

ಹನೂರು: ಮಹಿಳೆಯರ ಸಬಲೀಕರಣದೊಂದಿಗೆ ಹಲವು ಸಾಮಾಜಿಕ ಸೇವಾ ಕಾರ್ಯಗಳಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಶಾಸಕ ಆರ್. ನರೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ತಾಲೂಕು ಯೋಜನಾ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಹನೂರು ಭಾಗದಲ್ಲಿ ಈ ಹಿಂದೆ ಮಹಿಳೆಯರು ಸ್ವ ಸಹಾಯ ಸಂಘವನ್ನು ರಚಿಸಿಕೊಂಡಿದ್ದರು. ಆದರೆ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತಿರಲಿಲ್ಲ. ಆದರೀಗ ಈ ಸಂಸ್ಥೆಯು ಸ್ವ ಸಹಾಯ ಸಂಘವನ್ನು ರಚಿಸಿದ್ದು, ಪ್ರಸ್ತುತ ತಾಲೂಕಿನಲ್ಲಿ 2,200 ಸಂಘಗಳಿವೆ. ಮಹಿಳಾ ಸಂಘಗಳಿಗೆ ಸಂಸ್ಥೆಯು ಚೈತನ್ಯದ ಚಿಲುಮೆಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು
ಗ್ರಾಮೀಣಾಭಿವೃದ್ಧಿಯ ಸಂಕಲ್ಪ: ಧರ್ಮಸ್ಥಳ ಸಂಸ್ಥೆಯು ಮಹಿಳಾ ಸಂಘಗಳನ್ನು ಅಭಿವೃದ್ಧಿ ಪಡಿಸುವುದರ ಜತೆಗೆ ಗ್ರಾಮೀಣಾಭಿವೃದ್ಧಿಯ ಸಂಕಲ್ಪನ್ನೂ ಹೊಂದಿದೆ. ಈ ನಿಟ್ಟಿನಲ್ಲಿ ಹಾಲು ಉತ್ಪಾದಕರ ಸಂಘಗಳ ಅಭಿವೃದ್ಧಿಗೆ ಪೂರಕವಾಗಿ ಪ್ರೋತ್ಸಾಹಧನ, ಕೆರೆಗಳ ಪುರುಶ್ಚೇತನ, ಸ್ವ ಉದ್ಯೋಗಗಳಿಗೆ ಸಹಾಯಧನ, ಸ್ವಚ್ಛತಾ ಕಾರ್ಯಕ್ರಮ, ದೇಗುಲಗಳ ಜೀರ್ಣೋದ್ಧಾರಕ್ಕೆ ಸಹಾಯಧನ, ರೈತರಿಗೆ ತರಬೇತಿ, ಪ್ರವಾಸ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಕೈಗೊತ್ತಿಕೊಂಡಿದೆ. ಇದರಿಂದ ಜನತೆಗೆ ಅನುಕೂಲವಾಗುತ್ತಿದೆ ಎಂದು ಹೇಳಿದರು.
ಮಾಜಿ ಶಾಸಕಿ ಪರಿಮಳಾ ನಾಗಪ್ಪ ಮಾತನಾಡಿ, ಡಾ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಸಂಸ್ಥೆಯು ಸಮಾಜಕ್ಕೆ ಸೇವೆ ಒದಗಿಸುವ ನಿಟ್ಟಿನಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಹಿಂದುಳಿದ ಗ್ರಾಮಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಗ್ರಾಮಗಳನ್ನು ದತ್ತು ಪಡೆಯಲಾಗುತ್ತಿದ್ದು, ಈ ಸೇವಾ ಕಾರ್ಯ ಹನೂರಿಗೂ ವಿಸ್ತರಣೆಯಾಗಲಿ. ಇದರಿಂದ ಅನುಕೂಲವಾಗಲಿದೆ ಎಂದು ತಿಳಿಸಿದರು.
ಸಂಸ್ಥೆಯ ಕಾರ್ಯ ನಿರ್ವಹಣಾಧಿಕಾರಿ ಡಾ.ಮಂಜುನಾಥ್ ಮಾತನಾಡಿ, ಹನೂರು ಹಾಗೂ ಕೊಳ್ಳೇಗಾಲ ತಾಲೂಕಿನಲ್ಲಿ 11 ವರ್ಷಗಳಿಂದ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಆದರೆ ಹನೂರಲ್ಲಿ ಯೋಜನಾ ಕಚೇರಿ ಸ್ಥಾಪಿಸಲು ಸಾಧ್ಯವಾಗಿರಲಿಲ್ಲ. ಅದಾಗ್ಯೂ ಕೆಲಸ ಕಾರ್ಯಗಳು ಕೊಳ್ಳೇಗಾಲ ಕಚೇರಿಯಿಂದ ನಿರ್ವಹಿಸಲಾಗುತ್ತಿತ್ತು. ಇದೀಗ ಹನೂರಿನಲ್ಲಿ ಕಚೇರಿ ತೆರೆಯಲಾಗಿದ್ದು, ಕಾರ್ಯ ನಿರ್ವಹಣೆಗೆ ಅನುಕೂಲವಾಗಿದೆ ಎಂದು ಹೇಳಿದರು.
ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಜಯರಾಮ್ ನೆಲ್ಲಿಕಾಯ, ಜಿಲ್ಲಾ ನಿರ್ದೇಶಕಿ ಲತಾ ಬಂಗೇರಾ, ತಾಲೂಕು ಯೋಜನಾಧಿಕಾರಿ ಪ್ರವೀಣ್‌ಕುಮಾರ್ ಇತರರಿದ್ದರು.