ಸಾಮಾಜಿಕ ಸಮಸ್ಯೆಗಳಿಗೆ ಬೇಕಿದೆ ಪರಿಹಾರ

CTD SAMMELANA....
Published on

ಚಿತ್ರದುರ್ಗ:ದೇಶದ ಭವಿಷ್ಯಕ್ಕೆ ಸಮಾಜ ಶಾಸ್ತ್ರಜ್ಞರ ಅಗತ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಹೇಳಿದರು.

ಕರ್ನಾಟಕ ಸಮಾಜ ಶಾಸ್ತ್ರ ಸಂಘ, ಚಳ್ಳಕೆರೆ ಎಚ್‌ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದಾವಣಗೆರೆ ವಿವಿ ಸಮಾಜಶಾಸ್ತ್ರ ಶಿಕ್ಷಕರ ಸಂಘ, ಕಾಲೇಜು ಪ್ರಾಧ್ಯಾಪಕರ ಸಂಘದ ಸಹಯೋಗದೊಂದಿಗೆ ನಗರದ ಸರ್ಕಾರಿ ಕಲಾ ಕಾಲೇಜಿನ ಡಾ.ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ 16ನೇ ರಾಷ್ಟ್ರೀಯ ಸಮಾಜಶಾಸ್ತ್ರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಸಮಾಜ ಶಾಸ್ತ್ರಜ್ಞರಿಂದ ದೇಶದಲ್ಲಿ ಬದಲಾವಣೆ ಸಾಧ್ಯ. ವಿದ್ಯಾರ್ಥಿಗಳಿಗೆ ಸಮಾಜಶಾಸ್ತ್ರದ ಮಹತ್ವದ ಬಗ್ಗೆ ಮನವರಿಕೆ ಮಾಡಿಕೊಡುವ ಜವಾಬ್ದಾರಿ ಉಪನ್ಯಾಸಕರು, ಪ್ರಾಧ್ಯಾಪಕರ ಮೇಲಿದೆ. ದಿನ ಬೆಳಗಾದರೆ ಭ್ರಷ್ಟಾಚಾರ, ಅಪರಾಧ ಸುದ್ದಿಗಳನ್ನು ನೋಡುತ್ತಿದ್ದೇವೆ. ಮಕ್ಕಳಿಗೆ ಶಿಕ್ಷಣದ ಜತೆ ಸಂಸ್ಕಾರ, ಗುರು-ಹಿರಿಯರನ್ನು ಗೌರವಿಸುವ ಹಾಗೂ ಯಾವ ರೀತಿ ಬದುಕಬೇಕೆನ್ನುವ ಕುರಿತು ಜಾಗೃತಿ ಮೂಡಿಸಬೇಕಿದೆ ಎಂದರು.

ದಾವಣಗೆರೆ ವಿವಿ ಕುಲಪತಿ ಪ್ರೊ.ಬಿ.ಡಿ. ಕುಂಬಾರ್ ಮಾತನಾಡಿ, ಸಮಾಜದಲ್ಲಿನ ಪ್ರತಿಯೊಂದು ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಪರಿಹಾರ ಕಂಡುಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ. ಸಮಾಜಶಾಸ್ತ್ರವನ್ನು ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣದಲ್ಲೂ ಕಲಿಸಬೇಕಿದೆ ಎಂದು ಹೇಳಿದರು.

ಸಮಾಜ ಶಾಸ್ತ್ರಜ್ಞರನ್ನು ಸಮಾಜದ ಉದ್ಧಾರಕರೆಂದು ಕರೆಯಬೇಕಾಗಿದೆ. ಸಾಮಾಜಿಕ ಸಮಸ್ಯೆಗಳ ಕುರಿತು ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಹೊಣೆಗಾರಿಕೆ ಪ್ರಾಧ್ಯಾಪಕರು ಹಾಗೂ ಉಪನ್ಯಾಸಕರ ಮೇಲಿದೆ ಎಂದು ತಿಳಿಸಿದರು.

ಪಠ್ಯದೊಂದಿಗೆ ಸಾಮಾಜಿಕ ಸಮಸ್ಯೆಗಳ ಕುರಿತಂತೆ ಮಕ್ಕಳಿಗೆ ಬೋಧಿಸಬೇಕು. ಭ್ರಷ್ಟಾಚಾರ, ನಿರುದ್ಯೋಗ ಮೊದಲಾದ ಸಾಮಾಜಿಕ ಸಮಸ್ಯೆಗಳಿಗೆ ಸಮಾಜಶಾಸ್ತ್ರ ವಿಜ್ಞಾನಿಗಳು ಪರಿಹಾರ ಕಂಡುಕೊಳ್ಳಬೇಕಿದೆ. ಸ್ನಾತಕ, ಸ್ನಾತಕೋತ್ತರ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದ್ದು, ಈ ನಿಟ್ಟಿನಲ್ಲಿ ಸಮ್ಮೇಳನದ ನಿರ್ಣಯವನ್ನು ಸರ್ಕಾರಕ್ಕೆ ಕಳಿಸುವಂತೆ ಸಲಹೆ ನೀಡಿದರು.

ಸಾವಿತ್ರಿಬಾಯಿ ಪುಲೆ ಪುಣೆ ವಿವಿ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ. ಶೃತಿ ತಾಂಬೆ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪ್ರಜಾ ಪ್ರಭುತ್ವದಲ್ಲಿ ಎಲ್ಲರಿಗೂ ಸಮಾನತೆ ನೀಡಿರುವುದರಿಂದ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ಸಿಕ್ಕಿದೆ. ಸಮಾಜಶಾಸ್ತ್ರವು ಸಮಾಜದ ಸತ್ಯ ಹಾಗೂ ಅಡಿಪಾಯವಿದ್ದಂತೆ ಎಂದರು.

ಸರ್ಕಾರಿ ಕಲಾ ಕಾಲೇಜು ಪ್ರಾಚಾರ‌್ಯ ಬಿ.ಟಿ. ತಿಪ್ಪೇರುದ್ರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಚಳ್ಳಕೆರೆ ಎಚ್‌ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ‌್ಯ ಬಿ.ಎಸ್. ಮಂಜುನಾಥ, ಕರ್ನಾಟಕ ಸಮಾಜಶಾಸ್ತ್ರ ಸಂಘದ ಅಧ್ಯಕ್ಷೆ ಪ್ರೊ.ಎಸ್. ಜಯಶ್ರೀ, ಕಾರ‌್ಯದರ್ಶಿ ಡಾ. ಆದಿನಾರಾಯಣಪ್ಪ, ಸಂಘಟನಾ ಕಾರ‌್ಯದರ್ಶಿ ಡಾ.ಎಸ್.ಆರ್. ಲೇಪಾಕ್ಷ, ಸಹ ಸಂಘಟನಾ ಕಾರ‌್ಯದರ್ಶಿ ಡಾ.ಟಿ. ಶ್ಯಾಮರಾಜ್, ಐಕ್ಯೂಎಸಿ ಕೋ-ಆರ್ಡಿನೇಟರ್ ಪ್ರೊ.ಆರ್. ತಾರಿಣಿ ಶುಭದಾಯಿನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net