ನೂತನ ಸಂಸತ್ತಿನ ಕಟ್ಟಡವನ್ನು ಪ್ರಜಾತಂತ್ರದ ದೇವಸ್ಥಾನ ಎಂದು ಕರೆದು ಅದರ ಉದ್ಘಾಟನೆ ನಡೆಸಿದರು. ಆದರೆ ಆ ಕಟ್ಟಡದಿಂದ ಕೂಗಳತೆ ದೂರದಲ್ಲಿರುವ ಜಂತರ್ ಮಂತರ್‌ನಲ್ಲಿ ಕೇಂದ್ರ ಸರ್ಕಾರದ ಬೆಂಬಲಿತ ದೆಹಲಿ ಪೊಲೀಸ್ ಪ್ರಜಾತಂತ್ರದ ಹಕ್ಕುಗಳನ್ನು ದಮನಗೊಳಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟನಿರತ ಕುಸ್ತಿಪಟುಗಳನ್ನು ಬೆಂಬಲಿಸುವ ಉದ್ದೇಶದಿಂದ ಜಂತರ್ ಮಂತರ್‌ನಲ್ಲಿ ಮಹಿಳಾ ಮಹಾ ಪಂಚಾಯತ್ ಕರೆಯಲಾಗಿತ್ತು. ಈ ಬೃಹತ್ ಪ್ರತಿಭಟನೆಗೆ ಹಲವು ಸಾಮಾಜಿಕ ಕಾರ್ಯಕರ್ತರು ಹಾಗೂ ಪ್ರಮುಖ ನಾಯಕರು ಆಗಮಿಸುತ್ತಿದ್ದರು. ಪ್ರಜಾತಾಂತ್ರಿಕ ಹಕ್ಕುಗಳಿಗೆ ಕನಿಷ್ಠ ಗೌರವವನ್ನೂ ನೀಡದೆ, ಮಹಾಪಂಚಾಯತ್ ವಿಫಲಗೊಳಿಸುವ ದುರುದ್ದೇಶದಿಂದ ಪ್ರತಿಭಟನೆಗೆ ತೆರಳುತ್ತಿದ್ದ ಹಲವರನ್ನು ಬಂಧಿಸಿದೆ. ಕೆಲವರನ್ನು ಗೃಹಬಂಧನದಲ್ಲಿ ಇರಿಸಿದೆ ಎಂದು ದೂರಿದರು.
ಎಐಎಂಎಸ್‌ಎಸ್ ಜಿಲ್ಲಾ ಕಾರ್ಯದರ್ಶಿ ಜಿ.ಎಸ್.ಸೀಮಾ, ಜಂಟಿ ಕಾರ್ಯದರ್ಶಿ ಅಭಿಲಾಷಾ, ಎಐಡಿಎಸ್‌ಒ ಜಿಲ್ಲಾಧ್ಯಕ್ಷ ಸುಭಾಷ್, ಕಾರ್ಯದರ್ಶಿ ಚಂದ್ರಕಲಾ, ಕಾರ್ಯಕರ್ತರಾದ ಸ್ವಾತಿ, ನಿತಿನ್, ಚಂದನಾ, ಹೇಮಲತಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net