

ಆಲೂರು: ಸಾಮಾಜಿಕ ಹೊಣೆಯ ಜತೆಗೆ ಬದ್ಧತೆಯ ಬದುಕನ್ನು ಸಾಹಿತ್ಯದ ಸ್ವರೂಪದಲ್ಲಿ ಹಿಡಿದಿಡುವುದೇ ವಚನ ಸಾಹಿತ್ಯದ ವಿಶೇಷತೆ ಎಂದು ತೃತೀಯ ವಚನ ಸಾಹಿತ್ಯ ಸಮ್ಮೇಳನಾಧ್ಯಕ್ಷ, ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ.ಸತೀಶ್‌ಕುಮಾರ್ ಎಸ್.ಹೊಸಮನಿ ಅಭಿಪ್ರಾಯಪಟ್ಟರು.
ಬೆಂಗಳೂರು ನಗರದಲ್ಲಿರುವ ಪಶು ವೈದ್ಯಕೀಯ ಕಾಲೇಜು ಆವರಣದಲ್ಲಿರುವ ಅಲುಮ್ನಿ ಸಭಾಂಗಣದಲ್ಲಿ ಕರ್ನಾಟಕ ವಚನ ಸಾಹಿತ್ಯ ಪರಿಷತ್ ಹಾಗೂ ಬೆಂಗಳೂರು ಜಿಕೆವಿಕೆ ಅಲುಮ್ನಿ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ಮೂರನೇ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜೀವನದ ನಿತ್ಯ ಜಂಜಾಟಗಳು, ಸಮಸ್ಯೆಗಳು, ನೋವು-ನಲಿವು ಎಲ್ಲಕ್ಕೂ ವಚನ ಸಾಹಿತ್ಯದಲ್ಲಿ ಸಾಂತ್ವನವಿದೆ. ಆಧುನಿಕ ವಚನ ಸಾಹಿತ್ಯ ಉಗಮವಾದ 1880ರ ಕಾಲಘಟ್ಟದಲ್ಲಿ ಫ.ಗು. ಹಳಕಟ್ಟಿ ಅವರು ವಚನ ಸಾಹಿತ್ಯದ ಅಧ್ವಯರೆವೆನಿಸಿದರು. ಅವರ ಶ್ರಮದಿಂದಲೇ ನಮಗಿಂದು ವಚನ ಸಾಹಿತ್ಯ ಭಂಡಾರ ಲಭ್ಯವಾಗಿದೆ. ರಾಜ್ಯದಲ್ಲಿ ಖಾಸಗಿ ವಿದ್ಯಾಸಂಸ್ಥೆಗಳು ಕನ್ನಡ ಮಾಧ್ಯಮಗಳ ಪರವಾನಗಿ ಪಡೆದು ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನಾಗಿ ಪರಿವರ್ತಿಸಿಕೊಂಡು ನಾಡು ಮತ್ತು ಭಾಷೆಗೆ ದ್ರೋಹ ಎಸಗುತ್ತಿವೆ. ಆದ್ದರಿಂದ ಈ ಶಾಲೆಗಳನ್ನು ರಾಷ್ಟ್ರೀಕರಣಗೊಳಿಸಬೇಕೆಂದು ಒತ್ತಾಯಿಸಿದರು.
