

ಕೊಳ್ಳೇಗಾಲ: ಸಾಮಾಜಿಕ ಮಾಧ್ಯಮಗಳಲ್ಲಿ ಹೆಣ್ಣು ಮಕ್ಕಳು ಎಚ್ಚರ ವಹಿಸದಿದ್ದರೆ ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿದೆ ಎಂದು ಪಟ್ಟಣ ಪೊಲೀಸ್ ಠಾಣೆ ಅಪರಾಧ ವಿಭಾಗದ ಸಬ್‌ಇನ್ಸ್‌ಪೆಕ್ಟರ್ ಉಮಾವತಿ ಹೇಳಿದರು.
ಪಟ್ಟಣದ ಎಸ್‌ವಿಕೆ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ಮಾನವ ಕಳ್ಳ ಸಾಗಣೆ ತಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇತ್ತೀಚೆಗೆ ಹೆಚ್ಚಾಗಿ ಹೆಣ್ಣು ಮಕ್ಕಳು ಶೋಷಣೆಗೆ ಒಳಗಾಗುತ್ತಿದ್ದಾರೆ. ಸೈಬರ್ ಕ್ರೈಂ ಪ್ರಕರಣಗಳೂ ಹೆಚ್ಚಾಗುತ್ತಿವೆ. ಮೊಬೈಲ್ ಬಳಕೆ ಮಾಡುವಾಗ ಎಚ್ಚರ ವಹಿಸಬೇಕು. ಸಾಮಾಜಿಕ ಮಾಧ್ಯಮಗಳ ಬಳಕೆಯಲ್ಲಿ ಅನುಕೂಲ, ಅನನುಕೂಲಗಳನ್ನು ಚಿಂತನೆ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಚಿನ್ನದಂಥ ವಿದ್ಯಾರ್ಥಿ ಜೀವನವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಾನವ ಕಳ್ಳ ಸಾಗಣೆ ತಡೆಗಟ್ಟುವ ಬಗ್ಗೆ ಮಾಹಿತಿ ನೀಡಿದ ಅವರು, ಪೊಲೀಸ್ ಇಲಾಖೆ ಸದಾ ರಕ್ಷಣೆಗಿದ್ದು, ಅಪಾಯಕ್ಕೆ ಸಿಲುಕುವ ಸನ್ನಿವೇಶ ಬಂದರೆ 112ಕ್ಕೆ ಕರೆ ಮಾಡಿ ಎಂದು ಕಿವಿಮಾತು ಹೇಳಿದರು.
ಎಸ್‌ವಿಕೆ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಚ್.ಶ್ರೀಧರ್, ಉಪನ್ಯಾಸಕ ಅಲೆಕ್ಸಾಂಡರ್, ದಿನೇಶ್ ಕುಮಾರ್, ಶಾಂತರಾಜು ಇತರರು ಇದ್ದರು.