

ಚಿತ್ರದುರ್ಗ: ಸಮಾಜದ ಸ್ವಾಸ್ಥ್ಯ ರಕ್ಷಣೆಯಲ್ಲಿ ಪತ್ರಿಕಾರಂಗದ ಪಾತ್ರ ಹಿರಿದಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ‌್ಯದರ್ಶಿ,ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್ ಹೇಳಿದರು.
ಜಿಲ್ಲಾ ಕಾರ‌್ಯನಿರತ ಪತ್ರಕರ್ತರ ಸಂಘದಿಂದ ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ‌್ಯಕ್ರಮ ಉದ್ಘಾಟಿಸಿ ಮಾತನಾಡಿ, ನ್ಯಾಯಾಂಗ, ಶಾಸಕಾಂಗ, ಕಾರ‌್ಯಾಂಗದಂತೆ ಪತ್ರಿಕಾ ರಂಗವೂ ದೇಶದ ಏಳಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದೆ.
ಸರ್ಕಾರ ತಪ್ಪುಗಳೆಡೆ ಸಾರ್ವಜನಿಕರನ್ನು ಜಾಗೃತಗೊಳಿಸುವ ಹೊಣೆಗಾರಿಕೆ ಪತ್ರಕರ್ತರ ಮೇಲಿದ್ದು, ಇಂಥ ಸನ್ನಿವೇಶದಲ್ಲಿ ಮಾನನಷ್ಟ ಮೊಕದ್ದಮೆ, ನ್ಯಾಯಾಲಯ ನಿಂದನೆ ಪ್ರಕರಣದಂಥ ಸವಾಲುಗಳನ್ನು ಪತ್ರಕರ್ತರು ಎದುರಿಸಬೇಕಾಗುತ್ತದೆ ಎಂದರು.
ದೇಶ ಕಾಯುವ ಸೈನಿಕರಂತೆ ಪತ್ರಕರ್ತನೂ ಸಾಮಾಜಿಕ ಸ್ವಾಸ್ಥ ರಕ್ಷಿಸುವ ಸೈನಿಕನಿದ್ದಂತೆ. ದೌರ್ಜನ್ಯ, ದಬ್ಬಾಳಿಕೆ, ಕಿರುಕುಳ ವಿರುದ್ಧ ಕಾನೂನು ಮೂಲಕ ರಕ್ಷಣೆ ಪಡೆಯುವ ಕುರಿತು ಮಾಧ್ಯಮಗಳು ಜನರಲ್ಲಿ ಅರಿವು ಮೂಡಿಸಬೇಕು. ಸುದ್ದಿ ಪ್ರಕಟಿಸುವ ಮುನ್ನ ಅದರ ಸೂಕ್ತ ಮಾಹಿತಿ ಮತ್ತು ದಾಖಲೆ ಸಂಗ್ರಹ ಮುಖ್ಯ. ಸತ್ಯ, ನಿಖರತೆ, ವಸ್ತುನಿಷ್ಠತೆ ಮೈಗೂಡಿಸಿಕೊಂಡರೆ ಸಮಸ್ಯೆಗಳನ್ನು ಎದುರಿಸುವ ಸಂದರ್ಭ ಬರದು. ಪತ್ರಿಕಾ ಸ್ವಾತಂತ್ರ್ಯದ ದಮನ ಪ್ರಜಾಪ್ರಭುತ್ವದ ಮೇಲೆ ಹಲ್ಲೆ ನಡೆಸಿದಂತೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಪತ್ರಕರ್ತರ ಜವಾಬ್ದಾರಿಗಳ ಕುರಿತಂತೆ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ತಿಳಿಸಿದೆ ಎಂದರು.
ಮಾನನಷ್ಟ ಮೊಕದ್ದಮೆ ಹಾಗೂ ನ್ಯಾಯಾಂಗ ನಿಂದನೆ ಎಂಬ ಕುರಿತು ಉಪನ್ಯಾಸ ನೀಡಿದ ಪತ್ರಕರ್ತ, ವಕೀಲ ಎಂ.ವಿ.ರೇಣಸಿದ್ದಯ್ಯ, ಮಾನ ಹಾನಿಯಾಗಿದೆ ಎಂದು ಆರೋಪಿಸಿ ಶೇ.10-20 ಜನರು ನ್ಯಾಯಾಲಯದ ಮೊರೆ ಹೋಗುತ್ತಾರೆ. ಇವರಲ್ಲಿ ಕೆಲವರು ಮುಂದುವರಿದರೆ, ಇನ್ನೂ ಕೆಲವರು ನ್ಯಾಯಸಿಗುವವರೆಗೂ ಹೋರಾಡುತ್ತಾರೆ. ನ್ಯಾಯಾಂಗಕ್ಕೆ ಸಂಬಂಧಿಸಿದ ಸುದ್ದಿಗಳಿಗೆ ಪೂರಕ ದಾಖಲೆಗಳಿರಬೇಕೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಎಂ.ಎನ್.ಅಹೋಬಲಪತಿ, ಪತ್ರಕರ್ತನಿಗೆ ಕಾನೂನಿನ ಅರಿವು ಕೂಡ ಮುಖ್ಯ. ಸುದ್ದಿ ಪ್ರಕಟಿಸುವ ಮೂಲಕ ಮಾನನಷ್ಟ ಪ್ರಕರಣವನ್ನು ಎದುರಿಸುವಂತಾಗಬಾರದು. ನ್ಯಾಯಾಂಗ ನಿಂದನೆ ಆಗದಂತೆ ಸುದ್ದಿ ಪ್ರಕಟಿಸುವ ಚಾಣಾಕ್ಷತನ ಹೊಂದಿರಬೇಕಾಗುತ್ತದೆ ಎಂದರು.
ಸಂಘದ ಜಿಲ್ಲಾಧ್ಯಕ್ಷ ಬಿ.ದಿನೇಶ್ ಗೌಡಗೆರೆ ಅಧ್ಯಕ್ಷತೆ ವಹಿಸಿದ್ದರು. ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಬಿ.ವಿ.ತುಕಾರಾಂ ರಾ ವ್, ಎಸ್‌ಜೆಎಂ ಕಾನೂನು ಕಾಲೇಜು ಪ್ರಾಧ್ಯಾಪಕಿ ಸುಮನಾ ಅಂಗಡಿ ಇದ್ದರು. ನಿಹಾರಿಕ ಪ್ರಾರ್ಥಿಸಿದರು, ವಿನಾಯಕ ಸ್ವಾಗತಿಸಿದರು. ನಾಕೀಕೆರೆ ತಿಪ್ಪೇಸ್ವಾಮಿ ನಿರೂಪಿಸಿದರು.
---