ಕರ್ನಾಟಕದಲ್ಲಿ ಒಟ್ಟು 689 ಗ್ರಂಥಾಲಯಗಳು ಕಾರ್ಯ ನಿರ್ವಹಿಸುತ್ತಿವೆ. ಕೋವಿಡ್, ಲಾಕ್‌ಡೌನ್ ಮತ್ತು ಸಂಕಷ್ಟದ ದಿನಗಳಲ್ಲಿ ಇಲಾಖೆಯು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಓದುವ ಸಂಸ್ಕೃತಿಯನ್ನು ಬೆಳೆಸಲು ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಸಾರ್ವಜನಿಕ ಗ್ರಂಥಾಲಯಗಳನ್ನು ತಂತ್ರಜ್ಞಾನ ಮತ್ತು ಡಿಜಿಟಲ್ ಮೂಲಸೌಕರ್ಯದೊಂದಿಗೆ ಆಧುನೀಕರಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಭಾರತ ದೇಶದಲ್ಲಿಯೇ ಪ್ರಪ್ರಥಮವಾಗಿ ಕೈಗೆತ್ತಿಕೊಂಡಿದೆ. ನಮ್ಮ ದೇಶದಲ್ಲಿಯೇ ದೊಡ್ಡ ಯೋಜನೆ ಇದಾಗಿದ್ದು, ಗ್ರಂಥಾಲಯಗಳನ್ನು ಡಿಜಿಟಲೀಕರಣಗೊಳಿಸಿ ಕಲಿಕೆಗೆ ಅವಕಾಶ ಒದಗಿಸಲಾಗಿದೆ. ಇದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ ಎಂದರು.
ಕೂಡಲಸಂಗಮ ಪೀಠಾಧ್ಯಕ್ಷ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 12ನೇ ಶತಮಾನದ ಶರಣರು ಕಟ್ಟ ಬಯಸಿದ್ದು ಸಮಾನತೆಯ ಸಮಾಜವನ್ನು. ಕಾಯಕ ತತ್ವ ಮತ್ತು ಜಾತಿರಹಿತ ಸಮಾಜದ ಹಿರಿಮೆಯನ್ನು ಸಾರುವ ವಚನಗಳ ಮೂಲಕ ಜನಮಾನಸವನ್ನು ತಿದ್ದಲು ಪ್ರಯತ್ನಿಸಿದರು. ಅಂತಹ ವಚನಗಳನ್ನು ಅರ್ಥಮಾಡಿಕೊಂಡರೆ ಬದುಕೂ ಅರ್ಥಪೂರ್ಣವಾಗುತ್ತದೆ ಎಂದರು.
ವಚನ ಸಾಹಿತ್ಯದ ಸಂಸ್ಥಾಪಕ ಎಂ.ವಿ ತ್ಯಾಗರಾಜ ಪ್ರಾಸ್ತವಿಕ ನುಡಿಗಳನ್ನಾಡಿದರು.
ಸಮ್ಮೇಳನ ಉದ್ಘಾಟನೆಗೂ ಮುನ್ನ ಸಮ್ಮೇಳನಾಧ್ಯಕ್ಷರನ್ನು ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಯಿತು. ನಂತರ ರಾಜ್ಯದ ನಾನಾ ಜಿಲ್ಲೆಗಳಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ನಂತರ ಸಮ್ಮೇಳನ ಅಧ್ಯಕ್ಷರ ಜತೆ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ ಸಾಹಿತಿಗಳಿಂದ ವಿಚಾರಗೋಷ್ಠಿ ನಡೆಸಲಾಯಿತು.
ನಿವೃತ್ತ ಎಎಸ್ ಅಧಿಕಾರಿ ಡಾ.ಸೋಮಶೇಖರ್, ಬೆಂಗಳೂರು ನಗರದ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರಕಾಶ್ ಮೂರ್ತಿ, ಹೆಬ್ಬಾಳು ಯುವ ಮುಖಂಡ ತಿರುಪತಯ್ಯ, ಮೆಗಾ ಮೈತ್ರಿ ಸಾಹಿತ್ಯ ಸಂಘ ಅಧ್ಯಕ್ಷ ರಮೇಶ್, ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಮಾಜಿ ಕಸಾಪ ಅಧ್ಯಕ್ಷ ಅಶೋಕ್ ಕುಮಾರ್, ರಾಜ್ಯ ವಚನ ಸಾಹಿತ್ಯ ಸಂಸ್ಥಾಪಕ ಸುಮಂಗಲಿ ಸುಶೀಲಮ್ಮ, ಹಿರಿಯ ಸಾಹಿತಿ ಪರಮೇಶ್ ಮಡಬಲು, ಎಂ.ವಿ.ಭಾಗ್ಯಾ, ಶಾಂತಾ ಅತ್ನಿ ಇತರರು ಇದ್ದರು .