

ಸರಗೂರು: ಇಂದಿನ ಯುವಜನತೆ ಪುಸ್ತಕಕ್ಕೆ ಸೀಮಿತವಾಗಿದ್ದಾರೆ. ಸಮಾಜದಲ್ಲಿನ ವಿಚಾರಗಳನ್ನು ಅರಿಯುವುದರ ಜತೆಗೆ ಕಾನೂನು ಸುರಕ್ಷತೆ, ಪಾಲನೆ, ಸಾಮಾಜಿಕ ಜವಾಬ್ದಾರಿಗಳನ್ನು ರೂಢಿಸಿಕೊಳ್ಳಬೇಕು ಸರಗೂರು ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಪ್ರಸನ್ನ ಕುಮಾರ್ ಸಲಹೆ ನೀಡಿದರು.
ಪಟ್ಟಣದ ಜೆಎಸ್‌ಎಸ್ ಶಿವಾನುಭವ ಮಂಗಳ ಮಂಟಪದಲ್ಲಿ ಶುಕ್ರವಾರ ಜೆಎಸ್‌ಎಸ್ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪ್ರಥಮ ಪಿಯುಸಿ ವಿದ್ಯಾರ್ಥಿನಿಯರಿಗೆ ಆಯೋಜಿಸಿದ್ದ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿನಿಯರು ತಮಗೆ ಎದುರಾಗುವ ತೊಂದರೆಗಳಿಂದ ಜೋಪಾನವಾಗಿ ಪಾರಾಗಬೇಕು. ಸಾಮಾಜಿಕ ಮಾಧ್ಯಮಗಳನ್ನು ಬಳಸುವಾಗ ಎಚ್ಚರದಿಂದರಬೇಕು. ವಿದ್ಯಾರ್ಥಿನಿಯರ ಸುರಕ್ಷತೆಗೆ ಪೊಲೀಸ್ ಇಲಾಖೆ ಯಾವಾಗಲೂ ಸಿದ್ಧವಿದೆ ಎಂದು ತಿಳಿಸಿದರು.
ಸರಗೂರು ಸಮುದಾಯದ ಆರೋಗ್ಯ ಕೇಂದ್ರ ಸ್ತ್ರೀರೋಗ ತಜ್ಞೆ ಭಾಗ್ಯಲಕ್ಷ್ಮೀ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶ್ರೀಗಳ ಆಶೀರ್ವಾದದಿಂದ ಪದವಿ ಪೂರ್ವ ಕಾಲೇಜು ನಡೆಯುತ್ತಿದೆ. ಈ ಕಾಲೇಜಿನಲ್ಲಿ ಉತ್ತಮ ಕಲಿಕಾ ವಾತಾವರಣವಿದ್ದು ಉತ್ತಮ ಶಿಕ್ಷಣವನ್ನು ಪಡೆದುಕೊಂಡು ವಿದ್ಯಾರ್ಥಿನಿಯರು ಸ್ವಾವಲಂಬಿಗಳಾಗಿ ಬದುಕಬೇಕು. ಸಾಮಾಜಿಕ ಮಾಧ್ಯಮಗಳಿಂದ ದೂರವಿದ್ದು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.
ಪ್ರಾಂಶುಪಾಲ ಕೆ.ಎಸ್.ಮಹದೇವಸ್ವಾಮಿ ಮಾತನಾಡಿ, ಮನಸ್ಸಿನ ಆಕರ್ಷಣೆಗಳು ತಾತ್ಕಾಲಿಕವಾಗಿದ್ದು ಅವುಗಳ ಹಿಂದೆ ಹೋದವರು ಜೀವನದಲ್ಲಿ ನೊಂದಿರುವ ನಿದರ್ಶನಗಳು ಹೆಚ್ಚಾಗಿವೆ. ಕಾಲೇಜು ಸಂದರ್ಭದಲ್ಲಿ ಉತ್ತಮ ಸ್ನೇಹ ಗಳಿಸಿಕೊಂಡು ಶೈಕ್ಷಣಿಕ ಪ್ರಗತಿ ಸಾಧಿಸಿದರೆ ಉತ್ತಮ ಜೀವನ ರೂಪಿಸಿಕೊಳ್ಳಬಹುದು ಎಂದರು.
ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಉಪನ್ಯಾಸಕರು ಭಾಗವಹಿಸಿದ್ದರು.